ಜಗತ್ತಿನಲ್ಲಿಯೇ ಭಾರತೀಯ ರೇಲ್ವೆಗೆ 4ನೇ ಸ್ಥಾನ: ಸುರೇಶ

ಬಾಗಲಕೋಟೆ: ಹಿಂದಿನಿಂದಲೂ ಸಂಚಾರ, ಸಾರಿಗೆಗೆ ಭಾರತದ ಕೊಡುಗೆ ಅಪಾರವಾಗಿದ್ದು, ಅದರಲ್ಲೂ ಭಾರತೀಯ ರೈಲ್ವೆ ಇಲಾಖೆ ಜಾಗತಿಕ ಮಟ್ಟದಲ್ಲಿ 4ನೇ ಸ್ಥಾನ ಪಡೆದಿದೆ ಎಂದು ಕೇಂದ್ರ ರೇಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

   ನಗರದ ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ರೇಲ್ವೆ ಇಲಾಖೆಗೆ ಸಂಬಂಧಿಸಿದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರಕಾರ ರೇಲ್ವೆ ಇಲಾಖೆಗೆ ಸಂಬಂಧಿಸಿದ ಯಾವುದೇ ಕೆಲಸಗಳನ್ನು ಬಾಕಿ ಉಳಿಸದೇ ಪೂರ್ಣಗೊಳಿಸುವ ಉದ್ದೇಶದಿಂದ ಹಾಗೂ ಮಹತ್ಮಾ ಗಾಂಧೀಜಿಯವರ 150 ಜನ್ಮ ದಿನದ ಅಂಗವಾಗಿ ಮತ್ತು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಸಂಭ್ರಮ ಆಚರಿಸುವ ಉದ್ದೇಶದಿಂದ 2021-22 ರೊಳಗಾಗಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.

     ಈಗಾಗಲೇ ದೇಶದಾದ್ಯಂತ ರೇಲ್ವೆ ಹಳಿಗಳಿದ್ದು, ಹೊಸ ರೈಲು ಮಾರ್ಗಗಳ ಅವಶ್ಯಕತೆಗಳಿಲ್ಲ. ಇದ್ದ ಮಾರ್ಗಗಳನ್ನು ಬ್ರಾಡ್ಗೇಜಿಗೆ ಅಭಿವೃದ್ದಿ ಪಡಿಸಿ ಸಂಚಾರಕ್ಕೆ ಅಣಿ ಮಾಡಿಕೊಡಲಾಗುತ್ತಿದೆ. ಆದ್ದರಿಂದ ಹೊಸ ರೈಲು ಮಾರ್ಗಕ್ಕೆ ಜಿಲ್ಲೆಯ ಸಂಸದರು, ಶಾಸಕರು ಹಾಗೂ ಅಧಿಕಾರಿಗಳು ರೈತರ ಜೊತೆ ಮಾತುಕತೆ ನಡೆಸಿ ಜಮೀನು ನೀಡಿದಲ್ಲಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇದರಿಂದ ಜಿಲ್ಲೆಯ ಉದ್ದಿಮೆಗಳ ಬೆಳೆವಣಿಗೆಯ ಜೊತೆಗೆ ಬೆರೆಡೆಗೆ ಹಣ್ಣು ಮತ್ತು ದವಸ ದಾನ್ಯಗಳನ್ನು ಕಳುಹಿಸುವದರಿಂದ ವಾಣಿಜ್ಯ ವ್ಯವಹಾರ ಬೆಳೆದು ರೈತರ ಅಭಿವೃದ್ದಿ, ನಿರುದ್ಯೋಗ ಸಮಸ್ಯೆ ನಿವಾರಿಸಬಹುದಾಗಿದೆ ಎಂದರು.

     ರೇಲ್ವೆ ಇಲಾಖೆಯಲ್ಲಿ ಅತೀ ಹೆಚ್ಚು ನೌಕರರನ್ನು ಹೊಂದಿರುವ ಈ ಇಲಾಖೆಯಲ್ಲಿ ಕಸಗೂಡಿಸುವದರಿಂದ ಹಿಡಿದು ಕಾರ್ಯನಿವರ್ಾಹಕ ಅಭಿಯಂತರವರೆಗೆ ಉದ್ಯೋಗಗಳಿದ್ದು, ಈ ಭಾಗದ ನಿರುದ್ಯೋಗಿ ಯುವಕರು ಅವಕಾಶ ಪಡೆದುಕೊಳ್ಳಬೇಕು. ಈ ಜಿಲ್ಲೆಯ ಐತಿಹಾಸಿಕ ತಾಣಗಳಾದ ಬಾದಾಮಿ, ಪಟ್ಟದಕಲ್ಲ ಹಾಗೂ ಬನಶಂಕರಿಗೆ ಈ ಭಾಗದ ಜನರ ಮನವಿ ಮೇರೆಗೆ ಮುಂಬಯಿ ಮತ್ತು ಶಿರಡಿಗಳಿಗೆ ಹೋಗುವ ರೇಲ್ವೆಗಳು ಬಾದಾಮಿಗೆ ನಿಲುಗಡೆಯಾಗುವಂತೆ ಸೂಚಿಸಿದ್ದು, ರವಿವಾರದಿಂದಲೇ ರೇಲ್ವೆ ನಿಲುಗಡೆ ಯಾಗಲಿದೆ. ಇದರಿಂದ ಪ್ರಯಾಣಿಕರಿಗೆ ಶಿರಡಿ ಸಾಯಿಬಾಬಾನ ಹಾಗೂ ಬಾದಾಮಿ ಬನಶಂಕರಿಯ ದರ್ಶನ ಭಾಗ್ಯ ಹಾಗೂ ಐತಿಹಾಸಿಕ ತಾಣಗಳ ನೋಡಲು ಅನುಕೂಲವಾಗಲಿದೆ ಎಂದರು.

ಬಾಗಲಕೋಟೆ ರೇಲ್ವೆ ನಿಲ್ದಾಣದಲ್ಲಿ ಗೂಡ್ಸ್ ಶೆಡ್ನ್ನು ಬೇರೆಡೆ ನಿಲ್ಲುವಂತೆ ಮಾಡಬೇಕು. ಇದರಿಂದ ಆ ಜಾಗದಲ್ಲಿ ಹೋಟೆಲ್ ಪ್ರಾರಂಭಿಸುವದರಿಂದ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ವಾಸ್ಕೋದಿಂದ ದೂದ ಸಾಗರ ನೋಡಲಿಕ್ಕೆ ಒಂದು ರೇಲ್ವೆ ಬಿಡಲಾಗಿದ್ದು, ಬೇರೆ ಬೇರೆ ಭಾಗದಿಂದ ನೋಡಲಿಕ್ಕೆ ಬರುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. 

        ಅಲ್ಲದೇ ಗೋವಾದ ಜನರು ಬೆಳಗಾವಿ, ಬಾಗಲಕೋಟೆ, ಮುಧೋಳ ಹಾಗೂ ವಿಜಯಪುರಕ್ಕೆ ಬಂದು ವ್ಯಾಪಾರ ಮಾಡಲು ಅನುಕೂಲವಾಗುವಂತೆ ರೇಲ್ವೆಗಳನ್ನು ಬಿಡಲಾಗುತ್ತಿದೆ ಎಂದರು. ಬೇರೆ ದೇಶದಲ್ಲಿ ರೇಲ್ವೆಗಳು ಗಂಟೆಗೆ 400 ಕಿ.ಮೀ ವೇಗವಾಗಿ ಓಡಾಡುತ್ತಿವೆ. ಆದರೆ ಭಾರತೀಯ ರೇಲ್ವೆಗಳು ಗಂಟೆಗೆ 100 ಕಿ.ಮೀ ವರೆಗೆ ಓಡಾಡುತ್ತಿವೆ. ಈಗ ಜನರ ಸೇವೆಗೆ ಮುಕ್ತವಾಗಿ ಓಡಾಡುವಂತೆ ಮಾಡಲಾಗುತ್ತಿದೆ ಎಂದರು.

      ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿದ ಬಾಗಲಕೋಟೆ-ಕುಡಚಿ ರೇಲ್ವೆ ಮಾರ್ಗ ಕೇವಲ 33 ಕಿ.ಮೀ ವರೆಗೆ ಮಾತ್ರ ಪ್ರಗತಿ ಸಾಧಿಸಲಾಗಿದೆ. ಇದಕ್ಕೆ ಭೂಸ್ವಾಧಿನ ಪ್ರಕ್ರಿಯೆ ವಿಳಂಬವಾಗುತ್ತಿವೆ. ರೈತರು ಸರಕಾರದ ಜೊತೆ ಕೈಜೋಡಿಸಿ ಜಮೀನು ಕೊಡಲು ಮುಂದೆ ಬಂದಲ್ಲಿ ಈ ಭಾಗದ ರೇಲ್ವೆ ಕಾಮಗಾರಿಗಳನ್ನು ಬೇಗನೇ ಪೂರ್ಣಗೊಳಿಸಲಾಗುವುದು ಎಂದರು. 

       ವಿವಿಧ ಸಂಘ ಸಂಸ್ಥೆಗಳಿಂದ ಮನವಿಗಳನ್ನು ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಕುಡಚಿ ಶಾಸಕ ಪಿ.ರಾಜೀವ್, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ರೇಲ್ವೆ ಇಲಾಖೆಯ ಪ್ರಧಾನ ವ್ಯವಸ್ಥಾಪಕ ಎ.ಕೆ.ಸಿಂಗ್, ಹುಬ್ಬಳ್ಳಿ ರೇಲ್ವೆ ವಿಭಾಗದ ರಾಜೇಶ ಮೋಹನ,  ಮುಖ್ಯ ಇಂಜೀನಿಯರ್ ಕೆ.ಸಿ.ಸ್ವಾಮಿ ಸೇರಿದಂತೆ ದನಂಜಯ ಸಿಂಗ್, ದಾಮೋದರ ರೆಡ್ಡಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಸ್ವಾಗತಿಸಿದರು. ನಂತರ ರೇಲ್ವೆ ಯೋಜನೆಗಳ ಕುರಿತು ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಹಾಗೂ ರೇಲ್ವೆ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಪ್ರಾರಂಭದಲ್ಲಿ ಬಾಗಲಕೋಟೆ ರೇಲ್ವೆ ನಿಲ್ದಾಣವನ್ನು ವೀಕ್ಷಿಸಿ ಸ್ವಚ್ಚತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.