ಮೆಲ್ಬೋರ್ನ್ 30: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆದ ಬಾರ್ಡರ್ ಗಾವಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿದೆ. ಬಿಜಿಟಿ ಸರಣಿಯಲ್ಲಿ ಆಸೀಸ್ ತಂಡವು 2-1 ಅಂತರದ ಮುನ್ನಡೆ ಸಾಧಿಸಿದೆ. 184 ರನ್ ಸೋಲಿನ ಬಳಿಕ ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪುವ ಆಸೆಗೆ ದೊಡ್ಡ ಹಿನ್ನಡೆಯಾಗಿದೆ.
ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಇಂದು ಮುಕ್ತಾಯವಾದ 4ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 339 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 2ನೇ ಇನ್ನಿಂಗ್ಸ್ ನ ಆರಂಭದಿಂದಲೂ ರನ್ ಗಳಿಸಲು ತಿಣುಕಾಡಿತು.
ಭಾರತದ ಪರ ಯಶಸ್ವಿ ಜೈಸ್ವಾಲ್ 84 ರನ್ ಮತ್ತು ರಿಷಬ್ ಪಂತ್ 30 ರನ್ ಗಳಿಸಿದ್ದು ಬಿಟ್ಟರೆ ಉಳಿದಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ಕೂಡ ದಾಟಲಿಲ್ಲ. ಆಸ್ಟ್ರೇಲಿಯಾದ ಬೌಲರ್ ಗಳ ಸಾಂಘಿಕ ಹೋರಾಟಕ್ಕೆ ಮಣಿದ ಭಾರತ ಅಂತಿಮವಾಗಿ ಕೇವಲ 155 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಬರೊಬ್ಬರಿ 184ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ಸೋಲಿನ ಬಳಿಕ ಭಾರತದ ಫೈನಲ್ ಪ್ರವೇಶದ ಅವಕಾಶಗಳು ಕ್ಷೀಣಿಸಿದೆ. ಆದರೆ ಇನ್ನೂ ಅವಕಾಶವಿದೆ. ಡಬ್ಲ್ಯೂಟಿಸಿ ಫೈನಲ್ ಗೆ ಅರ್ಹತೆ ಪಡೆಯಲು, ಭಾರತವು ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯವನ್ನು ಗೆಲ್ಲಬೇಕು. ಮತ್ತೊಂದೆಡೆ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ಎರಡು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ಒಂದೇ ಒಂದು ಪಂದ್ಯ ಗೆಲ್ಲಬಾರದು. ಹೀಗಾದಲ್ಲಿ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಕೆಳಕ್ಕೆ ಜಾರಿ ಭಾರತ ಮೇಲಕ್ಕೇರುತ್ತದೆ.