ಮಹಾಭಾರತದಲ್ಲಿ ದೊಡ್ಡವರಿಂದಾದ ಕೆಲ ತಪ್ಪುಗಳು

ಮುಂಬಯಿಯ ಜೀವನ ವಿದ್ಯಾ ಮಿಶನ್ ಮುಖ್ಯಸ್ಥರೂ ಖ್ಯಾತ ಪ್ರವಚನಕಾರರೂ ಆದ ಸದ್ಗುರು ವಾಮನರಾವ್ ಪೈ ಅವರ ಲೇಖನದ ಒಂದು ಭಾಗ.   

ಭೀಷ್ಮ, ದ್ರೋಣ, ಕರ್ಣರು ತಪ್ಪಿದ್ದೆಲ್ಲಿ ಎನ್ನುವದನ್ನು ವಾಮನರಾವ್ ಪೈ ಅವರು ಅತ್ಯಂತ ತರ್ಕಬದ್ಧವಾಗಿ ತಮ್ಮ ಒಂದು ಪ್ರವಚನದಲ್ಲಿ ವಿವರಿಸಿದ್ದಾರೆ. ಯಾರಿಗೇ ಆದರೂ ವೈಯಕ್ತಿಕ ಹಿತಾಸಕ್ತಿಗಿಂತ ಸಮಾಜಹಿತ ಮುಖ್ಯವಾಗಬೇಕು ಎನ್ನುವದು ಅವರ ಅಭಿಮತ.  

ಮಹಾಭಾರತ ಯುದ್ಧ ನಡೆದದ್ದಕ್ಕೆ ಮುಖ್ಯ ಕಾರಣ  ಮಹಾಭಾರತದ ಶ್ರೇಷ್ಠ ವ್ಯಕ್ತಿಗಳಿಂದ ಆದ ಕೆಲವು ತಪ್ಪುಗಳು. ಸಮಾಜಹಿತ ಎಲ್ಲಕ್ಕಿಂತ ಶ್ರೇಷ್ಠವಾಗಿದ್ದು ಅದರ ಮುಂದೆ ವ್ಯಕ್ತಿಹಿತ/ ಕಲ್ಯಾಣ ದೊಡ್ಡದಲ್ಲ. ವಾಸ್ತವಿಕವಾಗಿ ನಿಜವಾದ ಧರ್ಮ ಅದೇ ಆಗಿದೆ. ವ್ಯಕ್ತಿ ತನ್ನ ಹಿತ ಕಾಪಾಡಿಕೊಳ್ಳಬೇಕೆನ್ನುವದು ನಿಜ. ಆದರೆ ವ್ಯಕ್ತಿಯ ಹಿತ ಮುಖ್ಯವೋ ಸಮಾಜ ಹಿತ ಮುಖ್ಯವೋ ಎನ್ನುವ ಪ್ರಶ್ನೆ ಮುಂದಾದಾಗ ವ್ಯಕ್ತಿ ತನ್ನ ಹಿತ ಹಿಂದೆ ಸರಿಸಿ ಸಮಾಜಹಿತಕ್ಕೆ ಮಹತ್ವ ನೀಡಬೇಕಾಗುತ್ತದೆ.  

ಭೀಷ್ಮಾಚಾರ್ಯರು ಹಲವು ಗುಣಗಳಿಂದ ಸಂಪನ್ನರಾದ ಮಹಾಪುರುಷರಾಗಿದ್ದರು. ಅವರು, ಮಹಾಜ್ಞಾನಿ, ತ್ಯಾಗಿ, ಪ್ರಾಮಾಣಿಕ, ತೇಜಸ್ವಿ, ಪರಾಕ್ರಮಿಗಳಾಗಿದ್ದರು. ಆದರೆ ಅವರಿಂದ ಒಂದು ಬಹಳ ದೊಡ್ಡ ತಪ್ಪು ಸಂಭವಿಸಿತು. ಅದೆಂದರೆ ನಿಜವಾದ ಧರ್ಮಕ್ಕೆ ಮಹತ್ವ ಮತ್ತು ಪ್ರಾಮುಖ್ಯತೆ ನೀಡುವದಕ್ಕೆ ಬದಲು ಅವರು ತಮ್ಮ ಸ್ವಂತದ  "ಭೀಷ್ಮಪ್ರತಿಜ್ಞೆ"ಗೆ ಮಹತ್ವ ನೀಡಿದರು. ಎರಡನೆಯ ಮಹತ್ವದ ಅಂಶವೆಂದರೆ ಭೀಷ್ಮರಿಗೇ ತಾವು ಮಾಡಿದ   

"ಭೀಷ್ಮಪ್ರತಿಜ್ಞೆಯ" ಅರ್ಥ ತಿಳಿಯಲಿಲ್ಲ. "ಹಸ್ತಿನಾಪುರದ ಸಿಂಹಾಸನಕ್ಕೆ ಏಕನಿಷ್ಠರಾಗಿರುವದು ಮತ್ತು ಹಸ್ತಿನಾಪುರದ ಹಿತ ಕಾಪಾಡುವದು" - ಇದು ವಾಸ್ತವಿಕವಾಗಿ ಭೀಷ್ಮರ ಪ್ರತಿಜ್ಞೆಯಾಗಿತ್ತು. ಆದರೆ ಭೀಷ್ಮರು ಪ್ರತ್ಯಕ್ಷವಾಗಿ ಏನೆಲ್ಲ ಮಾಡಿದರೋ ಅವೆಲ್ಲ ಅವರ ಪ್ರತಿಜ್ಞೆಗೆ ವಿರುದ್ಧವಾಗಿದ್ದವು. ಭೀಷ್ಮರು ಮಾಡಿದ ಕೆಲಸದಿಂದ ಹಸ್ತಿನಾಪುರಕ್ಕೆ ಒಳಿತಾಗುವ ಬದಲು ಕೆಟ್ಟದ್ದೇ ಹೆಚ್ಚಾಯಿತು. ಹಸ್ತಿನಾಪುರದ ರಾಜ್ಯ ಅಥವಾ ಸಿಂಹಾಸನ ಎಂದರೆ ಹಸ್ತಿನಾಪುರದ ಪ್ರಜೆಗಳು ಹೊರತು ಸಿಂಹಾಸನದ  ಮೇಲೆ ಕುಳಿತುಕೊಳ್ಳುವ ರಾಜರಲ್ಲ. ಸಿಂಹಾಸನದ ಮೇಲೆ ಕುಳಿತ ರಾಜನು ಪ್ರಜೆಗಳಿಗಾಗಿ ಇರುತ್ತಾನೆ ಮತ್ತು ಪ್ರಜೆಗಳ ಹಿತ, ಉತ್ಕರ್ಷ, ಉನ್ನತಿ ಸಾಧಿಸುವುದು ಅವನ ಪರಮ ಕರ್ತವ್ಯವಾಗಿರುತ್ತದೆ. ಪ್ರಜೆಗಳಿಗೆ ಅನ್ಯಾಯವಾಗುತ್ತಿದ್ದರೆ ಅಥವಾ ರಾಜ್ಯದ ಕಾರುಬಾರ  ವ್ಯವಸ್ಥಿತವಾಗಿ ನಡೆಯುತ್ತಿಲ್ಲವಾದರೆ, ಇಲ್ಲವೇ ರಾಜನು ದುಷ್ಟ ಬುದ್ಧಿಯಿಂದ ಅನ್ಯಾಯ ಅತ್ಯಾಚಾರ ನಡೆಸಿದ್ದರೆ ಆ ರಾಜನನ್ನು ಪದಚ್ಯುತಗೊಳಿಸಿ ಅವನ ಸ್ಥಾನದಲ್ಲಿ ಯೋಗ್ಯ ವ್ಯಕ್ತಿಯನ್ನು ಅಲ್ಲಿ ಕುಳ್ಳಿರಿಸುವದು ಹಿರಿಯರಾದವರ ಕರ್ತವ್ಯವಾಗಿರುತ್ತದೆ.   

ಭೀಷ್ಮರು ಕೌರವರ ಪಿತಾಮಹರಾಗಿದ್ದರು ಮತ್ತು ಎಲ್ಲರಿಗಿಂತ ಹಿರಿಯರಾಗಿದ್ದರು. ಧೃತರಾಷ್ಟ್ರ ಮತ್ತು ದುರ್ಯೋಧನರಿಬ್ಬರೂ ದುರ್ಬುದ್ಧಿಯಿಂದ ಮೆರೆಯುತ್ತಿದ್ದರು ಮತ್ತು ಹಲವು ದುಷ್ಕೃತ್ಯಗಳನ್ನೆಸಗಿದ್ದರು. ಇಂತಹ ಸಂದರ್ಭದಲ್ಲಿ ಧೃತರಾಷ್ಟ್ರನನ್ನು ಪದಚ್ಯುತಗೊಳಿಸಿ ಮತ್ತು ದುರ್ಯೋಧನನನ್ನು ಬಂಧಿಸಿ ಬೇರೆ ಯೋಗ್ಯ ವ್ಯಕ್ತಿಯನ್ನು ಸಿಂಹಾಸನದ ಮೇಲೆ ಕುಳ್ಳಿರಿಸುವದು ಭೀಷ್ಮರ ಆದ್ಯ ಕರ್ತವ್ಯವಾಗಿತ್ತು, ಅಷ್ಟೇ ಅಲ್ಲ ಅವರಿಗೆ ಹಾಗೆ ಮಾಡುವದೂ ಸಾಧ್ಯವಿತ್ತು. ಆದರೆ ಅವರು ಹಾಗೆ ನಡೆದುಕೊಳ್ಳಲಿಲ್ಲವಷ್ಟೇ ಅಲ್ಲ, ಮೌನಿಯಾಗಿ, ಏನನ್ನೂ ಕಾರ್ಯತಃ ಮಾಡದೆ, ಅಪ್ರತ್ಯಕ್ಷವಾಗಿ ಅವರಿಬ್ಬರ ಎಲ್ಲ ದುಷ್ಕೃತ್ಯಗಳಿಗೂ ಸಹಕರಿಸಿದರು. ಮತ್ತು ಅದರ ಅನಿಷ್ಟ ಫಲವನ್ನೂ ಸ್ವತಃ ಭೀಷ್ಮರೂ, ಸಮಾಜವೂ ಅನುಭವಿಸಬೇಕಾಯಿತು. (ದ್ರೌಪದಿ ವಸ್ತ್ರಾಪಹರಣದ ಸಂದರ್ಭದಲ್ಲೂ ಭೀಷ್ಮರು ನಡೆದುಕೊಂಡ ರೀತಿ ಸಮರ್ಥನೀಯವಾದುದೇನಲ್ಲ)  

ಈ ಸಂದರ್ಭದಲ್ಲಿ ಶ್ರೀಕೃಷ್ಣ ನಡೆದುಕೊಂಡ ರೀತಿ ಆದರ್ಶಪ್ರಾಯವಾದುದಾಗಿತ್ತು. ತನ್ನ ಕೈಯಲ್ಲಿ ಆಯುಧ ಹಿಡಿಯುವದಿಲ್ಲವೆಂದು ಪ್ರತಿಜ್ಞೆ ಮಾಡಿದ್ದರೂ ಕೃಷ್ಣ ಭೀಷ್ಮರಿಂದ ಪಾಂಡವರನ್ನು ರಕ್ಷಿಸಲು ತನ್ನ ಪ್ರತಿಜ್ಞೆ ತಾನೇ ಮುರಿದ.   

ಇನ್ನು ದ್ರೋಣಾಚಾರ್ಯರು ಕೌರವ ಪಾಂಡವರ ಗುರುವಾಗಿದ್ದರು. ಶಸ್ತ್ರವಿದ್ಯಾ ಪಾರಂಗತರು. ಅವರೊಬ್ಬ ಅಸಹಾಯಕ, ದಯನೀಯ ಸ್ಥಿತಿಯ ಸಾಮಾನ್ಯ ನೌಕರರಾಗಿರಲಿಲ್ಲ. "ಅರ್ಥಸ್ಯ ಪುರುಷೋ ದಾಸ:" ಎಂಬಂತೆ ಅವರು ನಡೆದುಕೊಳ್ಳಬೇಕಾಗಿರಲಿಲ್ಲ. ಅವರು ಯಾವ ಜವಾಬ್ದಾರಿಯನ್ನೂ ಮೈಮೇಲೆ ತೆಗೆದುಕೊಳ್ಳಲು ಸಿದ್ಧರಾಗಲಿಲ್ಲ. ಅದರ ದುಷ್ಪರಿಣಾಮ ವನ್ನು ಅವರೂ ಅನುಭವಿಸಬೇಕಾಯಿತು. ಸಮಾಜವೂ.   

ಕರ್ಣ ದುರ್ಯೋಧನನ ಸ್ನೇಹಿತನಾದರೂ ಅವನ ಋಣದಲ್ಲಿಯೂ ಇದ್ದ. ಅದಕ್ಕಾಗಿ ಆತ ಕೌರವನ ಎಲ್ಲ ಕೆಟ್ಟ ಕೆಲಸಗಳಿಗೂ ಸಾಥ ನೀಡಿದ. ಒಬ್ಬ ನಿಜವಾದ ಮಿತ್ರ ಅಥವಾ ಹಿತೈಷಿಯಾಗಿದ್ದರೆ ಆತ ಕೌರವನಿಗೆ ತಿಳಿಹೇಳಿ ಆತನಿಂದ ಕೆಟ್ಟ ಕೆಲಸವಾಗದಂತೆ ನೋಡಿಕೊಳ್ಳಬೇಕಿತ್ತು . ಅದಾಗದಿದ್ದರೆ ಅವನ ಸಹವಾಸದಿಂದ ದೂರವಾಗಬೇಕಿತ್ತು. ಅವೆರಡನ್ನೂ ಅವನು ಮಾಡಲಿಲ್ಲ.   

ಒಟ್ಟಿನಲ್ಲಿ ಇವರೆಲ್ಲರೂ ಸಮಾಜ ಧರ್ಮವನ್ನು ಗಮನಿಸದೇ ತಮ್ಮ ವೈಯಕ್ತಿಕ ಹಿತಾಸಕ್ತಿಗೇ ಮಹತ್ವ ನೀಡಿದ್ದರಿಂದ ಕೌರವರ ನೀಚತನಕ್ಕೆ ಪ್ರತ್ಯಕ್ಷಾಪ್ರತ್ಯಕ್ಷವಾಗಿ ಸಹಕರಿಸಿ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಟ್ಟರು ಎನ್ನುವದನ್ನು ಅಲ್ಲಗಳೆಯಲು ಬರುವದಿಲ್ಲ. ಕೆಲವೊಮ್ಮೆ ದೊಡ್ಡವರಿಂದಲೂ ಇಂತಹ ದೊಡ್ಡ ತಪ್ಪುಗಳಾಗುತ್ತವೆನ್ನುವದು ಸುಳ್ಳಲ್ಲ.  

- ಎಲ್‌. ಎಸ್‌. ಶಾಸ್ತ್ರಿ  

ಹಿರಿಯ ಪತ್ರಕರ್ತರು, ಸಾಹಿತಿಗಳು 

ಬೆಳಗಾವಿ 

- * * * -