ನರೇಗಾ ಕಾಮಗಾರಿ ಸ್ಥಳದಲ್ಲಿ ಮಾಹಿತಿ ವಿನಿಮಯ ಕಾರ್ಯಕ್ರಮ

ನರೇಗಾ ಕಾಮಗಾರಿ ಸ್ಥಳದಲ್ಲಿ ಮಾಹಿತಿ ವಿನಿಮಯ ಕಾರ್ಯಕ್ರಮ Information exchange program at NREGA work site

ಕಾರವರ, ಮೇ.15:- ಸಿದ್ದಾಪುರ ತಾಲೂಕಿನ ಕಾನಗೋಡ ಗ್ರಾಮ ಪಂಚಾಯತ್ ನ ಮಂಕೋಡ್ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾದ ಹೊರಗಾಲುವೆ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರರಿಗೆ ನರೇಗಾ ಯೋಜನೆ ಕುರಿತಾದ "ಮಾಹಿತಿ ವಿನಿಮಯ ಕಾರ್ಯಕ್ರಮ" ಶುಕ್ರವಾರ ನಡೆಸಲಾಯಿತು. 

ಕೂಲಿಕಾರರಿಗೆ ಯೋಜನೆಯಡಿ ಸಿಗುವ ಸೌಲಭ್ಯಗಳು ಹಾಗೂ ದಿನಕ್ಕೆ ನೀಡುವ ಕೂಲಿ ಮೊತ್ತ, ಕೆಲಸದ ಅವಧಿ, ವಿಕಲಚೇತನರು, ವಯಸ್ಕರು ಹಾಗೂ ಗರ್ಭಿಣಿಯರು ಮತ್ತು ಬಾಂಣಂತಿಯರಿಗೆ ಇರುವ ಕೆಲಸದಲ್ಲಿನ ರಿಯಾಯಿತಿ, ಸಾರ್ವಜನಿಕ ಕಾಮಗಾರಿಗಳಿಂದಾಗುವ ಪ್ರಯೋಜನಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ, ನರೇಗಾ ಸಹಾಯಕ ನಿರ್ದೇಶಕಭೀಮಾ ನಾಯ್ಕ್‌ ಎಮ್‌. ಬಿ. , ಎಲ್ಲಾ ಕೂಲಿಕಾರರು ಕಡ್ಡಾಯವಾಗಿ ಇ- ಕೆವೈಸಿ ಮಾಡಿಸಿಕೊಳ್ಳಬೇಕು. ಜೊತೆಗೆ ನಿಮ್ಮ ಬೇಡಿಕೆಗೆ ಅನುಗುಣವಾಗಿ ಕೆಲಸ ನೀಡಲು ನಾವು ಸದಾ ಸಿದ್ದರಾಗಿದ್ದು,ಎನ್‌ಎಂ.ಎಂ.ಎಸ್ ಫೋಟೋ ಕಡ್ಡಾಯವಾಗಿರುವುದರಿಂದ ಕೂಲಿಕಾರರು ಸಹಕರಿಸಬೇಕು ಎಂದರು. 

ತಾಂತ್ರಿಕ ಸಂಯೋಜಕ ಮಂಜುನಾಥ್, ಐಇಸಿ ಸಂಯೋಜಕ ಪೂರ್ಣಿಮಾ ಗೌಡ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು. ಕಾಮಗಾರಿ ಸ್ಥಳದಲ್ಲಿ ಮಹಿಳಾ ಕೂಲಿಕಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಗ್ರಾಮ ಪಂಚಾಯತ್ ನ ಸಮುದಾಯ ಕಾಮಗಾರಿಗಳಲ್ಲಿ ಶೇ.98 ರಷ್ಟು ಹೆಣ್ಣುಮಕ್ಕಳು ಪಾಲ್ಗೊಂಡಿದ್ದು, ತಮ್ಮ ಗ್ರಾಮದಕಾಲುವೆ, ರಸ್ತೆ, ಕೆರೆ ಇತ್ಯಾದಿ ಸಾರ್ವಜನಿಕ ಆಸ್ತಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿರುವುದು ಮೆಚ್ಚುಗೆಗೆ ಕಾರಣವಾಗಿದೆ.