ಅತ್ಯಾಚಾರ ಆರೋಪ: ಮುಂಬೈನಲ್ಲಿ ಚಲನಚಿತ್ರ ನಿರ್ದೇಶಕ ಶಕೀಲ್ ನೂರಾನಿ ಬಂಧನ

ಅತ್ಯಾಚಾರ ಆರೋಪ: ಮುಂಬೈನಲ್ಲಿ ಚಲನಚಿತ್ರ ನಿರ್ದೇಶಕ ಶಕೀಲ್ ನೂರಾನಿ ಬಂಧನ Filmmaker Shakeel Noorani Arrested in Mumbai on Rape Charges

ಮುಂಬೈ, ಆ. 9: 33 ವರ್ಷದ ನಟಿಯೊಬ್ಬರು ದಾಖಲಿಸಿದ ಅತ್ಯಾಚಾರ ದೂರಿನ ಹಿನ್ನೆಲೆಯಲ್ಲಿ ಚಲನಚಿತ್ರ ನಿರ್ದೇಶಕ ಶಕೀಲ್ ನೂರಾನಿಯನ್ನು ಮಾಲ್ವಾಣಿ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ದೂರುದಾರ ನಟಿ 2016ರಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ನೂರಾನಿಯನ್ನು ಭೇಟಿಯಾಗಿದ್ದರು. ಬಳಿಕ ಚಿತ್ರದಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿ, ಸ್ಕ್ರಿಪ್ಟ್ ಓದುವ ನೆಪದಲ್ಲಿ ನೂರಾನಿ ತಮ್ಮ ಮಾಲ್ವಾಣಿ ನಿವಾಸಕ್ಕೆ ಕರೆಯಿಸಿಕೊಂಡಿದ್ದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ನೂರಾನಿ ತಮಗೆ ಪಾನೀಯವೊಂದನ್ನು ನೀಡಿದ್ದು, ಅದನ್ನು ಸೇವಿಸಿದ ಬಳಿಕ ತಾನು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದೆ. ನಂತರ ಅವರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. ಅಲ್ಲದೆ, ಹಲವು ಸಂದರ್ಭಗಳಲ್ಲಿ ಲೈಂಗಿಕ ಕಿರುಕುಳ ನೀಡಿದ್ದು, ವಿಡಿಯೋಗಳನ್ನು ಬಳಸಿ ಬೆದರಿಕೆ ಹಾಕಿದ್ದರು ಎಂದು ಕೂಡ ಅವರು ದೂರಿದ್ದಾರೆ.

ದೂರಿನ ಆಧಾರದ ಮೇಲೆ ಮಾಲ್ವಾಣಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್‌ಗಳಾದ 64(2)(M), 123, 351(2) ಮತ್ತು 88ರ ಅಡಿಯಲ್ಲಿ ನೂರಾನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

73 ವರ್ಷದ ನಿರ್ದೇಶಕನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಆಗಸ್ಟ್ 12ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಕೀಲ್ ನೂರಾನಿ ಅವರು ಸುನೀಲ್ ಶೆಟ್ಟಿ ಅಭಿನಯದ ಬಡೆ ದಿಲ್ ವಾಲಾ ಹಾಗೂ ಗೋವಿಂದ ಅಭಿನಯದ ಜೋರು ಕಾ ಗುಲಾಮ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.