ಅಥಣಿ 13: ಅಥಣಿಯಲ್ಲಿ ಇದೇ ಪ್ರಥಮ ಬಾರಿಗೆ ವೈಚಾರಿಕ ಚಿಂತನ-ಮಂಥನದ ಮೂಲಕ ಗಾಂಧಿ ಗ್ರಾಮೀಣ ಗುರುಕುಲದ ಉದ್ಘಾಟನೆ ನಡೆಯಲಿದ್ದು, ಇದೇ ಡಿಸೆಂಬರ 21 ಮತ್ತು 22 ರಂದು ತಂಗಡಿ-ಶಿನಾಳ ರಸ್ತೆಯಲ್ಲಿರುವ ಸಂಪದಾ ವಿಹಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಸಿದ್ಧ ಅಂಕಣಕಾರ, ಸಾಮಾಜಿಕ ಚಿಂತಕ ಸುಧೀಂದ್ರ ಕುಲಕರ್ಣಿ ತಿಳಿಸಿದರು.
ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ನಾವೆಲ್ಲ ಅಥಣಿಯವರು ಕಾರಣಾಂತರಗಳಿಂದ ಬೇರೆ ಬೇರೆ ಸ್ಥಳಗಳಲ್ಲಿ ಸದ್ಯ ವಾಸ ಮಾಡುತ್ತಿದ್ದರೂ ಕೂಡ ನಮಗೆ ಅನ್ನ, ಶಿಕ್ಷಣ, ಪ್ರೀತಿ, ಬಾಂಧವ್ಯ, ಆಶ್ರಯ ಕೊಟ್ಟ ಅಥಣಿ ಮತ್ತು ಗ್ರಾಮೀಣ ಭಾಗದ ಸಮಾಜಕ್ಕೆ ನಮ್ಮಿಂದ ಅಳಿಲು ಸೇವೆ ಸಲ್ಲಿಸುವ ಉದ್ದೇಶದಿಂದ ಮತ್ತು ಕೃತಜ್ಞತಾ ಭಾವದಿಂದ ಗಾಂಧಿ ಗ್ರಾಮೀಣ ಗುರುಕುಲ ಎಂಬ ಸಮಾಜೋಪಯೋಗಿ ಸೇವಾಭಾವಿ ಸಂಸ್ಥೆಯನ್ನು ಪ್ರಾರಂಭಿಸುವ ಸಂಕಲ್ಪ ಮಾಡುತ್ತಿದ್ದೇವೆ ಎಂದರು. ಗಾಂಧಿ ಗ್ರಾಮೀಣ ಗುರುಕುಲದ ಮೂಲಕ ಕೃಷಿ, ಶಿಕ್ಷಣ, ಆರೋಗ್ಯ, ಆಧ್ಯಾತ್ಮ, ಗ್ರಾಮೋದ್ಧಾರ, ಗ್ರಾಮೀಣ ಕಲೆ, ಸಂಸ್ಕೃತಿಯ ಸಂವರ್ಧನೆ, ಪರಿಸರ ಸ್ನೇಹಿ ಜೀವನ, ಅಸ್ಪ್ರಶ್ಯತಾ ನಿವಾರಣೆ, ಮಹಿಳಾ ಸಬಲೀಕರಣ, ಎಲ್ಲ ಜಾತಿ, ಧರ್ಮಗಳಲ್ಲಿ ಭಾವೈಕ್ಯತೆಯ ಮೂಲಕ ವಿಶ್ವ ಶಾಂತಿಗೆ ಪ್ರಯತ್ನ ನಮ್ಮದಾಗಿದೆ ಎಂದರು.
ಈ ಗುರುಕುಲದ ಸ್ಥಾಪನೆಗೆ ಪ್ರೇರಣೆ ನೀಡಿದವರು ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಅವರು ಸ್ವಾತಂತ್ರ್ಯ ಸಂಗ್ರಾಮದ ಜೊತೆಗೆ ಸತ್ಯ, ಅಹಿಂಸೆ, ನ್ಯಾಯ, ಸರ್ವೋದಯ, ದಲಿತೋದ್ಧಾರ, ಪರಿಸರ, ವಿಕಾಸ, ವಿಶ್ವಶಾಂತಿ, ಜಾಗತಿಕ ಬಾಂಧವ್ಯದಂತಹ ಆದರ್ಶಗಳನ್ನು ಜನಸಾಮಾನ್ಯರಲ್ಲಿ ಬಿತ್ತುವ ಮೂಲಕ ನಮಗೆಲ್ಲ ಆದರ್ಶರಾಗಿದ್ದರು ಇಂತಹ ಮಹಾನ್ ವ್ಯಕ್ತಿ ಸ್ಮರಣೆಯಲ್ಲಿ ಸಾಮಾಜಿಕ ಕಾರ್ಯಕ್ಕಾಗಿ ನಮ್ಮದೊಂದು ಚಿಕ್ಕ ಪ್ರಯತ್ನ ಇದಾಗಿದೆ ಎಂದ ಅವರು 1934 ರಲ್ಲಿ ಮಹಾತ್ಮಾ ಗಾಂಧಿಜಿ ಹರಿಜನೋದ್ಧಾರದ ಅಂಗವಾಗಿ ಅಥಣಿಗೂ ಆಗಮಿಸಿದ್ದರು ಎಂದು ಹೇಳಿದರು.
ಡಿಸೆಂಬರ 21 ಶನಿವಾರದಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ವಿಚಾರ ಸಂಕೀರ್ಣದ ಮೊದಲ ಗೋಷ್ಠಿ ಯಲ್ಲಿ ಹಿರಿಯ ಪತ್ರಕರ್ತ ಮನೋಜಗೌಡ ಪಾಟೀಲರು 1924 ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಕುರಿತು ಮಾತನಾಡುವರು ಎಂದು ತಿಳಿಸಿದರು.
ಇದೇ 4.30 ಕ್ಕೆ ನಡೆಯಲಿರುವ 2 ನೇ ಗೋಷ್ಠಿಯಲ್ಲಿ ಧಾರವಾಡದ ಪರಿಸರ ಚಿಂತಕ ಪಿ.ವಿ.ಹಿರೇಮಠ ಇಂದಿನ ಯುವ ಜನತೆ- ಸವಾಲುಗಳು ಮತ್ತು ಅವಕಾಶಗಳ ಕುರಿತು ಮಾತನಾಡುವರು. ಸಂಜೆ 6 ಗಂಟೆಗೆ ಶೃಂಗೇರಿಯ ಏಕತಾರಿ ಗಾಯಕ ನಾದ ಮಣಿನಾಲ್ಕೂರು ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು. ಡಿಸೆಂಬರ 22 ಭಾನುವಾರ ಮುಂಜಾನೆ 10 ಗಂಟೆಗೆ ಗಾಂಧಿ ದೃಷ್ಟಿಯಲ್ಲಿ ಜಾತಿ, ಧರ್ಮದ ಕುರಿತು ಕರ್ನಾಟಕ ಧಾರವಾಡ ವಿ.ವಿಯ ಗಾಂಧಿ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಶಿವಾನಂದ ಶೆಟ್ಟರ ಮಾತನಾಡುವರು, ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ನಡೆಯಲಿರುವ ಗಾಂಧಿ ದೃಷ್ಟಿಯಲ್ಲಿ ಗ್ರಾಮೋದ್ಧಾರ ವಿಷಯ ಕುರಿತು ಧಾರವಾಡದ ಪರಿಸರ ಚಿಂತಕ ಡಾ.ಪ್ರಕಾಶ ಭಟ್ ಮತ್ತು ಇದೇ ಸಮಯದಲ್ಲಿ ಚರಖಾ ಏಕೆ? ಈಗ ಏಕೆ? ವಿಷಯದ ಮೇಲೆ ಧಾರವಾಡದ ಡಾ.ಸಂಜೀವ ಕುಲಕರ್ಣಿ ಮಾತನಾಡುವರು ಎಂದು ಹೇಳಿದರು.
ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಆರ್ಟಿಫಿಸಿಯಲ್ ಇಂಟಲಜನ್ಸ ಮತ್ತು ನಾಳೆಯ ಜಗತ್ತು ಕುರಿತಾಗಿ ಯು.ಎಸ್.ಎನ ಮಿಂಚು ಕುಲಕರ್ಣಿ ಮಾತನಾಡಲಿದ್ದಾರೆ ಮತ್ತು ಸಂಜೆ 4 ಗಂಟೆಗೆ ನಡೆಯಲಿರುವ ಅಥಣಿ ಮತ್ತು ಸುತ್ತಲಿನ ಹಳ್ಖಿಗಳಲ್ಲಿ ನಡೆದಿರುವ ಉತ್ತಮ ಶೈಕ್ಷಣಿಕ ಉಪ ಕ್ರಮಗಳ ಕುರಿತು ಚರ್ಚೆ ನಡೆಯಲಿದೆ ಮತ್ತು ಸಂಜೆ ನಡೆಯುವ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಹಿರಿಯ ನ್ಯಾಯವಾದಿ ಸುಹಾಸ ದಾತಾರ, ಡಾ. ಕಾಮಾಕ್ಷಿ ಭಾಟೆ ಉಪಸ್ಥಿತರಿದ್ದರು.