ಮಾನವನ ಜೀವನದಲ್ಲಿ ದೀಕ್ಷೆ ಎನ್ನುವಂಥದ್ದು ಪ್ರಮುಖ ಘಟ್ಟ

ಸಾಣೇಹಳ್ಳಿ, 29:  ಇಲ್ಲಿನ ಶ್ರೀಮಠದಲ್ಲಿ ನಡೆದ ತಿಂಗಳ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶ್ರೀಗಳು  ಮಾನವನ ಜೀವನದಲ್ಲಿ ದೀಕ್ಷೆ ಎನ್ನುವಂಥದ್ದು ಪ್ರಮುಖ ಘಟ್ಟ. ಸಾಮಾನ್ಯವಾಗಿ ನಡೆಯಬೇಕಾದದ್ದು ದೀಕ್ಷೆ ತಾಯಿಯ ಗರ್ಭದಿಂದ ಪ್ರಾರಂಭವಾಗಿ ನಂತರ ಬೇರೆ ಬೇರೆ ಹಂತಗಳನ್ನು ತಲುಪುವುದು. ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಒಬ್ಬ ತಾಯಿ  ಗರ್ಭಿಣಿಯಾದ ಏಳು ತಿಂಗಳಲ್ಲಿ ಸೀಮಂತ ಕಾರ್ಯ ಮಾಡ್ತಾರೆ. ಆದರೆ ಅದನ್ನು ಲಿಂಗಾಯತ ಧರ್ಮದಲ್ಲಿ ಸೀಮಂತ ಕಾರ್ಯ ಅಂತ ಹೇಳದೇ ಗರ್ಭಧಾರಣಾ ಸಂಸ್ಕಾರ ಅಂತ ಕರೆಯುವರು. ಅಲ್ಲಿಂದಲೇ ಮಗುವಿಗೆ ಸಂಸ್ಕಾರ ಪ್ರಾರಂಭವಾಗಬೇಕು ಎನ್ನುವಂಥದ್ದು ಲಿಂಗಾಯತ ಧರ್ಮದ ಆಶಯ.  

ಸಾಮಾನ್ಯವಾಗಿ ನಾವೆಲ್ಲರೂ ದೇವರಲ್ಲಿ ನಂಬಿಕೆಯನ್ನು ಇಟ್ಟಂಥವರು. ಆ ದೇವರು ಎಲ್ಲಿದ್ದಾನೆ ಎಂದು ಕೇಳಿದರೆ ಯಾವುದೊ ಒಂದು ಮಠ, ದೇವಸ್ಥಾನ, ಧಾರ್ಮಿಕ ಕೇಂದ್ರ ಅಂತ ಹೇಳ್ತೀವಿ. ಶರಣರು ಇದನ್ನು ಒಪ್ಪದೇ ಭಗವಂತ ನಿಮ್ಮೊಳಗಡೆಯೇ ದೇವರಿರುವನು. ಅವನು ವಿಶ್ವವ್ಯಾಪಿಯಾಗಿದ್ದಾನೆ ಎಂದು ಹೇಳಿ ಅಂಗೈಯೊಳಗೆ ಇಷ್ಟಲಿಂಗವನ್ನು ಕರುಣಿಸಿದರು. ಗುಡಿಯಲ್ಲಿರುವ ದೇವರಿಗೆ ಚಲಿಸುವುದಿಲ್ಲ, ಚೈತನ್ಯವಿಲ್ಲ. ಜಡವಾದದ್ದು. ತಕ್ಷಣ ನೀವೆಲ್ಲರೂ ಇಷ್ಟಲಿಂಗಕ್ಕೂ ಚೈತನ್ಯವಿಲ್ಲ, ಓಡಾಡುವುದಿಲ್ಲ ಅಂತ ಕೇಳಬಹುದು. ಆದರೆ ಇಷ್ಟಲಿಂಗ ನಮಗೆ ಸ್ಪರ್ಷ ಆಗುವುದರಿಂದ ಆ ಲಿಂಗವೂ ಚೈತನ್ಯವನ್ನು ಪಡೆದುಕೊಂಡಿದೆ. ಹಾಗಾಗಿ ಇಷ್ಟಲಿಂಗವನ್ನು ಜಂಗಮಲಿಂಗ ಎಂದು ಕರೆದರೆ ಗುಡಿಯಲ್ಲಿರುವ ಲಿಂಗವನ್ನು ಸ್ಥಾವರಲಿಂಗ ಎಂದು ಕರೆಯುವರು. ಹಾಗಾಗಿಯೇ ಶರಣರು ಗುಡಿಯನ್ನು ಬಹಿಷ್ಕಾರ ಮಾಡಿದರು. ಯಾಕೆಂದರೆ ಗುಡಿಯ ದೇವರ ಹೆಸರಿನಲ್ಲಿ ಪೂಜಾರಿ-ಪುರೋಹಿತರು ಅನೇಕ ರೀತಿಯ ಶೋಷಣೆ ಮಾಡುತ್ತಿದ್ದರು. ಗುಡಿಯಲ್ಲಿರುವ ದೇವರು ವರ ಕೊಡುವ ಹಾಗೂ ಶಾಪ ಕೊಡುವ ಶಕ್ತಿ ಹೊಂದಿಲ್ಲ. ನಿಜವಾಗಿ ದೇವರು ವರ ಹಾಗೂ ಶಾಪಕೊಡುತ್ತದೆ ಎಂದು ಹೇಳುವವರು ಗುಡಿಯಲ್ಲಿರುವ ಪೂಜಾರಿ ಪುರೋಹಿತರು.  

ದೇವರು ಮತ್ತು ಭಕ್ತನ ಮಧ್ಯೆ ಪೂಜಾರಿಯ ಅಗತ್ಯವಿಲ್ಲ ಎಂದು ಇಷ್ಟಲಿಂಗವನ್ನು ಕರುಣಿಸಿ ನಿಷ್ಠೆಯಿಂದ ಪೂಜೆ ಮಾಡಬೇಕೆಂದು ಶರಣರು ಹೇಳಿದರು. ಇಷ್ಟಲಿಂಗ ದೀಕ್ಷೆಯನ್ನು ಪಡೆದುಕೊಂಡ ನಂತರ ಹೊರಗಿನ ಗುಡಿಯ ವ್ಯಾಮೋಹವನ್ನು ಬಿಟ್ಟು  ದೇಹವನ್ನೇ ಗುಡಿಯನ್ನಾಗಿ ಮಾಡಿಕೊಂಡು ಶರಣಸತಿ-ಲಿಂಗಪತಿ ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು. ಮನುಷ್ಯನ ದೇಹ ಚರಂಡಿಯಾಗದೇ ಪವಿತ್ರ ದೇವವಾಗಬೇಕು. ವೃಥಾ ಕೆಡಿಸಿಕೊಳ್ಳಬಾರದು. ಹಾಗಾಗಿ ದೇಹದ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಲಿಕ್ಕೆ ಇಷ್ಟಲಿಂಗ ಪೂಜೆ ಸಹಕಾರಿ.  

ನಮಗೆ ಅನೇಕ ರೀತಿಯ ಪರಂಪರೆಯಿಂದ ವೈದಿಕ ಆಚರಣೆಗಳು ಮಾಡುತ್ತಾ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಆ ಭ್ರಮೆಯಿಂದ ಹೊರಬೇಕು ಎನ್ನುವುದು ಶರಣರ ಉದ್ದೇಶವಾಗಿತ್ತು. ಹಾಗಾಗಿ ಬಸವಣ್ಣನವರು ಅಂಗೈಯೊಳಗೆ ಲಿಂಗಯ್ಯನನ್ನು ಕೊಟ್ಟು ಲಿಂಗಾಯತ ಧರ್ಮ ಹುಟ್ಟಿಗೆ ಕಾರಣರಾದರು. ಅದಕ್ಕೆ ಬಸವಣ್ಣನವರನ್ನು ವಿಶ್ವಗುರು ಅಂತ ಕರೆದರು.  

ಬಸವಣ್ಣನವರು ಹೇಳಿದಂತೆ ಏಳು ಸೂತ್ರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಂಡಾಗ ಮಾತ್ರ ದೇವರನ್ನು ಸುಲಭವಾಗಿ ಒಲಿಸಿಕೊಳ್ಳಬಹುದು. ಆಗ ನಮ್ಮ ಅಂತರಂಗ ಮತ್ತು ಬಹಿರಂಗ ಶುದ್ಧಿಯಾಗಲಿಕ್ಕೆ ಸಾಧ್ಯ. ನಮ್ಮಲ್ಲೂ ಶಿವಚೈತನ್ಯವಿದೆ. ಆ ಶಿವಚೈತನ್ಯವನ್ನು ಕಾಣಲಿಕ್ಕೆ ಇಷ್ಟಲಿಂಗ ಒಂದು ಸಹಕಾರಿ. ಇಷ್ಟಲಿಂಗ ಪೂಜೆ ಮಾಡ್ತಾ ಮಾಡ್ತಾ ನಮ್ಮೊಳಗಡೆ ಚೈತನ್ಯವಿದೆ ಎಂದು ಕಂಡುಕೊಳ್ಳಬೇಕು. ಆ ಚೈತನ್ಯದ ಕುರುಹು ಇಷ್ಟಲಿಂಗ. ಇಷ್ಟಲಿಂಗವನ್ನು ನಿಷ್ಠೆಯಿಂದ ಪೂಜೆ ಮಾಡುತ್ತಾ ಹೋದರೆ ನಮ್ಮ ಬದುಕು ಅರಳುತ್ತಾ ಹೋಗುತ್ತೆ.  

ಜನರನ್ನು ದಾರಿತಪ್ಪಿಸುವಂಥವು ಗುಡಿ-ಗುಂಡಾರಗಳು. ನಿನ್ನೆ ಬ್ಯಾಡಗಿ ತಾಲ್ಲೂಕಿನ ಗುಂಡೇನಹಳ್ಳಿ ಗ್ರಾಸ್ ಬಳಿ ನಡೆದ ಭೀಕರ ಅಪಘಾತದಲ್ಲಿ 13ಜನ ಸಾವನ್ನೊಪ್ಪಿದ್ದು ನಮಗೆ ತುಂಬಾ ದುಃಖ ತಂದಿದೆ. ಹೊಸದಾಗಿ ವಾಹನ ಕೊಂಡಾಗ ಮನೆಯವರೆಲ್ಲಾ ದೇವರ ದರ್ಶನಕ್ಕೆ ಹೋಗಬೇಕು ಅಂತ ಹೇಳಿ ಸವದತ್ತಿ ಎಲ್ಲಮ್ಮ  ಮುಂತಾದ ದೇವರ ದರ್ಶನ ಪಡೆದುಕೊಂಡು ವಾಪಾಸ್ ಬರುವಾಗ ಅಫಘಾತಕ್ಕೀಡಾಗಿ ಭದ್ರಾವತಿ ತಾಲ್ಲೂಕಿನ ಎಮ್ಮಿಹಟ್ಟಿಯ ಒಂದೇ ಕುಟುಂಬದ 13ಜನರು ಸಾವನ್ನೊಪ್ಪಿದರು. ಹಾಗಾದರೆ ದರ್ಶನ ಪಡೆದ ದೇವರು 13 ಜನರ ಜೀವನ್ನು ಕಾಪಾಡಿದ್ನಾ? ಖಂಡಿತಾ ಇಲ್ಲ. ದೇವರು ಅಲ್ಲೆಲ್ಲೋ ಇದಾನೆ ಅಂತ ಹೋಗಿದ್ದು ನಿಮ್ಮ ತಪ್ಪು. ನನ್ನೊಳಗಡೆಯೇ ದೇವರಿದ್ದಾನೆ ಎಂದು ತಿಳಿದುಕೊಂಡಿದ್ದರೆ 13 ಜನರ ಪ್ರಾಣಾಪಯದಿಂದ ಪಾರಾಗುತ್ತಿದ್ದರು.  

ಇತ್ತೀಚಿಗೆ ಮಾಧ್ಯಮಗಳಲ್ಲಿ ಬರುವ ಘಟನೆಗಳನ್ನು ನೋಡಿದರೆ ಅಸಹ್ಯವಾಗಿತ್ತದೆ. ಕಾರಣ ಅವರಿಗೆ ಅನೇಕ ಜನರಿಗೆ ಚಿಕ್ಕ ವಯಸ್ಸಿನಲ್ಲಿ ಒಳ್ಳೆಯ ಸಂಸ್ಕಾರ ಬಂದಿದರೆ ಈ ರೀತಿಯ ಅವಾಂತರಗಳಿಗೆ ಒಳಗಾಗುತ್ತಿರಲಿಲ್ಲ. ಹಾಗಾಗಿಯೇ ಮನುಷ್ಯನಿಗೆ ಇಷ್ಟಲಿಂಗದೀಕ್ಷೆ ಎನ್ನುವಂಥದ್ದು ಸಂಸ್ಕಾರ ಕೊಟ್ಟು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗುವಂಥದ್ದು ಎಂದರು. ಇಷ್ಟಲಿಂಗ ಲಿಂಗದೀಕ್ಷೆ ಪಡೆದುಕೊಳ್ಳುವವರಿಗೆ ಲಿಂಗ, ವರ್ಗ, ಜಾತಿ ಧರ್ಮ ಪಂಥ, ಪಂಗಡ ಎನ್ನುವ ತಾರತಮ್ಯವಿಲ್ಲ. ಎಲ್ಲರೂ ಇಷ್ಟಲಿಂಗದೀಕ್ಷೆಯನ್ನು ಪಡೆದುಕೊಳ್ಳಬಹುದು.