ಧಾರ್ಮಿಕ ಸಭಾ ಸಮಾರಂಭ ಉದ್ಘಾಟನೆ

ಲೋಕದರ್ಶನ ವರದಿ

ಬೈಲಹೊಂಗಲ 25: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆಯು  ಸಮಾಜದಲ್ಲಿ ಮೌಲ್ಯಯುತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಏಳ್ಗೆಗೆ ಸಾಕಷ್ಟು ಶ್ರಮಿಸುತ್ತಿದೆ ಎಂದು ಶರಣೆ ಪ್ರೇಮಾ ಅಂಗಡಿ ಹೇಳಿದರು.

     ಅವರು ಪಟ್ಟಣದ ಮೌನೇಶ್ವರ ಕಲ್ಯಾಣ ಮಂಟಪದಲ್ಲಿ  ನಡೆದ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ  ಆಶ್ರಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,   ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವಿರೇಂದ್ರ ಹೆಗಡೆ  ಸಾಮಾಜಿಕ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದು ಸ್ವಸಹಾಯ ಸಂಘಗಳಿಗೆ ಸಹಾಯಧನ ಒದಗಿಸುವ ಮೂಲಕ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಪ್ರೇರಣೆ ನೀಡುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.

     ಮನುಷ್ಯನಾದ ಮೇಲೆ ಬದುಕಿನಲ್ಲಿ ಧರ್ಮದ ಮಾರ್ಗದಲ್ಲಿ ನಡೆದು ಪರೋಪಕಾರಿಯಾಗಿ ಬಾಳಬೇಕು.ನಿತ್ಯ ಪೂಜೆ. ಪ್ರಾರ್ಥನೆ, ದೇವರ ಸ್ಮರಣೆಯಿಂದ ಮನಶಾಂತಿ ದೊರೆಯಲಿದ್ದು, ಸಾಮೂಹಿಕ ಪೂಜೆಯಲ್ಲಿ ಜನರ ಪಾಲ್ಗೊಳುವಿಕೆಯಿಂದ ನಾವೆಲ್ಲರು ಸಹಭಾಳ್ವೆಯಿಂದ ಸಾಗಲು ಸಾಧ್ಯವಾಗಲಿದ್ದು ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ಹಲವಾರು ವರ್ಷಗಳಿಂದ ಈ  ಕಾರ್ಯ ಮಾಡುತ್ತಿದೆ. ಪುರಸಭೆ ಸದಸ್ಯ ಉಳವಪ್ಪ ಬಡ್ಡಿಮನಿ ಅಧ್ಯಕ್ಷತೆ ವಹಿಸಿದ್ದರು.

   ಮುಖ್ಯ ಅತಿಥಿಗಳಾಗಿ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ರಾಜು ಕುಡಸೋಮನ್ನವರ, ಪ್ರದೀಪ ವನ್ನೂರ, ಬಸವರಾಜ ಇಂಗಳಗಿ, ಕನ್ನಡ ಜನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಕೊಪ್ಪದ ತಾಲೂಕಾ ಯೋಜನಾಧಿಕಾರಿ ಕೆ.ಪುರಷೋತ್ತಮ ಆಗಮಿಸಿದ್ದರು.

      ಈ ಸಂದರ್ಭದಲ್ಲಿ ಒಕ್ಕೂಟದ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.

    ಜ್ಯೋತಿ ಅಕ್ಕಿ ಸ್ವಾಗತಿಸಿದರು. ಕೃಷಿ ಅಧಿಕಾರಿ ನಾಗೇಶ ಬೆಣ್ಣಿ ನಿರೂಪಿಸಿದರು, ವಂದಿಸಿದರು.