ಪುಣೆ, ಅ 13: ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಲ್ಲಿ ತೋರಿದ ಅದ್ಭುತ ಪ್ರದರ್ಶನ ನೆರವಿನಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಇನಿಂಗ್ಸ್ ಹಾಗೂ 137 ರನ್ಗಳಿಂದ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಕೊಹ್ಲಿ ಪಡೆ 2-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು.
ಇಲ್ಲಿನ, ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಫಾಲೋ ಆನ್ಗೆ ಸಿಲುಕಿ ದ್ವಿತೀಯ ಇನಿಂಗ್ಸ್ ಆರಂಭಸಿದ ದಕ್ಷಿಣ ಆಫ್ರಿಕಾ ತಂಡ 67.2 ಓವರ್ ಗಳಲ್ಲಿ 189 ರನ್ ಗಳಿಸಿ ಸರ್ವ ಪತನವಾಯಿತು. ಇದರೊಂದಿಗೆ ತವರು ನೆಲದಲ್ಲಿ ಭಾರತ ತಂಡ ಸತತ 11 ಸರಣಿ ಗೆದ್ದು ವಿಶೇಷ ಸಾಧನೆ ಮಾಡಿತು. ತವರು ಮಣ್ಣಿನಲ್ಲಿ ಅತಿ ಹೆಚ್ಚು ಟೆಸ್ಟ್ ಸರಣಿ ಗೆದ್ದ ವಿಶ್ವದ ಮೊದಲ ತಂಡ ಎಂಬ ಇತಿಹಾಸವನ್ನು ಕೊಹ್ಲಿ ಪಡೆ ಮಾಡುವ ಮೂಲಕ ಆಸ್ಟ್ರೇಲಿಯಾ(10 ಸರಣಿ) ದಾಖಲೆಯನ್ನು ಮುರಿಯಿತು.
ಫಾಲೋ ಆನ್ ಪಡೆದು ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಫ್ರಿಕಾ ಪರ ಆರಂಭಿಕರಾಗಿ ಕಣಕ್ಕೆ ಇಳಿದ ಏಡೆನ್ ಮರ್ಕರಮ್ ಅವರನ್ನು ಇಶಾಂತ್ ಶರ್ಮಾ ಅವರು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು. ನಂತರ ಬಂದ ಥ್ಯೂನಿಸ್ ಡಿ ಬ್ರೂಯಿನ್ (8) ಅವರನ್ನು ಉಮೇಶ್ ಯಾದವ್ ಔಟ್ ಮಾಡಿದರು.
ಪ್ರಥಮ ಇನಿಂಗ್ಸ್ ನಾಲ್ಕು ವಿಕೆಟ್ ಪಡೆದಿದ್ದ ಆರ್. ಅಶ್ವಿನ್ ದ್ವಿತೀಯ ಇನಿಂಗ್ಸ್ನಲ್ಲೂ ಅದೇ ಮೋಡಿ ಮಾಡಿದರು. ಆಫ್ರಿಕಾದ ದೊಡ್ಡ ವಿಕೆಟ್ ಡೀನ್ ಎಲ್ಗರ್(48ರನ್) ಹಾಗೂ ನಾಯಕ ಫಾಫ್ ಡುಪ್ಲೆಸಿಸ್(5) ಅವರನ್ನು ಕೆಡವಿದರು.
ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟಿಂಗ್ ಮಾಡುತ್ತಿದ್ದ ಡೀನ್ ಎಲ್ಗರ್ 72 ಎಸೆತಗಳಲ್ಲಿ ಎಂಟು ಬೌಂಡರಿಯೊಂದಿಗೆ 48 ರನ್ ಗಳಿಸಿದ್ದರು. ಆ ಮೂಲಕ ದೊಡ್ಡ ಇನಿಂಗ್ಸ್ ಕಟ್ಟುತ್ತಾರೆಂದೇ ಎಲ್ಲರು ಭಾವಿಸಿದ್ದರು. ಆದರೆ, ಅವರನ್ನು ಅಶ್ವಿನ್ ಕ್ರೀಸ್ನಲ್ಲಿ ಉಳಿಯಲು ಬಿಡಲಿಲ್ಲ. ಕೇವಲ ಎರಡು ರನ್ಗಳಿಂದ ಅರ್ಧ ಶತಕ ವಂಚಿತರಾಗಿ ನಿರಾಸೆಯಿಂದ ಎಲ್ಗರ್ ಪೆವಿಲಿಯನ್ಗೆ ತೆರಳಿದರು.
ಕ್ವಿಂಟನ್ ಡಿ ಕಾಕ್ (5), ಎಸ್. ಮುತ್ತುಸ್ವಾಮಿ (9) ಬೇಗ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕೆಲ ಕಾಲ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ತೆಂಬಾ ಬವುಮಾ ಭಾರತದ ಬೌಲರ್ಗಳನ್ನು ಕೊಂಚ ಹೊತ್ತು ಎದುರಿಸಿದರು. 63 ಎಸೆತಗಳನ್ನು ಎದುರಿಸಿದ ಅವರು ನಾಲ್ಕು ಬೌಂಡರಿಯೊಂದಿಗೆ 38 ರನ್ ಗಳಿಸಿ ಭರವಸೆ ಮೂಡಿಸಿದ್ದರು. ಆದರೆ, ಅವರನ್ನು ರವೀಂದ್ರ ಜಡೇಜಾ ಮುಂದುವರಿಯಲು ಬಿಡಲಿಲ್ಲ.
ಪ್ರಥಮ ಇನಿಂಗ್ಸ್ನಲ್ಲಿ 109 ರನ್ ಜತೆಯಾಟವಾಡಿದ್ದ ವೆನರ್ಾನ್ ಫಿಲೆಂಡರ್ ಹಾಗೂ ಕೇಶವ್ ಮಹರಾಜ್ ಜೋಡಿ ದ್ವಿತೀಯ ಇನಿಂಗ್ಸ್ ನಲ್ಲೂ ಸ್ವಲ್ಪ ಹೊತ್ತು ಕಾಡಿತು. ಈ ಜೋಡಿ ಮುರಿಯದ ಎಂಟನೇ ವಿಕೆಟ್ಗೆ 56 ರನ್ ಗಳಿಸಿತು. ಉತ್ತಮ ಬ್ಯಾಟಿಂಗ್ ಮಾಡಿದ ಫಿಲೆಂಡರ್ 37 ರನ್ ಹಾಗೂ ಕೇಶವ್ ಮಹರಾಜ್ 22 ರನ್ ಗಳಿಸಿ ಕ್ರಮವಾಗಿ ಉಮೇಶ್ ಯಾದವ್ ಮತ್ತು ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಕಗಿಸೋ ರಬಾಡ(4) ಅವರನ್ನು ಉಮೇಶ್ ಯಾದವ್ ಬಲಿ ತೆಗೆದುಕೊಂಡರು.
ಅಂತಿಮವಾಗಿ ದಕ್ಷಿಣ ಆಫ್ರಿಕಾ 67.2 ಓವರ್ ಗಳಲ್ಲಿ 189 ರನ್ಗಳಿಗೆ ಆಲೌಟ್ ಆಗುವ ಮೂಲಕ ಇನ್ನೂ ಒಂದು ದಿನ ಬಾಕಿ ಇರುವಾಗಲೇ ಸೋಲು ಒಪ್ಪಿಕೊಂಡಿತು.
ಭಾರತದ ಪರ ಉತ್ತನ ಬೌಲಿಂಗ್ ಮಾಡಿದ ಉಮೇಶ್ ಯಾದವ್ ಹಾಗೂ ರವೀಂದ್ರ ಜಡೇಜಾ ತಲಾ ಮೂರು ವಿಕೆಟ್ ಪಡೆದುಕೊಂಡರು. ಎರಡು ವಿಕೆಟ್ ಪಡೆದ ಆರ್. ಅಶ್ವಿನ್ ಇವರಿಗೆ ಸಾಥ್ ನೀಡಿದರು.
ಕೊಹ್ಲಿಗೆ ಮೂರನೇ ಸ್ಥಾನ:
ವಿರಾಟ್ ಕೊಹ್ಲಿ ನಾಯಕತ್ವದ 50 ನೇ ಪಂದ್ಯದಲ್ಲಿ ಭಾರತ ಜಯ ಸಾಧಸಿದೆ. ಆ ಮೂಲಕ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 30 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಅತಿ ಹೆಚ್ಚು ಟೆಸ್ಟ್ ಪಂದ್ಯಗಳು ಗೆದ್ದ ವಿಶ್ವದ ಮೂರನೇ ನಾಯಕ ಎಂಬ ಸಾಧನೆ ವಿರಾಟ್ ಕೊಹ್ಲಿ ಮುಡಿಗೇರಿಸಿಕೊಂಡರು. ಮೊದಲೆರಡು ಸ್ಥಾನಗಳಲ್ಲಿ ಕ್ರಮವಾಗಿ ಆಸ್ಟ್ರೇಲಿಯಾದ ಸ್ಟೀವ್ ವಾ (37) ಹಾಗೂ ರಿಕ್ಕಿ ಪಾಂಟಿಂಗ್(35) ಇದ್ದಾರೆ.
ಸಂಕ್ಷಿಪ್ತ ಸ್ಕೋರ್
ಭಾರತ
ಪ್ರಥಮ ಇನಿಂಗ್ಸ್: 156. 3 ಓವರ್ ಗಳಲ್ಲಿ 601/5 (ಡಿ) (ವಿರಾಟ್ ಕೊಹ್ಲಿ ಔಟಾಗದೆ 254, ಮಯಾಂಕ್ ಅಗರ್ವಾಲ್ 108, ರವೀಂದ್ರ ಜಡೇಜಾ 91, ಅಜಿಂಕ್ಯಾ ರಹಾನೆ 59, ಚೇತೇಶ್ವರ ಪೂಜಾರ 58; ಕಗಿಸೋ ರಬಾಡ 93 ಕ್ಕೆ 3)
ದಕ್ಷಿಣ ಆಫ್ರಿಕಾ
ಪ್ರಥಮ ಇನಿಂಗ್ಸ್: 105.4 ಓವರ್ ಗಳಲ್ಲಿ 275 (ಕೇಶವ್ ಮಹರಾಜ್ 72, ಫಾಫ್ ಡುಪ್ಲೆಸಿಸ್ 64, ವೆನರ್ಾನ್ ಫಿಲೆಂಡರ್ ಔಟಾಗದೆ 44; ಆರ್. ಅಶ್ವಿನ್ 69 ಕ್ಕೆ 4, ಉಮೇಶ್ ಯಾದವ್ 37 ಕ್ಕೆ 3, ಮೊಹಮ್ಮದ್ ಶಮಿ 44 ಕ್ಕೆ 2)
ದ್ವಿತೀಯ ಇನಿಂಗ್ಸ್: 67.2 ಓವರ್ ಗಳಲ್ಲಿ 189/10 (ಡೀನ್ ಎಲ್ಗರ್ 48, ತೆಂಬಾ ಬವುಮಾ 38, ವೆನರ್ಾನ್ ಫಿಲೆಂಡರ್ 37, ಕೇಶವ್ ಮಹರಾಜ್ 22 ; ಉಮೇಶ್ ಯಾದವ್ 22 ಕ್ಕೆ 3, ರವೀಂದ್ರ ಜಡೇಜಾ 52 ಕ್ಕೆ 3, ಆರ್. ಅಶ್ವಿನ್ 45 ಕ್ಕೆ 2, ಇಶಾಂತ್ ಶರ್ಮಾ 17 ಕ್ಕೆ 1, )