ಬೆಳಗಾವಿ, ಸೆಪ್ಟಂಬರ್ 6: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮತ್ತೆ ಭಾರಿ ಮಳೆಯಾಗುತ್ತಿದ್ದು, ಪರಿಣಾಮ ಕೃಷ್ಣಾ ನದಿಯ ಒಳಹರಿವು ಹೆಚ್ಚಳಗೊಂಡು ಅಪಾಯ ಮಟ್ಟ ತಲುಪಿದೆ. ಹೀಗಾಗಿ ಕೃಷ್ಣಾ ನದಿ ದಡದಲ್ಲಿ ವಾಸವಾಗಿರುವ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ ಡಾ. ಎಸ್.ಬಿ ಬೊಮ್ಮನಹಳ್ಳಿ ಆದೇಶಿಸಿದ್ದಾರೆ. ಮಹಾರಾಷ್ಟ್ರದ ಭಾರಿ ಮಳೆಯಾಗುತ್ತಿದ್ದು, ಇನ್ನೂ ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯೆಯಿದೆ ಇದರಿಂದಾಗಿ ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಈಗಾಗಲೇ ಕೃಷ್ಣಾ, ಕೊಯ್ನಾ, ಪಂಚಗಂಗಾ ನದಿಗಳಿಗೆ 2 ಲಕ್ಷ ಕ್ಯೂಸೆಕ್ ನೀರನ್ನು ಬಿಡುವ ನಿರ್ಧಾರ ತೆಗೆದುಕೊಂಡಿದ್ದೇವೆ. ಹೀಗಾಗಿ ಕೃಷ್ಣಾ ನದಿ ಸುತ್ತಮತ್ತ ವಾಸಿಸುತ್ತಿರುವ ಜನ ಎಚ್ಚರಿಕೆ ವಹಿಸಬೇಕೆಂದು ಕೊಲ್ಲಾಪುರ ಜಿಲ್ಲಾಧಿಕಾರಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಕೃಷ್ಣಾ, ದೂದಗಂಗಾ, ವೇದಗಂಗಾ ನದಿಗಳು ತುಂಬಿ ಹರಿಯುತ್ತಿವೆ. ಇದರಿಂದ ಕೃಷ್ಣಾ ನದಿ ಒಳ ಹರಿವಿನಲ್ಲಿ ಹೆಚ್ಚಳವಾಗಿದೆ. ಒಳ ಹರಿವಿನ ಪ್ರಮಾಣ ಎರಡು ಲಕ್ಷ ಕ್ಯೂಸೆಕ್ ಗಡಿ ದಾಟಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಹಾರಾಷ್ಟ್ರ ಸರ್ಕಾರ ಕಟ್ಟೆಚ್ಚರ ಘೋಷಿಸುವ ಸಾಧ್ಯತೆಯಿದೆ. ಭೀಕರ ಪ್ರವಾಹಕ್ಕೆ ತತ್ತರಿಸಿ ಹೋಗಿರುವ ಬೆಳಗಾವಿ ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿತ್ತು. ಇಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಚಾರ ನಡೆಸಿದ ತಂಡ ಹಾನಿಯ ತೀವ್ರತೆಯನ್ನು ಪರಿಶೀಲಿಸಿತು. ಜತೆಗೆ ನೆರೆ ಸಂತ್ರಸ್ತರಿಗೆ ಸದ್ಯದಲ್ಲೇ ಪರಿಹಾರ ಬಿಡುಗಡೆ ಮಾಡುವುದಾಗಿ ಕೇಂದ್ರ ಗೃಹ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಭರವಸೆ ನೀಡಿದ್ದರು.