ವಿಂಡೀಸ್ ವಿರುದ್ದ 53 ರನ್ ಜಯ ದಾಖಲಿಸಿದ ಭಾರತ ವನಿತೆಯರು

 ಆಂಟಿಗುವಾ, ನ.4:   ಭಾರತದ ಸ್ಟಾರ್ ಆಟಗಾರ್ತಿ ಪೂನಮ್ ರಾವತ್ (77) ಹಾಗೂ ಅನುಭವಿ ಹರ್ಮನ್ ಪ್ರೀತ್ ಕೌರ್ (46) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ವನಿತೆಯರು ಇಲ್ಲಿ ನಡೆದಿರುವ ಎರಡನೇ ಏಕದಿನ ಪಂದ್ಯದಲ್ಲಿ 53 ರನ್ ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತು.    ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತದ ಆರಂಭ ಕಳಪೆಯಾಗಿತ್ತು. ಪ್ರಿಯಾ ಪೂನಿಯಾ (5), ಜೆಮಿಮಾ ರೋಡ್ರಿಗಸ್ (0) ರನ್ ಕಲೆ ಹಾಕುವಲ್ಲಿ ವಿಫಲರಾದರು. ಮೂರನೇ ವಿಕೆಟ್ ಗೆ ಮಿಥಾಲಿ ರಾಜ್ ಹಾಗೂ ಪೂನಮ್ ರಾವತ್ ಜೋಡಿ ವಿಂಡೀಸ್ ತಂಡದ ಬೌಲರ್ ಗಳನ್ನು ಕಾಡಿದರು. ಈ ಜೋಡಿ 66 ರನ್ ಕಾಣಿಕೆ ನೀಡಿತು. ಮಿಥಾಲಿ 67 ಎಸೆತಗಳಲ್ಲಿ 40 ರನ್ ಬಾರಿಸಿ ತಂಡಕ್ಕೆ ಆಸರೆಯಾದರು.  ನಾಲ್ಕನೇ ವಿಕೆಟ್ ಗೆ ಹರ್ಮನ್ ಪ್ರೀತ್ ಕೌರ್ ಹಾಗೂ ಪೂನಮ್ ಜೋಡಿ ಭರ್ಜರಿ ಜೊತೆಯಾಟವನ್ನು ನೀಡಿ ತಂಡಕ್ಕೆ ನೆರವಾಯಿತು. ಈ ಜೋಡಿ 93 ರನ್ ಸೇರಿಸಿತು. ಹರ್ಮನ್ 46 ಹಾಗೂ ಪೂನಮ್ ರಾವತ್ 4 ಬೌಂಡರಿ ಒಳಗೊಂಡಂತೆ 77 ರನ್ ಬಾರಿಸಿದರು. ಅಂತಿಮವಾಗಿ ಭಾರತ 50 ಓವರ್ ಗಳಲ್ಲಿ 6 ವಿಕೆಟ್ ಗೆ 191 ರನ್ ಕಲೆ ಹಾಕಿತು. ಸಾಧಾರಣ ಗುರಿಯನ್ನು ಹಿಂಬಾಲಿಸಿದ ವಿಂಡೀಸ್ ತಂಡದ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಆತಿಥೇಯ ತಂಡದ ಪರ ಶೆಮೈನ್ ಕ್ಯಾಂಪ್ಬೆಲ್ (39) ಹಾಗೂ ಸ್ಟಫಾನಿ ಟೇಲರ್ (20)ಅವರನ್ನು ಬಿಟ್ಟರೆ ಉಳಿದೆಲ್ಲಾ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ವಿಂಡೀಸ್ 47.2 ಓವರ್ ಗಳಲ್ಲಿ 138 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್, ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಕಬಳಿಸಿದರು.