ಮುಸ್ಲಿಮರ ವಿರುದ್ಧ ಭಾರತದಲ್ಲಿ ತಾರತಮ್ಯ ಆರೋಪ: ಪಾಕಿಸ್ತಾನಕ್ಕೆ ತಿರುಗೇಟು ನೀಡಿದ ಭಾರತ

ನವದೆಹಲಿ, ಏ.20,ಸಾಂಕ್ರಾಮಿಕ  ಕೊರೊನಾವೈರಸ್ ಹಿನ್ನೆಲೆಯಲ್ಲಿ ದೇಶದ ಮುಸ್ಲಿಮರ ವಿರುದ್ಧದ ತಾರತಮ್ಯವೆಸಗಲಾಗುತ್ತಿದೆ ಎಂಬ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಪವನ್ನು ಭಾರತ ಸೋಮವಾರ ಸಾರಾಸಗಟಾಗಿ ತಿರಸ್ಕರಿಸಿದೆ.ವಿಲಕ್ಷಣ ಪ್ರತಿಕ್ರಿಯೆಗಳು, ಅಸಹ್ಯ ರೀತಿಯಲ್ಲಿ ಆಂತರಿಕ ವ್ಯವಹಾರಗಳನ್ನು ನಿರ್ವಹಿಸಿರುವುದರಿಂದ ಜನರ ಗಮನ ಬೇರೆಡೆ ತಿರುಗಿಸುವ ಪ್ರಯತ್ನವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟೀಕಿಸಿದೆ.'' ಪಾಕಿಸ್ತಾನದ  ನಾಯಕತ್ವದ ವಿಲಕ್ಷಣ ಪ್ರತಿಕ್ರಿಯೆಗಳು ತಮ್ಮ ಆಂತರಿಕ ವ್ಯವಹಾರಗಳ ಅಸಹ್ಯ ನಿರ್ವಹಣೆಯ ಗಮನವನ್ನು ಬೇರೆಡೆ ತಿರುಗಿಸುವ ಪ್ರಯತ್ನವಾಗಿದೆ '' ಎಂದು ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ  ಹೇಳಿದ್ದಾರೆ. " ಕೋವಿಡ್‌-19 ವಿರುದ್ಧ ಹೋರಾಡುವತ್ತ ಗಮನ ಹರಿಸುವ ಬದಲು, ಅವರು ನೆರೆಯ ದೇಶದ ಬಗ್ಗೆ ಆಧಾರರಹಿತ  ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
" ಅಲ್ಪಸಂಖ್ಯಾತರ  ವಿಷಯದಲ್ಲಿ, ಅವರು (ಪಾಕಿಸ್ತಾನದ ನಾಯಕತ್ವ) ತಮ್ಮದೇ ಆದ ಸಂಕಷ್ಟದಲ್ಲಿರುವ ಅಲ್ಪಸಂಖ್ಯಾತ ಸಮುದಾಯಗಳ ಕಳವಳಗಳನ್ನು ಪರಿಹರಿಸಲು ಪ್ರಯತ್ನಿಸಬೇಕು. ಅಲ್ಲಿನ ಅಲ್ಪಸಂಖ್ಯಾತರು ನಿಜವಾಗಿಯೂ ತಾರತಮ್ಯಕ್ಕೊಳಗಾಗಿದ್ದಾರೆ ಎಂದು ಶ್ರೀವಾಸ್ತವ ಅವರು ಇಮ್ರಾನ್‌ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.ಕೊರೋನವೈರಸ್  ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಉದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತ  ಸಮುದಾಯವನ್ನು ಗುರಿಯಾಗಿಸಿಕೊಂಡಿದೆ ಎಂದು ಖಾನ್ ಆರೋಪಿಸಿದ ನಂತರ ಭಾರತ ಈ ಪ್ರತಿಕ್ರಿಯೆ ನೀಡಿದೆ."ಮೋದಿ ಸರ್ಕಾರದ ಕೋವಿಡ್‌-19 ನೀತಿಯ ದುಷ್ಪರಿಣಾಮದಿಂದಾಗಿ ಸಾವಿರಾರು ಜನರು ಸಂಕಷ್ಟಕ್ಕೀಡಾಗಿದ್ದು, ಹಸಿವಿನಿಂದ ಬಳಲುತ್ತಿದ್ದಾರೆ. ಸರ್ಕಾರದ  ವೈಫಲ್ಯವನ್ನು ಬೇರೆಡೆಗೆ ತಿರುಗಿಸಲು ಉದ್ದೇಶಪೂರ್ವಕವಾಗಿ ಮತ್ತು ಹಿಂಸಾತ್ಮಕವಾಗಿ ಮುಸ್ಲಿಮರನ್ನು ಗುರಿಪಡಿಸಲಾಗುತ್ತಿದೆ. ಇದು ಜರ್ಮನಿಯ ಯಹೂದಿಗಳಿಗೆ ನಾಜಿಗಳು ಮಾಡಿದ ರೀತಿಯಲ್ಲಿದೆ ಎಂದು ಖಾನ್ ಟ್ವೀಟ್ ನಲ್ಲಿ ಹೇಳಿದ್ದರು.