ಮುಂಬೈ, ಫೆ 4, ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಗಾಯದಿಂದ ದೀರ್ಘಾವದಿ ಹೊರಗುಳಿದಿದ್ದ ಪೃಥ್ವಿ ಶಾ ತಂಡಕ್ಕೆ ಮರಳಿದ್ದು, ಯುವ ವೇಗಿ ನವದೀಪ್ ಸೈನಿ ಚೊಚ್ಚಲ ಅವಕಾಶ ಪಡೆದುಕೊಂಡಿದ್ದಾರೆ.ದೆಹಲಿ ಪರ ರಣಜಿ ಟ್ರೋಫಿ ವೇಳೆ ಪಾದದ ಗಾಯಕ್ಕೆ ತುತ್ತಾಗಿದ್ದ ಹಿರಿಯ ವೇಗಿ ಇಶಾಂತ್ ಶರ್ಮಾ ಅವರನ್ನೂ
ಟೆಸ್ಟ್ ತಂಡಕ್ಕೆ ಆಯ್ಕೆಮಾಡಲಾಗಿದ್ದು, ಅವರು ಫಿಟ್ನೆಸ್ ಟೆಸ್ಟ್ ಪಾಸ್ ಮಾಡುವ ಅಗತ್ಯವಿದೆ. ಅಲ್ಲದೆ, ಗಾಯದಿಂದ ಮುಂಬರುವ ಏಕದಿನ ಹಾಗೂ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಅಲಭ್ಯರಾಗಿದ್ದಾರೆ. ಏಕದಿನ ಸರಣಿಗೆ ಅವರ ಸ್ಥಾನಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ."ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟಿ-20 ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಎಡ ಕಾಲಿಗೆ ಗಾಯವಾಗಿತ್ತು. ಸೋಮವಾರ ಅವರು ಎಂ.ಆರ್.ಐ ಸ್ಕ್ಯಾನಿಂಗ್ ಗೆ ಒಳಗಾಗಿದ್ದರು. ಬಲಗೈ ಆರಂಭಿಕ ಆರಂಭಿಕ ಬ್ಯಾಟ್ಸ್‌ಮನ್ ಏಕದಿನ ಹಾಗೂ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ. ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ತೆರಳಲಿದ್ದಾರೆ,'' ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ನ್ಯೂಜಿಲೆಂಡ್ ಎ ತಂಡದ ವಿರುದ್ಧ ಭಾರತ ಎ ಪರ ಅದ್ಭುತ ಪ್ರದರ್ಶನ ತೋರಿದ ಶುಭಮನ್ ಗಿಲ್ ಮತ್ತೊಮ್ಮೆ ತಂಡಕ್ಕೆ ಮರಳಿದ್ದಾರೆ ಹಾಗೂ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿರುವ ಯುವ ವೇಗಿ ನವದೀಪ್ ಸೈನಿ ಕೂಟ ಮೊಟ್ಟ ಮೊದಲ ಬಾರಿ ದೀರ್ಘಾವದಿ ಮಾದರಿಯ ತಂಡಕ್ಕೆ ಲಗ್ಗೆ ಇಟ್ಟಿದ್ದಾರೆ. ಭಾರತ ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ಮಯಾಂಕ್ ಅಗರ್ವಾಲ್, ಪೃಥ್ವಿ ಶಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪ ನಾಯಕ), ಹನುಮ ವಿಹಾರಿ, ವೃದ್ದಿಮನ್ ಸಾಹ (ವಿ.ಕೀ), ರಿಷಭ್ ಪಂತ್ (ವಿ.ಕೀ), ಆರ್. ಅಶ್ವಿನ್, ರವೀಂದ್ರ ಜಡೇಜಾ, ಜಸ್ಪ್ರಿತ್ ಬುಮ್ರಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ನವದೀಪ್ ಸೈನಿ, ಇಶಾಂತ್ ಶರ್ಮಾ(ಫಿಟ್ನೆಸ್ ಟೆಸ್ಟ್ ಉತ್ತೀರ್ಣರಾಗಬೇಕು).