ಲೋಕದರ್ಶನ ವರದಿ
ಇಂಡಿ 20: ದೇಶ ಸುಂದರಗೊಳ್ಳಲು ಪ್ರತಿಯೊಬ್ಬರೂ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕೆಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಹೇಳಿದರು.
ತಾಲೂಕಿನ ಹಂಜಗಿ ಗ್ರಾಮದಲ್ಲಿ ಜ್ಞಾನೋದಯ ಪೂರ್ವ ಪ್ರಾಥಮಿಕ/ಪ್ರಾಥಮಿಕ ಶಾಲೆ ಕಟ್ಟಡ ಹಾಗೂ ಸಮುದಾಯಭವನ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಓದು ಮನಸ್ಸಿಗೆ ಸಂತಸ ನೀಡುತ್ತದೆ. ಪುಸ್ತಕವನ್ನು ಪ್ರೀತಿಸಿದರೆ ಮನಸ್ಸಿನಲ್ಲಿ ಜ್ಞಾನಜ್ಯೋತಿ ಹೊತ್ತಿಕೊಳ್ಳುವುದು. ಅದರ ಬೆಳಕು ಜೀವನವನ್ನು ಉಜ್ವಲಗೊಳಿಸುವುದು. ಅದಕ್ಕಾಗಿ ಮಕ್ಕಳು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅದನ್ನು ಪಾಲಕರು ಪ್ರೋತ್ಸಾಹಿಸಬೇಕೆಂದು ಹೇಳಿದರು.
ಗ್ರಾಮೀಣ ಭಾಗದ ಬಡಮಕ್ಕಳಿಗೆ ಶೈಕ್ಷಣಿಕ ಜ್ಞಾನ ನೀಡುತ್ತಿರುವ ಈ ಸಂಸ್ಥೆ ಕಾರ್ಯ ಶ್ಲಾಘನೀಯ. ಇಲ್ಲಿನ ಪರಿಸರ ಸುಂದರ ಕಟ್ಟಡ ನೋಡಿದರೆ ಶಾರದೆ ವಾಸವಾಗಿರುವಂತೆ ಗೋಚರಿಸುತ್ತದೆ. ಶಿಕ್ಷಣ ಧಾರೆ ಎರೆಯಲು ಒಳ್ಳೆಯ ಶಿಕ್ಷಕರ ಸಮೂಹವೂ ಇದೆ. ಇಂಥ ಶಾಲೆಗಳನ್ನು ನೋಡಿ ಹೆಮ್ಮೆಯಾಗುತ್ತದೆ. ಎಲ್ಲ ಮಕ್ಕಳಿಗೆ ನಗುತ್ತ ಜೀವನ ಸಾಗಿಸುವಂಥ ಶಿಕ್ಷಣ ನೀಡಿ. ಬೇಸರದ ಶಿಕ್ಷಣ ಬೇಡ. ಪಠ್ಯಪುಸ್ತಕಗಳಿಗೆ ಮಹತ್ವ ಕೊಟ್ಟಂತೆ ಸಹಪಠ್ಯ ಚಟುವಟಿಕೆಗಳಿಗೂ ಆದ್ಯತೆ ನೀಡಿ ಎಂದು ಸಲಹೆ ನೀಡಿದರು.
ಗುರುಲಿಂಗ ಸ್ವಾಮಿ ವಿಜಯಪುರ, ಅಮೃತಾನಂದ ಸ್ವಾಮೀಜಿ, ತೇಜೋಮಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಸಂಸ್ಥೆ ಅಧ್ಯಕ್ಷ ಸಿದ್ದರಾಮ ಬಿರಾದಾರ, ಬಿ.ಡಿ. ಪಾಟೀಲ, ಆರ್ಜಿ. ಬಿರಾದಾರ, ಜಿ.ವೈ. ಬಿರಾದಾರ, ಶ್ರೀಶೈಲಗೌಡ ಬಿರಾದಾರ, ತಾಪಂ ಸದಸ್ಯ ನಾನಾಗೌಡ ಪಾಟೀಲ, ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಂ. ಬಂಡಗಾರ, ಜಿ.ಡಿ. ಹಿರೇಮಠ, ಜಿ.ಎಲ್. ಮೇಲ್ಗಡೆ ಮತ್ತಿತರರು ಇದ್ದರು. ಎಸ್.ಆರ್.ಅಂದೇವಾಡಿ ನಿರೂಪಿಸಿದರು. ಬಿ.ಡಿ. ಹಿರೇಮಠ ಸ್ವಾಗತಿಸಿ, ವಂದಿಸಿದರು.