ಬೆಂಗಳೂರು 30: ಕೊಡಗು ಜಿಲ್ಲೆಯಲ್ಲಿ 2018 ರಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಮೂಲಸೌಕರ್ಯ ಹಾನಿ ಹಿನ್ನೆಲೆಯಲ್ಲಿ ಪುನರ್ ನಿರ್ಮಾಣಕ್ಕೆ ಅಂದಾಜು 535 ಕೋಟಿ ರೂ. ಅಗತ್ಯವಿದ್ದು, ಕೂಡಲೇ ಇದಕ್ಕೆ ಪೂರಕವಾಗಿ ಹಣಕಾಸು ಪ್ರಸ್ತಾವನೆಗಳನ್ನು ಸಿದ್ದಪಡಿಸಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೊಡಗು ಜಿಲ್ಲಾಡಳಿಕ್ಕೆ ಸೂಚಿಸಿದ್ದಾರೆ.
ತಮ್ಮ ಗೃಹಕಚೇರಿ ಕೃಷ್ಣಾದಲ್ಲಿ ಮಂಗಳವಾರ ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಪುನರ್ವಸತಿ ಮತ್ತು ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಅಧಿಕಾರಿಗಳಿಗೆ ಯಡಿಯೂರಪ್ಪ ಈ ಸಂಬಂಧ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳು ಸಭೆಗೆ ಮಾಹಿತಿ ನೀಡಿ, ಅತಿವೃಷ್ಟಿ, ಭೂ ಕುಸಿತದಿಂದ ರಸ್ತೆ, ಕಟ್ಟಡ ಸೇರಿದಂತೆ ಸುಮಾರು 1400 ಕೋಟಿ ರೂ. ಮೌಲ್ಯದ ಮೂಲಸೌಲಭ್ಯ ವ್ಯವಸ್ಥೆಗಳು ನಾಶವಾಗಿವೆ. ಇದುವರೆಗೆ ಕೇಂದ್ರ ಸರ್ಕಾರದಿಂದ 58 ಕೋಟಿ ಹಾಗೂ ರಾಜ್ಯ ಸರ್ಕಾರದ ವಿಶೇಷ ಅನುದಾನ 85 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳು, ನಗರ ಪ್ರದೇಶದಲ್ಲಿ ಚರಂಡಿ ಮತ್ತಿತರ ವ್ಯವಸ್ಥೆಗಳ ಶಾಶ್ವತ ದುರಸ್ತಿಗೆ ಸುಮಾರು 535 ಕೋಟಿ ರೂ ಗಳ ಅಗತ್ಯವಿದೆ ಎಂದು ಹೇಳಿದ್ದಾರೆ.
ಮೂಲ ಸೌಲಭ್ಯಗಳ ಪುನರ್ ನಿರ್ಮಾಣಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.
ಕೊಡಗಿನಲ್ಲಿ ಸಂಪೂರ್ಣವಾಗಿ ಮನೆ ಕಳೆದುಕೊಂಡಿರುವ 842 ಜನರಿಗೆ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಮದೆ, ಕರ್ಣಂಗೇರಿ ಹಾಗೂ ಮಾದಾಪುರದಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಇದಕ್ಕಾಗಿ 111 ಕೋಟಿ ರೂ ನೀಡಲಾಗಿದೆ. ಮೂಲಸೌಕರ್ಯಕ್ಕಾಗಿ 42.92 ಕೋಟಿ ರೂ ಒದಗಿಸಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಎಲ್ಲ ಮನೆಗಳೂ ಸಿದ್ಧವಾಗಲಿವೆ. ಇನ್ಫೋಸಿಸ್ ಪ್ರತಿಷ್ಠಾನದಿಂದ 200 ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರು ಸಭೆಗೆ ಮಾಹಿತಿ ನೀಡಿದರು.
ಸಂಪಾಜೆ ಗ್ರಾಮದಲ್ಲಿ ಸೇವಾಭಾರತಿ ಸಂಸ್ಥೆಯವರು 35 ಮನೆಗಳನ್ನು ನಿರ್ಮಿಸಲು ಮುಂದೆ ಬಂದಿದ್ದು, ಅನುಮೋದನೆ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.ಇದಲ್ಲದೆ ತಮ್ಮ ಜಮೀನಿನಲ್ಲಿಯೇ ಮನೆ ಕಟ್ಟಿಕೊಳ್ಳಲು ನೆರವು ನೀಡುವಂತೆ 83 ಮಂದಿ ಮನೆ ಕಳೆದು ಕೊಂಡವರು ಅರ್ಜಿ ಸಲ್ಲಿಸಿದ್ದು, 54 ಜನರಿಗೆ ತಲಾ 9 ಲಕ್ಷ ರೂ ಮಂಜೂರು ಮಾಡಲಾಗಿದೆ. ಉಳಿದ 29 ಜನರಿಗೂ ನೆರವು ನೀಡಲು ಮಂಜೂರಾತಿ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಕೊಡಗು ಜಿಲ್ಲಾ ಪುನರ್ವಸತಿಗೆ ತಕ್ಷಣ 500 ಕೋಟಿ ರೂ ಹೆಚ್ಚುವರಿ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿ ಅವರು ಆದೇಶಿಸಿದ್ದಾರೆ.
ಕಳೆದ ಬಾರಿ ಸಾರ್ವಜನಿಕರು ಮತ್ತು ಸರ್ಕಾರಿ ನೌಕರರ ಒಂದು ದಿನದ ವೇತನವನ್ನು ದೇಣಿಗೆ ರೂಪದಲ್ಲಿ 100 ಕೋಟಿ ರೂ ನೀಡಿದ್ದು, ಈ ಹಣ ಇನ್ನೂ ಬಳಕೆಯಾಗದೆ ಉಳಿದುಕೊಂಡಿದೆ. ಆ ಹಣವನ್ನೂ ತಕ್ಷಣ ಬಿಡುಗಡೆ ಮಾಡಲು ಮುಖ್ಯಮಂತ್ರಿ ಅವರು ಆದೇಶಿಸಿದ್ದಾರೆ. ಆಗಸ್ಟ್ 7 ಮತ್ತು 8 ರಂದು ಮುಖ್ಯಮಂತ್ರಿ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದು, ಪುನರ್ವಸತಿ ಕಾಮಗಾರಿಗಳನ್ನು ಪರಿಶೀಲಿಸಲಿದ್ದಾರೆ ಎಂದು ಅವರು ತಿಳಿಸಿದರು.