ಕೇಂದ್ರದ ಯೋಜನೆಗಳಡಿ ಸಾಲ ಮಂಜೂರು ಹೆಚ್ಚಿಸಿ: ನಿರ್ಮಲಾ
ಬೆಂಗಳೂರು 10: ದಕ್ಷಿಣ ವಲಯಗಳ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು ಪಿಎಂ ಮುದ್ರ, ಪಿಎಂ ವಿಶ್ವಕರ್ಮದಂತಹ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಡಿ ಸಾಲ ಮಂಜೂರಾತಿಯನ್ನು ಹೆಚ್ಚಿಸಬೇಕು ಎಂದು ನಿರ್ದೇಶನ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ, ಹೈನುಗಾರಿಕೆ, ಪಶುಸಂಗೋಪನ, ಮೀನುಗಾರಿಕೆಗೂ ಹೆಚ್ಚಿನ ಸಾಲ ಸೌಲಭ್ಯ ನೀಡಿ ಉತ್ತೇಜಿಸುವಂತೆ ಸೂಚಿಸಿದರು.
ಕೃಷಿ ಚಟುವಟಿಕೆಯ ಜತೆಗೆ ಅದಕ್ಕೆ ಹೊಂದಿಕೊಂಡಿರುವ ಹೈನುಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆಗೂ ಉತ್ತೇಜನ ನೀಡಬೇಕು. ಅದರಲ್ಲೂ ಕೇರಳದಲ್ಲಿ ಮೀನುಗಾರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಸಾಲ ಮಂಜೂರಾತಿ ಹೆಚ್ಚಿಸಬೇಕು ಎಂದರು.
ಸುಸ್ಥಿರ ಸಾಲ ಅಭಿವೃದ್ಧಿಗಾಗಿ ಚಾಲ್ತಿ ಖಾತೆ ಉಳಿತಾಯ ಖಾತೆ (ಸಿಎಎಸ್ಎ) ಠೇವಣಿಯ ಪ್ರಮಾಣ ಹೆಚ್ಚಳ ಮಾಡುವುದರ ಪ್ರಾಮುಖ್ಯ ವಿವರಿಸಿದ ಸಚಿವೆ ನಿರ್ಮಲಾ, ಪಿಎಂ ಜನ್ಧನ್, ಅಟಲ್ ಪಿಂಚಣಿ ಯೋಜನೆಗಳಡಿ ನೀಡಿರುವ ಗುರಿಯನ್ನು ಸಾಧಿಸಬೇಕು. ನಿಷ್ಕ್ರಿಯವಾಗುತ್ತಿರುವ ಪಿಎಂ ಜನ್ಧನ್ ಖಾತೆಗಳು ಸಕ್ರೀಯವಾಗಲು ವಿಶೇಷ ಅಭಿಯಾನ ನಡೆಸಬೇಕು ಎಂದು ಸೂಚಿಸಿದರು.