ಲೋಕದರ್ಶನ
ವರದಿ
ವಿಜಯಪುರ 20:
ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಭಾರತ ವಿಕಾಸ ಸಂಗಮ
ಈ ಬಾರಿ ವಿಜಯಪುರ ತಾಲೂಕಿನ
ಕಗ್ಗೋಡದಲ್ಲಿ ನಡೆಯುತ್ತಿದ್ದು, ಉತ್ಸವಕ್ಕೆ ಸಕಲ ಸಿದ್ಧತೆಗಳನ್ನು ಭರದಿಂದ
ಕೈಗೊಳ್ಳಲಾಗುತ್ತಿದೆ.
ಭಾರತ
ವಿಕಾಸ ಸಂಗಮ, ಶ್ರೀ ಸಿದ್ದೇಶ್ವರ ಸಂಸ್ಥೆ,
ಬಾಗಲಕೋಟದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ಉತ್ಸವದ
ಯಶಸ್ಸಿಗೆ ಟೊಂಕಕಟ್ಟಿ ನಿಂತಿದ್ದಾರೆ.
ಉತ್ಸವದ ಹಿನ್ನೆಲೆಯಲ್ಲಿ ಇದೇ ದಿನಾಂಕ 23 ರಂದು
`ಮಾತೃ ಸ್ಪಂದನ' ಎಂಬ ಹೆಸರಿನ ಭವ್ಯ
ಶೋಭಾಯಾತ್ರೆ ಕೈಗೊಳ್ಳಲಾಗುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ
ನೀಡಿದ ಭಾರತ ವಿಕಾಸ ಸಂಗಮದ
ಜಿಲ್ಲಾಧ್ಯಕ್ಷ ಸಂ.ಗು. ಸಜ್ಜನ,
ಅಕ್ಟೋಬರ್ 23 ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಅವರ
ಜನ್ಮದಿನ. ಈ ಮಹತ್ವದ ದಿನದಂದು
ಈ ಅರ್ಥಪೂರ್ಣ ಕಾರ್ಯಕ್ರಮ, ಶೋಭಾಯಾತ್ರೆ ನಡೆಯಲಿದೆ. ಅಂದು ಮಧ್ಯಾಹ್ನ 3.30 ರಿಂದ
ಸಂಜೆ 5.30ರವರೆಗೆ ಈ ಬೃಹತ್ ಶೋಭಾ
ಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ
ಸಂಚರಿಸಲಿದೆ. ನಗರದ ಶಂಕರಲಿಂಗ ದೇವಸ್ಥಾನದಿಂದ
ಆರಂಭವಾಗುವ ಶೋಭಾ ಯಾತ್ರೆ ಛತ್ರಪತಿ ಶಿವಾಜಿ ಮಹಾರಾಜ ವೃತ್ತ, ಡೋಬಳೆ ಗಲ್ಲಿ, ಹೊಸ ವಿಠ್ಠಲ ಮಂದಿರ,
ಗಾಂಧಿವೃತ್ತ ಮಾರ್ಗವಾಗಿ ಸಿದ್ದೇಶ್ವರ
ದೇವಸ್ಥಾನ ತಲುಪಿ ಸಂಪನ್ನಗೊಳ್ಳಲಿದೆ ಎಂದು ವಿವರಿಸಿದರು.
ವಿಕಾಸ ಅಕಾಡೆಮಿಯ ಪಲ್ಲವಿ ಪಾಟೀಲ ಮಾತನಾಡಿ, ಶೋಭಾಯಾತ್ರೆಯ ಬಳಿಕ ಸಿದ್ದೇಶ್ವರ
ದೇವಾಲಯದ ಮುಂಭಾಗದಲ್ಲಿ ಸಂಜೆ 5.30ಕ್ಕೆ ಬೃಹತ್ ಸಾರ್ವಜನಿಕ
ಸಭೆ ಜರುಗಲಿದೆ. ಖ್ಯಾತ ವಾಗ್ಮಿ ಚೈತ್ರಾ ಕುಂದಾಪುರ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬುರಣಾಪುರದ ಯೋಗೇಶ್ವರಿ
ಮಾತೆ, ಶಾರದಾಶ್ರಮದ ಕೈವಲ್ಯಮಯಿ
ಮಾತಾಜಿ, ಪ್ರಜಾಪಿತ ಬ್ರಹ್ಮಕುಮಾರಿ ನೀಲೂಜಿ ಅಕ್ಕ ಪಾಲ್ಗೊಳ್ಳಲಿದ್ದಾರೆ.
ವಿವಿಧ ರಾಜ್ಯಗಳ ಸಂಸ್ಕೃತಿ ಬಿಂಬಿಸುವ ಈ ಶೋಭಾಯಾತ್ರೆ ಅತ್ಯಂತ
ವೈಭವದಿಂದ ನಡೆಯಲಿದೆ. ದೇಶಪ್ರೇಮಿಗಳ ರೂಪಕಗಳು, ನಾಡಿನ ಶರಣರ, ಸಂತರ ರೂಪಕಗಳು ಶೋಭಾಯಾತ್ರೆಯಲ್ಲಿರಲಿವೆ.
ಜನಪದ ನೃತ್ಯ ಸಹ ಇರಲಿದೆ ಎಂದು
ವಿವರಿಸಿದರು.
240 ಎಕರೆ
ಪ್ರದೇಶದಲ್ಲಿ ಸಿದ್ಧತೆ
ಭಾರತೀಯ ಸಂಸ್ಕೃತಿ ಉತ್ಸವ ಡಿ. 24 ರಿಂದ 31ರವರೆಗೆ 8 ದಿನಗಳ ಕಾಲ ತಾಲೂಕಿನ ಕಗ್ಗೋಡದಲ್ಲಿರುವ
ರಾಮನಗೌಡ ಪಾಟೀಲ ಯತ್ನಾಳ ಗೋರಕ್ಷಾ ಕೇಂದ್ರದಲ್ಲಿ ನಡೆಯಲಿದೆ.
ಸಿದ್ಧತೆ ಕುರಿತು ವಿವರಣೆ ನೀಡಿದ ಸಂ.ಗು. ಸಜ್ಜನ
ಅವರು, ಸುಮಾರು 240 ಎಕರೆ ಪ್ರದೇಶದಲ್ಲಿ ಈ
ಬೃಹತ್ ಕಾರ್ಯಕ್ರಮ ಸಂಘಟಿಸಲಾಗುತ್ತಿದ್ದು, 1 ಲಕ್ಷ ಜನ ಕುಳಿತುಕೊಂಡು
ವೀಕ್ಷಿಸಲು ಅನುಕೂಲವಾಗುವಂತೆ ಬೃಹತ್ ವೇದಿಕೆ ತಯಾರಿ ನಡೆದಿದೆ ಎಂದರು. ಈಗಾಗಲೇ 120 ಜಮೀನು ಸಮತಟ್ಟುಗೊಳಿಸುವ ಕೆಲಸ ಭರದಿಂದ ನಡೆದಿದೆ.
ಈ ಕೆಲಸವನ್ನು ನಗರದ ಗುತ್ತಿಗೆದಾರರೆಲ್ಲ ಸೇರಿಕೊಂಡು
ತಮ್ಮದೇ ಉಚಿತವಾಗಿ ಈ ಕಾರ್ಯ ಕೈಗೊಳ್ಳುತ್ತಿದ್ದಾರೆ
ಎಂದರು.
ಉತ್ಸವದ ಎರಡನೇಯ ದಿನ ಡಿ. 25 ರಂದು
10ವರ್ಷದೊಳಗಿನ 1 ಲಕ್ಷ ಮಕ್ಕಳಿಗೆ ಬೃಹತ್
ಮಾತೃಭೋಜನ ಕಾರ್ಯಕ್ರಮ ನಡೆಯಲಿದೆ. ಇದರೊಟ್ಟಿಗೆ ಈ ಮಕ್ಕಳು ತಮ್ಮ
ಮಾತೆಯರ ಪಾದಪೂಜೆ ನೆರವೇರಿಸಲಿದ್ದಾರೆ. ಬಳಿಕ ತಾಯಿಂದರೇ ಮಕ್ಕಳಿಗೆ
ಕೈತುತ್ತು ಉಣ್ಣಿಸುವ ಅಭೂತಪೂರ್ವ ಕಾರ್ಯಕ್ರಮ ನಡೆಯಲಿದೆ ಎಂದರು.
ಮಾತೃಸಂಗಮ ಮಹಿಳಾ ಪ್ರಮುಖರಾದ ಶೈಲಜಾ ಬಿ. ಪಾಟೀಲ ಯತ್ನಾಳ,
ಲಕ್ಷ್ಮೀ ಕನ್ನೊಳ್ಳಿ, ಸಿದ್ದರಾಮಪ್ಪ ಉಪ್ಪಿನ, ಎನ್.ಎಂ. ಗೋಲಾಯಿ,
ಭಾರತ ವಿಕಾಸ ಸಂಗಮ ಜಿಲ್ಲಾ ಸಂಚಾಲಕ
ಸಂಗನಗೌಡ ಪಾಟೀಲ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.