ಗಯಾನ, ಆ 9 ಇಲ್ಲಿನ ಪ್ರೋವಿಡೆನ್ಸ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆಯಬೇಕಿದ್ದ ಮೊದಲನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು.
ಇದಕ್ಕೂ ಮುನ್ನ ಟಾಸ್ ಗೆದ್ದಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡಿದ್ದರು. ಈ ವೇಳೆ ಮೈದಾನ ತೇವವಾಗಿದ್ದರಿಂದ ತೀಪುಗಾರರು ಪಂದ್ಯ ತಡವಾಗಿ ಆರಂಭಿಸಲು ನಿರ್ಧರಿಸಿದ್ದರು.
ನಂತರ ತಡವಾಗಿ ಆರಂಭವಾದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಪರ ಕ್ರಿಸ್ ಗೇಲ್ ಹಾಗೂ ಎವಿನ್ ಲೆವಿಸ್ ಕಣಕ್ಕೆ ಇಳಿದರು. ಈ ಜೊಡಿ ಮುರಿಯದ ಮೊದಲನೇ ವಿಕೆಟ್ಗೆ 42 ರನ್ ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿತು. ಭಾರಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಕ್ರಿಸ್ ಗೇಲ್ 31 ಎಸೆತಗಳಲ್ಲಿ ಕೇವಲ ನಾಲ್ಕು ರನ್ ಗಳಿಸಿದ್ದಾಗ ಕುಲ್ದೀಪ್ ಯಾದವ್ಗೆ ಕ್ಲೀನ್ ಬೌಲ್ಡ್ ಆದರು.
ನಂತರ ಶಾಯ್ ಹೋಪ್ ಕ್ರೀಸ್ಗೆ ಆಗಮಿಸಿದರು. ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಎವಿನ್ ಲೆವಿಸ್ ಭಾರತದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. ಇವರು ಎದುರಿಸಿದ 36 ಎಸೆತಗಳಲ್ಲಿ ಮುರು ಸಿಕ್ಸರ್ ಹಾಗೈ ಎರಡು ಬೌಂಡರಿಯೊಂದಿಗೆ ಅಜೇಯ 40 ರನ್ ಗಳಿಸಿದರು. ಮತ್ತೊಂದು ತುದಿಯಲ್ಲಿ ಶಾಯ್ ಹೋಪ್ ಅಜೇಯ ಆರು ರನ್ ಗಳಿಸಿದರು.
ಒಟ್ಟಾರೆ, ವೆಸ್ಟ್ ಇಂಡೀಸ್ 13 ಓವರ್ಗಳ ಮುಕ್ತಾಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿದ್ದಾಗ ಮಳೆ ಆರಂಭವಾಯಿತು. ಈ ವೇಳೆ ಪಿಚ್ಗೆ ಹೊದಿಕೆ ಹಾಕಲಾಯಿತು. ಆದರೂ, ಮಳೆ ನಿಲ್ಲಲೇ ಇಲ್ಲ ಮೈದಾನವೆಲ್ಲಾ ಹೆಚ್ಚು ತೇವವಾಯಿತು. ಅಂತಿಮವಾಗಿ ತೀಪುಗಾರರು ಮೊದಲನೇ ಪಂದ್ಯವನ್ನುನಿಲ್ಲಿಸಿದರು. ಪಂದ್ಯ ಫಲಿತಾಂಶ ಹೊರಬಂದಿಲ್ಲ.
ಉಭಯ ತಂಡಗಳ ಎರಡನೇ ಪಂದ್ಯ ಆ.11 ರಂದು ಪೋರ್ಟ್ ಆಫ್ ಸ್ಪೇನ್ನಲ್ಲಿ ಜರುಗಲಿದೆ.