,ರಬಕವಿ-ಬನಹಟ್ಟಿ: ಮಹಾರಾಷ್ಟ್ರ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣೆಯ ಭೋರ್ಗರೆಯುವ ಅಬ್ಬರ ಹೆಚ್ಚುತ್ತಿರುವುದರಿಂದ ಈಗಾಗಲೇ ಕೃಷ್ಣೆಯ ಅವಕೃಪೆಯಿಂದಾಗಿ ಸಾಕಷ್ಟು ಹಾನಿ ಅನುಭವಿಸಿದ ನದಿಪಾತ್ರದ ಸುತ್ತಲಿನ ಗ್ರಾಮಗಳ ಜನತೆ ಮತ್ತೆ ಕಂಗಾಲಾಗಿದ್ದಾರೆ.
ರಬಕವಿ-ಬನಹಟ್ಟಿ ತಾಲೂಕಿನ ಬಹುತೇಕ ಗ್ರಾಮಗಳು ಕೃಷ್ಣೆಯ ಅಟ್ಟಹಾಸದೆದುರು ಈಗಾಗಲೇ ಕಂಗಾಲಾಗಿದ್ದು,ಮತ್ತೊಮ್ಮೆ ಪ್ರವಾಹದ ಲಕ್ಷಣಗಳು ಗೋಚರಿಸುತ್ತಿರುದರಿಂದ ಮತ್ತು ಸದ್ಯ ನದಿ ಪಾತ್ರದಿಂದ ಹೊರಬಂದು ಪಕ್ಕದ ಜಮೀನುಗಳಲ್ಲಿ ಕೃಷ್ಣೆಯ ನೀರು ಹರಿಯುತ್ತಿರುವುದರಿಂದ ತಮ್ಮ ಭವಿತವ್ಯದ ಬದುಕು ಹೇಗಿದೆಯೋ ಎಂಬ ಆತಂಕದಲ್ಲಿದ್ದಾರೆ.ತಾಲೂಕಿನ ರಬಕವಿ, ಮದನಮಟ್ಟಿ, ಹಳಿಂಗಳಿ, ತಮದಡ್ಡಿ,ಆಸ್ಕಿ,ಆಸಂಗಿ, ಕುಲಹಳ್ಳಿ ಮತ್ತು ಹಿಪ್ಪರಗಿ ಗ್ರಾಮಸ್ಥರು ಎಲ್ಲಿ ಮತ್ತೆ ಕೃಷ್ಣೆ ಕೋಪಗೊಂಡು ಅನಾಹುತ ಸೃಷ್ಠಿಸುವಳೋ ಎಂದು ಭಯಭೀತರಾಗಿದ್ದು,ಕಳೆದ ತಿಂಗಳ ದುರ್ಘಟನೆ ಮರೆಯುತ್ತಿರುವಾಗಲೇ ಮತ್ತದೇ ಭಯ ಎಲ್ಲರಲ್ಲಿ ಆವರಿಸಿದೆ.
ರಬಕವಿ-ಬನಹಟ್ಟಿಯಲ್ಲಿ ತಾಲೂಕಿನ ಎಲ್ಲೆಡೆ ಭಾನುವಾರ ರಾತ್ರಿಯಿಡೀ ಮಳೆ ಸುರಿದಿದ್ದು,ಮನೆ ಕುಸಿತ ,ಸಿಡಿಲಿನ ಪ್ರಕೋಪಗಳಂತ ಯಾವುದೇ ದುರ್ಘಟನೆ ಸಂಭವಿಸಿಲ್ಲ.