ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿ

ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿ India is self-sufficient in food production

ಲೋಕದರ್ಶನ ವರದಿ 

ಹೂವಿನ ಹಡಗಲಿ 01- ಭಾರತೀಯ ಸಂಸ್ಕೃತಿಯಲ್ಲಿ ಕೃಷಿಯು ಕೇವಲ ಹೊಟ್ಟೆಪಾಡಿನ ವೃತ್ತಿಯಲ್ಲ, ಅದೊಂದು ಜೀವನ ಪದ್ಧತಿ  ಮತ್ತು ಆಳವಾದ ಸಂಸ್ಕೃತಿ. ಮಣ್ಣಿನೊಂದಿಗೆ ನಂಟಿರುವ ರೈತ ಪ್ರಕೃತಿಯನ್ನು ತಾಯಿಯಂತೆ ಕಾಣುತ್ತಾನೆ. ಇದು ನಮ್ಮ ಪರಂಪರೆ, ಮೌಲ್ಯಗಳು ಹಾಗೂ ಮಾನವ-ಪ್ರಕೃತಿ ಸಂಬಂಧದ ಜೀವಂತ ಪ್ರತೀಕವಾಗಿದೆ ಎಂದು ಶಿಕ್ಷಕ ಎಂ.ಶಿವಪ್ರಕಾಶ್ ಅಭಿಪ್ರಾಯ ಪಟ್ಟರು.ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ,  ತಾಲೂಕಿನ ನಾಗತಿ ಬಸಾಪುರದ      ಟಿ.ಎಂ.ಶಿವಶಂಕರಯ್ಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಶ್ರೀಚರಂತಪ್ಪಯ್ಯ ಸ್ವಾಮಿಗಳ ಸ್ಮರಣಾರ್ಥದತ್ತಿ,  ಶ್ರೀವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳ ಸ್ಮರಣಾರ್ಥದತ್ತಿ,  ತೆಗ್ಗಿನ ಮಠದ ವೀರಮ್ಮ ಶಿವಶಂಕರಯ್ಯ ಸ್ಮಾರಕದತ್ತಿ,     

ಶ್ರೀಮುಂಡವಾಡ ಕಸ್ತೂರಿ ಚನ್ನಪ್ಪ ಸ್ಮರಣಾರ್ಥ ದತ್ತಿ ಉಪನ್ಯಾಸ ದಲ್ಲಿ, "ಕೃಷಿ ಮತ್ತು ಗುಡಿ ಕೈಗಾರಿಕೆ" ಬಗ್ಗೆ ಮಾತನಾಡಿ  ಪ್ರಸ್ತುತ ದೇಶದ ಕೃಷಿ ಕ್ಷೇತ್ರ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದು, ಕೈಗಾರಿಕೆಗಳಿಗೆ  ಕಚ್ಚಾ ವಸ್ತುಗಳ ಪೂರೈಕೆ ಮಾಡುತ್ತಿದೆ. ಕೇವಲ ಏಕಬೆಳೆ ಬೆಳೆಯದೆ, ವಾಣಿಜ್ಯ ಬೆಳೆಗಳಿಗೆ ಮಾರು ಹೋಗದೆ, ಕೃಷಿಗೆ ಸಂಸ್ಕೃತಿಯ, ಆಧುನಿಕತೆಯ ಸ್ಪರ್ಶ ನೀಡಿ ಸಮನ್ವಯ ಸಾಧಿಸಿದಾಗ ಯಶಸ್ವಿ ಯಾಗಬಹುದಾಗಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ   ಕೆ.ಮಂಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹರಪನಹಳ್ಳಿ   ಟಿಎಂಎಇ  ಶಿಕ್ಷಕರ ತರಬೇತಿ ಕಾಲೇಜಿನ ಪ್ರಾಚಾರ್ಯ ಹೆಚ್‌.ಎಂ. ಮಲ್ಲಿಕಾರ್ಜುನ ಮಾತನಾಡಿದರು.

ಶಿಕ್ಷಕ ಕಂಠಿ ಪ್ರಕಾಶ್,  ಎಸ್‌.ಡಿ.ಎಂ.ಸಿ.ಅಧ್ಯಕ್ಷ ಹೆಚ್‌.ಮಲ್ಲನಗೌಡ, ನಾಗೇಶ್ ಇದ್ದರು.  ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ವಹಿಸಿದ್ದರು. ಸಜ್ಜಿ ಇಂದುಶ್ರಿ, ಮಾಗಳದ ಸುಮಾ ಪ್ರಾರ್ಥಿಸಿದರು. ಗಣಿತ ಶಿಕ್ಷಕಿ ಐ.ಎಂ.ಸುನೀತ ಸ್ವಾಗತಿಸಿದರು.ಕಸಾಪ ಕಾರ್ಯದರ್ಶಿ ಎ.ಎಂ.ಚನ್ನವೀರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದಿ ಶಿಕ್ಷಕ ರಾಜೇಂದ್ರ ವಂದಿಸಿದರು. ವಿಜ್ಞಾನ ಶಿಕ್ಷಕಿ ಎಲ್‌.ಎಂ.ಶ್ರೀಲತಾ ಕಾರ್ಯಕ್ರಮ ನಿರ್ವಹಿಸಿದರು.