ಮೊದಲನೇ ಏಕದಿನ ಪಂದ್ಯ: ವಾಂಖೆಡೆಯಲ್ಲಿ ಮಕಾಡೆ ಮಲಗಿದ ಭಾರತ

cricket

ಮುಂಬೈ, ಜ 14 : ಡೇವಿಡ್ ವಾರ್ನರ್ (128 ರನ್, 112 ಎಸೆತಗಳು) ಹಾಗೂ ಆ್ಯರೋನ್ ಫಿಂಚ್ (110 ರನ್ , 114 ಎಸೆತಗಳು) ಅವರ ಅಬ್ಬರದ ಶತಕಗಳ ಬಲದಿಂದ ಆಸ್ಟ್ರೇಲಿಯಾ ತಂಡ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ  10 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಾಂಗೂರು ಪಡೆ 1-0 ಮುನ್ನಡೆ ಪಡೆಯಿತು.

ಇಲ್ಲಿನ, ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ನೀಡಿದ್ದ 256 ರನ್ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡಕ್ಕೆೆ ಕಠಿಣ ಎನಿಸಲೇ ಇಲ್ಲ. ಆರಂಭಿಕರಾಗಿ ಕಣಕ್ಕೆೆ ಇಳಿದಿದ್ದ ಡೇವಿಡ್ ವಾರ್ನರ್ ಹಾಗೂ ಆ್ಯರೋನ್ ಫಿಂಚ್ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 258 ರನ್ ಗಳಿಸಿ ಇನ್ನೂ 12.2 ಓವರ್ ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿತು. 

ಜತೆಗೆ, ವಾಂಖೆಡೆ ಕ್ರೀಡಾಂಗಣದಲ್ಲಿ  ಮೊದಲನೇ ವಿಕೆಟ್‌ಗೆ ಅತಿ ಹೆಚ್ಚು ರನ್ ಗಳಿಸಿದ ಮೊದಲ ಜೋಡಿ ಎಂಬ ಸಾಧನೆಗೆ ವಾರ್ನರ್ ಹಾಗೂ ಫಿಂಚ್ ಜೋಡಿ ಭಾಜನವಾಯಿತು. 2017ರಲ್ಲಿ ನ್ಯೂಜಿಲೆಂಡ್‌ನ ಟಾಮ್ ಲಥಾಮ್ ಹಾಗೂ ರಾಸ್ ಟೇಲರ್ ಜೋಡಿ (200 ರನ್) ದಾಖಲೆಯನ್ನು ಆಸೀಸ್ ಜೋಡಿ ಮುರಿಯಿತು.

 ಆರಂಭದಿಂದಲೂ ಅಬ್ಬರಿಸಿದ ವಾರ್ನರ್ ಹಾಗೂ ಫಿಂಚ್ ಭಾರತದ ಬೌಲರ್‌ಗಳನ್ನು ದಂಡಿಸುವ ಮೂಲಕ ಅವರ ವಿಶ್ವಾಸವನ್ನು ಕುಗ್ಗಿಸಿದರು. ಡೇವಿಡ್ ವಾರ್ನರ್ 112 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 17 ಬೌಂಡರಿಯೊಂದಿಗೆ 128 ರನ್ ಗಳಿಸಿ ವೃತ್ತಿ ಜೀವನದ 18ನೇ ಶತಕ ಪೂರೈಸಿದರು. ಇವರಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡಿದ ನಾಯಕ ಆ್ಯರೋನ್ ಫಿಂಚ್, 114 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 13 ಬೌಂಡರಿಯೊಂದಿಗೆ 110 ರನ್ ಗಳಿಸಿ ವೃತ್ತಿ ಜೀವನದ 16ನೇ ಶತಕ ದಾಖಲಿಸಿದರು.  ಒಟ್ಟಾರೆ, ಆಸ್ಟ್ರೇಲಿಯಾ ತಂಡ 37.4 ಓವರ್ ಗಳಿಗೆ ವಿಕೆಟ್ ನಷ್ಟವಿಲ್ಲದೆ 258 ರನ್ ಗಳಿಸಿ ಗೆಲುವಿನ ನಗೆ ಬೀರಿತು. 

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 49.1 ಓವರ್ ಗಳಿಗೆ 255 ರನ್ ಗಳಿಗೆ ಆಲೌಟ್ ಆಗಿತ್ತು. ಆರಂಭಿಕರಾಗಿ ಕಣಕ್ಕೆೆ ಇಳಿದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಜೋಡಿ ಭಾರತಕ್ಕೆೆ ಉತ್ತಮ ಆರಂಭ ನೀಡುವಲ್ಲಿ ವಿಫಲವಾಯಿತು. ರೋಹಿತ್ ಶರ್ಮಾ ಅವರು ಕೇವಲ 10 ರನ್ ಗಳಿಸಿ ಮಿಚೆಲ್ ಸ್ಟಾರ್ಕ್ ಗೆ ವಿಕೆಟ್ ಒಪ್ಪಿಸಿದರು.

ಧವನ್-ರಾಹುಲ್ ಜುಗಲ್‌ಬಂದಿ: 

ತಂಡದ ಮೊತ್ತ 13 ರನ್ ಗಳಿಗೆ ಒಂದು ವಿಕೆಟ್ ಕಳೆದುಕೊಂಡಾಗ ಜತೆಯಾಟ ಶಿಖರ ಧವನ್ ಹಾಗೂ ಕೆ.ಎಲ್ ರಾಹುಲ್ ಜೋಡಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿತು. ಆಸ್ಟ್ರೇಲಿಯಾ ಮಾರಕ ದಾಳಿಯನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಯಿತು.  ಈ ಜೋಡಿ ಎರಡನೇ ವಿಕೆಟ್‌ಗೆ 121 ರನ್ ಗಳಿಸಿ ತಂಡಕ್ಕೆೆ ಭರ್ಜರಿ ಆರಂಭ ನೀಡಿತು. 61 ಎಸೆತಗಳಿಗೆ 47 ರನ್ ಗಳಿಸಿ ಅದ್ಭುತ ಬ್ಯಾಟಿಂಗ್ ಮುಂದುವರಿಸಿದ್ದ ಕನ್ನಡಿಗ ರಾಹುಲ್ ಕೇವಲ ಮೂರು ರನ್ ಗಳಿಂದ ಅರ್ಧಶತಕ ವಂಚಿತರಾದರು. ಆ್ಯಸ್ಟನ್ ಅಗರ್ ಎಸೆತದಲ್ಲಿ ಸ್ವೀವನ್ ಸ್ಮಿತ್‌ಗೆ ಕ್ಯಾಚಿತ್ತರು. 

ಕಳಪೆ ಲಯದಿಂದ ಟೀಕೆಗಳಿಗೆ ಒಳಗಾಗಿದ್ದ ಶಿಖರ್ ಧವನ್ ಅವರು ಮೊದಲನೇ ಏಕದಿನ ಪಂದ್ಯದಲ್ಲೇ ಎಲ್ಲರ ಗಮನ ಸೆಳೆದರು. ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಧವನ್, ವೃತ್ತಿ ಜೀವನದ 28ನೇ ಅರ್ಧಶತಕ ಪೂರೈಸಿದರು. ಅಲ್ಲದೇ, ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ ಸಾವಿರ ರನ್ ಪೂರೈಸಿದರು. ಆ ಮೂಲಕ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಧೋನಿ ಅವರ ಪಟ್ಟಿಗೆ ಸೇರ್ಪಡೆಯಾದರು. 91 ಎಸೆತಗಳನ್ನು ಎದುರಿಸಿದ ಅವರು, ಒಂದು ಸಿಕ್ಸರ್ ಹಾಗೂ ಒಂಬತ್ತು ಬೌಂಡರಿಯೊಂದಿಗೆ 74 ರನ್ ಗಳಿಸಿದರು.