ನವದೆಹಲಿ, ಅ 4: ಸುಸ್ಥಿರ ಮತ್ತು ಕೈಗೆಟಕುವ ಇಂಧನ ಭಾರತದ ಆದ್ಯತೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೆಂದ್ರ ಪ್ರಧಾನ್ ಪ್ರತಿಪಾದಿಸಿದ್ದಾರೆ. ನವದೆಹಲಿಯಲ್ಲಿ ಭಾರತ ಆರ್ಥಿಕ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಕಚ್ಚಾ ತೈಲ ಮತ್ತು ಅನಿಲ ಆಮದು ಮಾಡಿಕೊಳ್ಳುವ ಬಹುತೇಕ ದಕ್ಷಿಣ ಏಷ್ಯಾ ರಾಷ್ಟ್ರಗಳು ಬೆಲೆ ಅಸ್ಥಿರತೆ ಮತ್ತು ತೈಲ ಪೂರೈಕೆ ಬಗೆಗಿನ ಕಳವಳ ವ್ಯಕ್ತಪಡಿಸಿವೆ. ಮೂರನೇ ಅತಿದೊಡ್ಡ ಇಂಧನ ಬಳಕೆದಾರ ರಾಷ್ಟ್ರವಾಗಿ ಹೊರಹೊಮ್ಮಿರುವ ಭಾರತ, ದೇಶದಲ್ಲಿನ ಇಂಧನ ಬಡತನ ನಿವಾರಣೆಗೆ ಸರ್ಕಾರ ಅನೇಕ ಉಪಕ್ರಮಗಳನ್ನು ಕೈಗೊಂಡಿದ್ದು ಜಾಗತಿಕವಾಗಿ ಪ್ರಮುಖ ಪಾತ್ರ ವಹಿಸಿದೆ ಎಂದು ಸಚಿವರು ಹೇಳಿದರು. ಐದು ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮಲು ದೇಶದ ಎಲ್ಲ ನಾಗರಿಕರಿಗೆ ಇಂಧನ ಲಭ್ಯತೆ ಖಾತರಿಪಡಿಸಬೇಕಿದೆ. 2035 ರ ವೇಳೆಗೆ ವಾರ್ಷಿಕವಾಗಿ ಇಂಧನ ಬೇಡಿಕೆ ಶೇ 4.2 ರಷ್ಟು ಹೆಚ್ಚಲಿದೆ ಎಂದು ಅವರು ತಿಳಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿಪಾದಿಸುವಂತೆ ಇಂಧನ ಲಭ್ಯತೆ, ಇಂಧನ ಸಾಮಥ್ರ್ಯ, ಇಂಧನ ಸುಸ್ಥಿರತೆ ಮತ್ತು ಇಂಧನ ಭದ್ರತೆ ನಾಲ್ಕು ಬುನಾದಿಗಳನ್ನು ಬಲಪಡಿಸುವುದು ಭಾರತದ ಇಂಧನ ಮುನ್ನೋಟ ಎಂದು ಧರ್ಮೆಂದ್ರ ಪ್ರಧಾನ್ ಹೇಳಿದ್ದಾರೆ. ಇಂಧನ ಯೋಜನೆಯ ಸಮಗ್ರ ವಿಧಾನದ ಪ್ರಮುಖ ಗುರಿ ಇಂಧನ ನ್ಯಾಯವಾಗಿರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 2022 ರ ವೇಳೆಗೆ ನವೀಕರಿಸಹುದಾದ ಇಂಧನ ಸಾಮಥ್ರ್ಯವನ್ನು 175 ಗಿಗಾವ್ಯಾಟ್ ಗಿಂತ ಹೆಚ್ಚು ಮಾಡುವ ಮೂಲಕ ಪಳೆಯುಳಿಕೆಯಲ್ಲದ ಇಂಧನ ಬಳಕೆ ಪ್ರಮಾಣವನ್ನು ಭಾರತ ಹೆಚ್ಚಿಸಲಿದೆ. ಇ - ಮೊಬಿಲಿಟಿ ಮೂಲಕ ಸಾರಿಗೆ ವಲಯವನ್ನು ಪರಿಸರ ಸ್ನೇಹಿಯಾಗಿಸಲಾಗುವುದು ಎಂದು ಧರ್ಮೆಂದ್ರ ಪ್ರಧಾನ್ ವಿವರಿಸಿದ್ದಾರೆ.