ನವದೆಹಲಿ,ಮೇ
14- ಮುಂಬೈ ಮೂಲದ ವಿವಾದಾಸ್ಪದ ಇಸ್ಲಾಂ ಪ್ರಚಾರಕ ಜಕೀರ್ ನಾಯಕ್ ನನ್ನು ತನಗೆ
ಹಸ್ತಾಂತರಿಸಬೇಕು ಎಂದು ಮಲೇಷ್ಯಾ ದೇಶವನ್ನು ಭಾರತ ಸರ್ಕಾರ ಮತ್ತೊಮ್ಮೆ ಕೋರಿದೆ.
ಮಲೇಷ್ಯಾ ಸರ್ಕಾರ ಭಾರತದ ಕೋರಿಕೆಯನ್ನು ಪರಿಶೀಲಿಸುತ್ತಿದೆ ಎಂದು ಅಲ್ಲಿನ
ಸರ್ಕಾರಿ ಮೂಲಗಳು ತಿಳಿಸಿವೆ.
ಭಾರತದಲ್ಲಿ ಕೋಮು ಸೌಹಾರ್ದತೆಗೆ ಭಂಗತಂದು,
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಹ ಆರೋಪಗಳನ್ನು ಜಕೀರ್ ನಾಯಕ್
ಎದುರಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಅವರು ಮಲೇಷ್ಯದಲ್ಲಿ ನೆಲೆಸಿದ್ದಾರೆ.
2016 ಜುಲೈನಲ್ಲಿ ಢಾಕಾದಲ್ಲಿ ಹೋಲಿ ಆರ್ಟಿಸನ್ ಬೆಕರಿ ಕಫೆ ಮೇಲೆ ನಡೆಸಲಾದ
ಭಯೋತ್ಪಾದಕ ದಾಳಿಯಲ್ಲಿ ಓರ್ವ ಭಾರತೀಯ ಯುವತಿ ಸೇರಿ 20 ಮಂದಿ ವಿದೇಶಿಯರನ್ನು
ಅಮಾನುಷವಾಗಿ ಕತ್ತು ಸೀಳಿ ಹತ್ಯೆ ಗೈದ ಕೃತ್ಯಕ್ಕೆ ಸಂಬಂಧಿಸಿದಂತೆ ಇತ್ತ
ಭಾರತದಲ್ಲೂ, ಅತ್ತ ಬಾಂಗ್ಲಾ ದೇಶದಲ್ಲೂ ಜಕೀರ್ ನಾಯಕ್ ತನಿಖೆ ಎದುರಿಸುತ್ತಿದ್ದಾರೆ.
ರಷ್ಯಾದಲ್ಲಿ
ಕಳೆದ ವರ್ಷ ಸೆಪ್ಟಂಬರ್ ನಲ್ಲಿ ನಡೆದ 5ನೇ ಈಸ್ಟ್ ಎಕನಾಮಿಕ್ ಫೋರಂ ನಲ್ಲಿ
ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಆ ಸಂದರ್ಭದಲ್ಲಿ ಮಲೇಷ್ಯಾ ಪ್ರಧಾನಿ ಮಹಥೀರ್
ಮೊಹಮದ್ ಅವರನ್ನು ಭೇಟಿಯಾಗಿದ್ದರು. ಜಕೀರ್ ನಾಯಕ್ ಹಸ್ತಾಂತರ ವಿಷಯದಲ್ಲಿ ಉಭಯ
ಪ್ರಧಾನಿಗಳು ಸಭೆಯಲ್ಲಿ ಚರ್ಚೆಸಿದ್ದರು ಎಂದು ಭಾರತ ವಿದೇಶಾಂಗ ಕಾರ್ಯದರ್ಶಿ ವಿಜಯ್
ಗೋಖಲೆ ಸಹ ಈ ಹಿಂದೆ ಹೇಳಿದ್ದರು.