ನವದೆಹಲಿ, ಮೇ 18,ಲಾಕ್‌ಡೌನ್ ಅವಧಿಯಲ್ಲಿ ದೇಶಾದ್ಯಂತ ಕೌಂಟುಂಬಿಕ ಹಿಂಸಾಚಾರ ಪ್ರಕರಣಗಳು ದಿಢೀರನೆ ಹೆಚ್ಚಾಗುತ್ತಿವೆ ಎಂದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ( ಎನ್‌ಎಎಲ್‌ಎಸ್‌ಎ) ಇತ್ತೀಚೆಗೆ ಬಿಡುಗಡೆ ಮಾಡಿದ ಮಾಹಿತಿ ಬಹಿರಂಗಪಡಿಸಿದೆ.ಎನ್‌ಎಎಲ್‌ಎಸ್‌ಎ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಕಳೆದ ಎರಡು ತಿಂಗಳಲ್ಲಿ ದೇಶದಲ್ಲೇ ಅತಿ ಹೆಚ್ಚು ಕೌಟುಂಬಿಕ ಕಲಹಗಳು ದಾಖಲಾಗಿರುವ ಮೊದಲ ರಾಜ್ಯ ಉತ್ತರಾಖಂಡ. ಹರಿಯಾಣ ಹಾಗೂ ದಿಲ್ಲಿ ಕ್ರಮವಾಗಿಎರಡು ಮತ್ತು ಮೂರನೇ ಸ್ಥಾನಗಳನ್ನು ಅಲಂಕರಿಸಿವೆ.ಎನ್‌ಎಎಲ್‌ಎಸ್‌ಎ ನೀಡಿದ ವರದಿಯು ಲಾಕ್‌ಡೌನ್ ಪ್ರಾರಂಭದಿಂದ ಮೇ 15 ರವರೆಗೆ ಪ್ರಕರಣಗಳನ್ನು ತೋರಿಸುತ್ತದೆ ಹಾಗೂ ಒಟ್ಟು 28 ರಾಜ್ಯ ಕಾನೂನು ಸೇವೆಗಳ (ಎಸ್‌ಎಲ್‌ಎ) ಮೂಲಕ ಈ ದಾಖಲೆಯನ್ನು ಸಂಗ್ರಹಿಸಲಾಗಿದೆ. ಉತ್ತರಾಖಂಡದಲ್ಲಿ ಒಟ್ಟು 144 ಕೌಟುಂಬಿಕ ಹಿಂಸಾಚಾರ ಪ್ರಕರಣಗಳು ವರದಿಯಾಗಿವೆ. ಹರಿಯಾಣದಿಂದ 79 ಪ್ರಕರಣಗಳು ಮತ್ತು 69 ಪ್ರಕರಣಗಳು ದೆಹಲಿಯಿಂದ ವರದಿಯಾಗಿವೆ. ತೆಲಂಗಾಣದ ಮಹಿಳೆಯರು ಹೆಚ್ಚಾಗಿ ಕೌಟುಂಬಿಕ ಹಿಂಸಾಚಾರವನ್ನು ಎದುರಿಸಿದ್ದಾರೆ. ಏಪ್ರಿಲ್‌ನಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್‌ಗಳಲ್ಲಿ ಶೇ. 86ರಷ್ಟು ಕೌಟುಂಬಿಕ ಹಿಂಸಾಚಾರಗಳು ಪ್ರಕರಣಗಳು ದಾಖಲಾಗಿವೆ.ಭಾರತದಲ್ಲಿ ಮಾತ್ರ ಕೌಟುಂಬಿಕ ಹಿಂಸಾಚಾರದ ಪ್ರಕರಣಗಳು ಹೆಚ್ಚಾಗುತ್ತಿಲ್ಲ. ಲಾಕ್‌ಡೌನ್ ಅನ್ನು ಇಡೀ ವಿಶ್ವದಾದ್ಯಂತ ವಿಧಿಸಲಾಗಿದ್ದು, ಎಲ್ಲ ಕಡೆಯೂ ಸಹಜವಾಗಿ ಕೌಟುಂಬಿಕ ಹಿಂಸಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಈ ಜಾಗತಿಕ ಸಮಸ್ಯೆಯನ್ನು ಎದುರಿಸಲು ಪ್ರಪಂಚದಾದ್ಯಂತದ ವಿವಿಧ ಕೌಟುಂಬಿಕ ಹಿಂಸಾಚಾರ ಸಹಾಯವಾಣಿಗಳು ಮತ್ತು ಸಂಸ್ಥೆಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ.