ಸಂತ ರವಿದಾಸ್ ಹೆಸರಿನಲ್ಲಿ ರಾಜಕೀಯ: ಬಿಜೆಪಿ, ಆಪ್ ವಿರುದ್ಧ ಮಾಯಾವತಿ ವಾಗ್ದಾಳಿ
Mayawati Targets BJP, AAP Over Sant Ravidas Politics, Urges Community to Stay Vigilant
ಲಖನೌ, ಆಗಸ್ಟ್ 10 : ಸಂತ ಶಿರೋಮಣಿ ರವಿದಾಸ್ ಜೀ ಅವರ ಗುರುಘರ್‌ಗೆ ಸಂಬಂಧಿಸಿದ ಹಳೆಯ ವಿವಾದವನ್ನು ಉಲ್ಲೇಖಿಸಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಅಧ್ಯಕ್ಷೆ ಮಾಯಾವತಿ ಸೋಮವಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಆಮ್ ಆದ್ಮಿ ಪಕ್ಷ (ಆಪ್) ವಿರುದ್ಧ ವಾಗ್ದಾಳಿ ನಡೆಸಿದರು. ರಾಜಕೀಯ ಪಕ್ಷಗಳ “ಸ್ವಾರ್ಥ ರಾಜಕೀಯ”ದ ಬಗ್ಗೆ ಸಮಾಜ ಎಚ್ಚರಿಕೆಯಿಂದ ಇರಬೇಕು ಹಾಗೂ ಸಂತ ರವಿದಾಸ್ ಜೀ ಅವರ ಸಮಾನತೆ, ಗೌರವ ಮತ್ತು ನ್ಯಾಯದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಬೇಕು ಎಂದು ಅವರು ಕರೆ ನೀಡಿದರು.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಮಾಯಾವತಿ, 2019ರ ಆಗಸ್ಟ್ 10ರಂದು ದೆಹಲಿಯ ತುಘಲಕಾಬಾದ್‌ನಲ್ಲಿರುವ ಸಂತ ರವಿದಾಸ್ ಜೀ ಅವರ ಪವಿತ್ರ ಗುರುಘರ್ ಅನ್ನು ಬುಲ್ಡೋಜರ್‌ಗಳು ಮತ್ತು ಭಾರಿ ಪೊಲೀಸ್ ಬಂದೋಬಸ್ತ್‌ನ ಸಮ್ಮುಖದಲ್ಲಿ ಧ್ವಂಸಗೊಳಿಸಲಾಗಿತ್ತು ಎಂದು ಹೇಳಿದರು.
ಇದನ್ನು ವಿರೋಧಿಸಿ ದೇಶದಾದ್ಯಂತ ಸಂತ ಸಮಾಜದ ಸದಸ್ಯರು ಪ್ರಜಾಸತ್ತಾತ್ಮಕ ರೀತಿಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ, ಬಂಧನ, ಪ್ರಕರಣಗಳು ಹಾಗೂ ಜೈಲು ಶಿಕ್ಷೆಯನ್ನೂ ಹಲವರು ಎದುರಿಸಬೇಕಾಯಿತು ಎಂದು ಅವರು ಹೇಳಿದರು.
ಗುರುಘರ್‌ಗೆ ಸಂಬಂಧಿಸಿದ ಭೂಮಿಯನ್ನೂ ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದ ಮಾಯಾವತಿ, ಇಂದಿಗೂ ಸಂತ ರವಿದಾಸ್ ಜೀ ಅವರ ಗುರುಘರ್ ತಾತ್ಕಾಲಿಕ ಟಿನ್ ಶೆಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು. ಈ ಪರಿಸ್ಥಿತಿ ಲಕ್ಷಾಂತರ ಭಕ್ತರ ಭಾವನೆಗಳಿಗೆ ನೋವುಂಟು ಮಾಡುತ್ತಿದ್ದು, ಸಮುದಾಯದ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಅವರು ಹೇಳಿದರು.
ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧವೂ ಮಾಯಾವತಿ ವಾಗ್ದಾಳಿ ನಡೆಸಿದರು. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ‘ಬೇಗಂಪುರ’ದ ಗುರಿಯಿಂದ ಸಮುದಾಯದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಸಂತ ರವಿದಾಸ್ ಜೀ ಅವರ ಹೆಸರಿನಲ್ಲಿ ಕಲಶ ಯಾತ್ರೆ ಆಯೋಜಿಸುತ್ತಿದೆ ಎಂದು ಅವರು ಆರೋಪಿಸಿದರು.
ಪಂಜಾಬ್‌ನ ಧಲೇತಾ ಗ್ರಾಮದಲ್ಲಿನ ಗುರುಘರ್‌ನ ಗೋಡೆ ಧ್ವಂಸಗೊಳಿಸಿದ ಘಟನೆಯನ್ನೂ ಮಾಯಾವತಿ ಪ್ರಸ್ತಾಪಿಸಿದರು. ಸಂತ ಸಮಾಜ ಮತ್ತು ಬಿಎಸ್‌ಪಿ ಈ ವಿಚಾರದಲ್ಲಿ ಧ್ವನಿ ಎತ್ತಿದ ನಂತರ ಬಂಧನಗಳು ನಡೆದವು ಹಾಗೂ ಅಂತಿಮವಾಗಿ ಆಮ್ ಆದ್ಮಿ ಪಕ್ಷದ ಸರ್ಕಾರ ಗುರುಘರ್ ಅನ್ನು ಮರುನಿರ್ಮಿಸಲು ಒಪ್ಪಿಕೊಂಡಿತು ಎಂದು ಅವರು ಹೇಳಿದರು.
ಬಿಜೆಪಿ ಮತ್ತು ಆಪ್ ಎರಡೂ ಪಕ್ಷಗಳ ರಾಜಕೀಯ ತಂತ್ರಗಳ ಬಗ್ಗೆ ಸಮುದಾಯ ಎಚ್ಚರಿಕೆಯಿಂದ ಇರಬೇಕು ಎಂದು ಮಾಯಾವತಿ ಕರೆ ನೀಡಿದರು. ಸಂತ ರವಿದಾಸ್ ಜೀ ಅವರ ಆದರ್ಶಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಲು ಅವಕಾಶ ನೀಡಬಾರದು ಎಂದು ಅವರು ಹೇಳಿದರು.
‘ಗುಲಾಮಗಿರಿಯ ಅಂತ್ಯ ಮತ್ತು ಬೇಗಂಪುರ’ ಎಂಬ ಸಂಕಲ್ಪದೊಂದಿಗೆ ತುಘಲಕಾಬಾದ್‌ನಿಂದ ಧಲೇತಾ ಗ್ರಾಮದವರೆಗೆ ಸಾಗುತ್ತಿರುವ ಸಮ್ಮಾನ್ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಸಂತ ಸಮಾಜಕ್ಕೆ ಆಹ್ವಾನ ನೀಡಲಾಗಿದೆ ಎಂದು ಮಾಯಾವತಿ ತಿಳಿಸಿದರು.
ಸಂತ ರವಿದಾಸ್ ಜೀ ಅವರ ಆದರ್ಶಗಳಾದ ಗೌರವ, ಸಮಾನತೆ ಮತ್ತು ನ್ಯಾಯದ ಸಂದೇಶವನ್ನು ಪ್ರತಿಯೊಬ್ಬರಿಗೂ ತಲುಪಿಸುವಂತೆ ಅವರು ಕರೆ ನೀಡಿದರು. ಗುರುಘರ್‌ಗಳ ಘನತೆ, ಧಾರ್ಮಿಕ ಹಕ್ಕುಗಳು ಹಾಗೂ ಸಂತ ರವಿದಾಸ್ ಜೀ ಅವರ ಕನಸಿನಂತೆ ಗುಲಾಮಗಿರಿಯಿಂದ ಮುಕ್ತವಾದ ಸಮಾಜ ನಿರ್ಮಿಸುವ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಮಾಯಾವತಿ ಹೇಳಿದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 