ಲೋಕದರ್ಶನ ವರದಿ
ಬೆಳಗಾವಿ 29: ಜಿಲ್ಲಾ ಪಂಚಾಯತ ಹಾಗೂ ಉಪನಿರ್ಧೆಶಕರ ಕಾರ್ಯಾಲಯ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ 2019-20 ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 'ಜಿಲ್ಲಾ ಮಟ್ಟದ ಯುವ ಸಂಸತ್ತು' ಕಾರ್ಯಕ್ರಮ ದಿ: 29 ರಂದು ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ. ಎ. ಬಿ. ಪುಂಡಲಿಕರವರು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಮಯದಲ್ಲಿ "ಸಮಾಜ ವಿಜ್ಞಾನ ಪಠ್ಯದ ಸಂಸತ್ತು ರಚನೆಯನ್ನು ಮಕ್ಕಳು ಅಣುಕು ಸಂಸತ್ತಿನ ರಚನೆ ಮೂಲಕ ಹಾಗೂ ಸಂವಿಧಾನದ ಪೀಠಿಕೆಯನ್ನು ಪ್ರತಿದಿನ ಪ್ರಾರ್ಥನೆಯ ಸಮಯದಲ್ಲಿ ಪ್ರತಿಜ್ಞೆ ಮಾಡುವುದರ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಈ ಜಾಗೃತಿಯು ಕೇವಲ ಸಮಾಜ ವಿಜ್ಞಾನ ಪಠ್ಯಕ್ಕೆ ಮಾತ್ರ ಸೀಮಿತವಾಗಿರದೆ ಪ್ರತಿಯೊಬ್ಬರ ಸಾಮಾಜಿಕ ಜೀವನದಲ್ಲಿ ಅಳವಡಿಕೆಯಾಗಬೇಕು." ಎಂದು ಹೇಳಿದರು.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಬೆಳಗಾವಿ ನಗರದ ಸರಕಾರಿ ಪ್ರೌಢಶಾಲೆ ವಂಟಮೂರಿ, ಬೆಳಗಾವಿ ಗ್ರಾಮೀಣದ ಸರಕಾರಿ ಪ್ರೌಢಶಾಲೆ ಹುದಲಿ, ಬೈಲಹೊಂಗಲ ತಾಲೂಕಿನ ಎಸ್. ಎಸ್. ಪ್ರೌಢಶಾಲೆ ನಾಗನೂರ, ಖಾನಾಪೂರ ತಾಲೂಕಿನ ಸರಕಾರಿ ಪ್ರೌಢಶಾಲೆ ಚಿಕ್ಕಹಟ್ಟಿಹೊಳಿ, ಕಿತ್ತೂರ ತಾಲೂಕಿನ ಎಸ್. ವಿ. ಕೆ. ಸರ್ಕಾರಿ ಪ್ರೌಢಶಾಲೆ ಕಾದರವಳ್ಳಿ, ರಾಮದುರ್ಗ ತಾಲೂಕಿನ ಸರಕಾರಿ ಪ್ರೌಢಶಾಲೆ ಸುನ್ನಾಳ ಹಾಗೂ ಸವದತ್ತಿ ತಾಲೂಕಿನ ಸರಕಾರಿ ಪ್ರೌಢಶಾಲೆ ಸತ್ತಿಗಿರಿ ಬೈಲಹೊಂಗಲ, ಕಿತ್ತೂರ ಹೀಗೆ 7 ತಾಲೂಕುಗಳ ಸರ್ಕಾರಿ ಪ್ರೌಢಶಾಲೆಗಳಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಸದೀಯ ವ್ಯವಹಾರಗಳ ಇಲಾಖೆ ಬೆಂಗಳೂರಿನ ಶಾಖಾಧಿಕಾರಿಗಳಾದ ಹೆಚ್. ಎನ್. ಚೆನ್ನನವರ ಹಾಗೂ ಕಾರ್ಯಕ್ರಮದ ಅಧ್ಯಕ್ಷರಾಗಿ ಬೆಳಗಾವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅವಿನಾಶ ಪೊತದಾರ ಉಪಸ್ಥಿತರಿದ್ದರು. ಅಧ್ಯಕ್ಷೀಯ ಭಾಷಣದಲ್ಲಿ ಅವಿನಾಶ ಪೊತದಾರ ಇವರು ಮಾತನಾಡಿ ನಮ್ಮ ದೇಶದಲ್ಲಿಯ ಪ್ರಜಾಪ್ರಭುತ್ವ ಸರ್ಕಾರದ ಮಹತ್ವ ವಿದ್ಯಾರ್ಥಿ ಜೀವನದಲ್ಲಿಯೇ ತಿಳಿದಿರಬೇಕು. ಮುಂದಿನ ಜೀವನದಲ್ಲಿ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಪ್ರಾಮಾಣಿಕತೆ, ನೈತಿಕತೆ ಹಾಗೂ ಸತತ ಪ್ರಯತ್ನ ಮಾಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು.
ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳಬೇಕು ಪ್ರತಿಯೊಬ್ಬರಲ್ಲಿ ಗುರಿ ಇರಬೇಕು ಹಾಗೂ ಗುರಿ ಮುಟ್ಟಲು ಪ್ರಯತ್ನ ಮಾಡಬೇಕೆಂದು ಹೇಳಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಎಮ್. ಕೆ. ಮಾದಾರ. ವಿಷಯ ಪರಿವಿಕ್ಷಕರಾದ ಎಮ್. ಎಮ್. ಪಾಟೀಲ, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿಷಯ ಪರೀವಿಕ್ಷಕರಾದ ಎಸ್. ಎಸ್. ನಾಗನೂರ ಸ್ವಾಗತಿಸಿ, ಕುಮಾರಿ. ನಿರೂಪಮಾ ತಾಳುಕರ ನಿರೂಪಿಸಿ, ವಿಷಯ ಪರೀವಿಕ್ಷಕರಾದ ಜಿ. ಎಸ್. ಕಂಬಳಿ ವಂದನೆಗೈದರು.