ಇನಾಂವೀರಾಪುರ: ದೌರ್ಜನ್ಯಕ್ಕೊಳಗಾದ ಕುಟುಂಬ ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್

 ಇನಾಂವೀರಾಪುರ: ದೌರ್ಜನ್ಯಕ್ಕೊಳಗಾದ ಕುಟುಂಬ ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ Inamveerapur: District in-charge Minister Santosh Lad visits the family of the victim of violence

ಲೋಕದರ್ಶನ ವರದಿ 

ಇನಾಂವೀರಾಪುರ: ದೌರ್ಜನ್ಯಕ್ಕೊಳಗಾದ ಕುಟುಂಬ ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ 


ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಸಾಂತ್ವನ  


ಹುಬ್ಬಳ್ಳಿ,ಡಿ.27: ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಗರ್ಭಿಣಿ ಹತ್ಯೆ ಪ್ರಕರಣದಲ್ಲಿ ದೌರ್ಜನ್ಯಕ್ಕೊಳಗಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಿವೇಕಾನಂದ ದೊಡ್ಡಮನಿ ಕುಟುಂಬ ಸದಸ್ಯರನ್ನು ಇಂದು ಬೆಳಿಗ್ಗೆ, ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್ ಲಾಡ್ ಅವರು, ಸಾಂತ್ವನ ಹೇಳಿ, ಧೈರ್ಯ ತುಂಬಿದರು.   ಗಾಯಾಳುಗಳ ಆರೋಗ್ಯ ಪರಿಸ್ಥಿತಿ ಹಾಗೂ ಚಿಕಿತ್ಸೆ ಕುರಿತು ವೈದ್ಯರಿಂದ ಮಾಹಿತಿ ಪಡೆದು ಉತ್ತಮ ಆರೈಕೆ ಒದಗಿಸಲು ಸೂಚಿಸಿದರು. ಸರಕಾರದಿಂದ ಭದ್ರತೆ, ನೆರವು, ಪರಿಹಾರ ನೀಡುವ ಭರವಸೆ ನೀಡಿದರು. "ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವುದಾಗಿ" ಸಚಿವರು ಹೇಳಿದರು.  ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, 

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ನಮಗೆ 79 ವರ್ಷಗಳಾಗಿವೆ. ಅಮೃತ ಕಾಲದ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಆದರೆ, ಇಂದಿಗೂ ಇಂತಹ ಕೀಳುಮಟ್ಟದ ಜಾತಿ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವಲ್ಲ ಎಂಬುವುದೇ ದೊಡ್ಡ ಮನಸ್ತಾಪದ ಸಂಗತಿ. ಮನುಷ್ಯತ್ವಕ್ಕಿಂತ ಜಾತಿಯೇ ದೊಡ್ಡದಾಯಿತೆ ಎಂಬುದು ಬೇಸರದ ಸಂಗತಿ ಎಂದು ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್‌. ಲಾಡ್ ಅವರು ವಿಷಾದ ವ್ಯಕ್ತಪಡಿಸಿದರು.  ಸಮಾಜದಲ್ಲಿ ಇಂತಹ ಅಮಾನವೀಯ ಘಟನೆಗಳು ಜರುಗಬಾರದು. ಎಲ್ಲೋ ಒಂದು ಕಡೆ ಮನುಷ್ಯನ ಮನಸ್ಸಿನಲ್ಲಿನ ಮನುಷ್ಯತ್ವದ ಗುಣಗಳು ಮೇಲೆ ಬರಬೇಕು, ಹೃದಯವೈಶಾಲ್ಯತೆ ತೋರಬೇಕು ಎಂದು ಅವರು ಹೇಳಿದರು. ಇದು ಅತ್ಯಂತ ದುರ್ದೈವದ ಸಂಗತಿ. ಮಗಳ ಜೀವ ತೆಗೆಯಲು ಮುಂದಾದ ತಂದೆಯ ಕೃತ್ಯ ಖಂಡನೀಯ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹುಡುಗನ ತಾಯಿಗೆ ಗಾಯವಾಗಿದೆ. ಅವರಿಗೆ ವಿವೇಕಾನಂದ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಅತ್ಯಂತ ಶ್ರದ್ಧೆಯಿಂದ ಚಿಕಿತ್ಸೆ ನೀಡಿ ಅವರ ಜೀವ ಉಳಿಸುವ ಕೆಲಸ ಮಾಡಿದ್ದಾರೆ. ಗಾಯಾಳು ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಸಚಿವರು ತಿಳಿಸಿದರು.  ಪೊಲೀಸ್ ಇಲಾಖೆಯು ಹೆಚ್ಚಿನ ಸುವ್ಯವಸ್ಥೆಯನ್ನು ಮಾಡಿದೆ. ಗಯಾಳುಗಳ ಸುರಕ್ಷತೆಯ ದೃಷ್ಟಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್‌ ನಿಯೋಜಿಸಲಾಗಿದ್ದು, ರಕ್ಷಣೆ ನೀಡಲಾಗಿದೆ. ಪೊಲೀಸ್ ಇಲಾಖೆಯು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದು, ಪರಿಸ್ಥಿತಿಯನ್ನು ನಿಭಾಯಿಸಿದೆ ಎಂದು ಅವರು ಹೇಳಿದರು. ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಘಟನೆಯ ಹಿನ್ನಲೆಯಲ್ಲಿ ಅಗತ್ಯ ಕ್ರಮವಹಿಸಿದೆ. ಜಿಲ್ಲಾಧಿಕಾರಿಗಳು ಸರಕಾರದ ಪರಿಹಾರ ವಿತರಿಸಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ ದಿನಸಿ, ಕಿರಾಣಿ , ಪಡೀತರ ವಿತರಿಸಲಾಗಿದೆ. ಸಂತ್ರಸ್ತ ಯುವಕ ಮತ್ತು ಆತನ ಕುಟುಂಬದ ಪರವಾಗಿ ಜಿಲ್ಲಾಡಳಿತ ಹಾಗೂ ಸರ್ಕಾರ ದೃಢವಾಗಿ ನಿಲ್ಲಲಿದೆ ಎಂದು ಸಚಿವರು ತಿಳಿಸಿದರು. 

ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ: ಇನಾಂವೀರಾಪುರ ಗ್ರಾಮದ ಪ್ರಕರಣದಲ್ಲಿ ಸೂಕ್ತ ಮುನ್ನೆಚರಿಕೆ ವಹಿಸದ ಇಬ್ಬರು ಪೊಲೀಸ ಸಿಬ್ಬಂದಿಗಳನ್ನು ಹಾಗೂ ಘಟನೆ ಹಿನ್ನಲೆಯಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದ ಬೆಳಗಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯನ್ನು ಅಮಾನತ್ತುಗೊಳಿಸಿ, ಸೂಕ್ತ ತನಿಖೆಗೆ ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು. 

ಇನ್ನೂ ಕೆಲವು ಇಲಾಖೆಗಳ ಅಧಿಕಾರಿಗಳು ನಿಯಮಾನುಸಾರ ತಮ್ಮ ಕರ್ತವ್ಯ ನಿರ್ವಹಿಸಿಲ್ಲ ಎಂಬ ದೂರುಗಳಿದ್ದು, ಈ ಕುರಿತು ತನಿಖೆ ಮಾಡಿ, ವರದಿ ನೀಡಲು ಈಗಾಗಲೇ ಜಿಲ್ಲಾಧಿಕಾರಿಗಳು ತನಿಖಾಧಿಕಾರಿಯನ್ನು ನೇಮಿಸಿ, ಆದೇಶಿಸಿದ್ದಾರೆ. ಸಲ್ಲಿಸುವ ತನಿಖಾ ವರದಿ ಪರೀಶೀಲಿಸಿ, ತಪ್ಪಿಸ್ಥತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸಂತೋಷ ಲಾಡ್ ಅವರು ತಿಳಿಸಿದರು. 


ಈ ಸಂದರ್ಭದಲ್ಲಿ ಶಾಸಕರಾದ ಎನ್‌. ಎಚ್‌. ಕೋನರಡ್ಡಿ, ಮಹಾನಗರ ಪೊಲೀಸ್ ಆಯುಕ್ತ ಎನ್‌.ಶಶಿಕುಮಾರ್, ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಅಪರ ಜಿಲ್ಲಾಧಿಕಾರಿ ಗೀತಾ.ಸಿ.ಡಿ., ಡಿಸಿಪಿ ಮಾನಿಂಗ ನಂದಗಾವಿ, ಉಪ ವಿಭಾಗಾಧಿಕಾರಿ ಶಾಲಂ ಹುಸೇನ್, ಎಸಿಪಿ ಶಿಪಪ್ರಕಾಶ ನಾಯ್ಕ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭ ಪಿ., ತಹಶಿಲ್ದಾರರಾದ ಜೆ.ಬಿ.ಮಜ್ಜಗಿ, ಮಹೇಶ ಗಸ್ತಿ, ತಾ.ಪಂ ಇಓ ರಾಮಚಂದ್ರ ಹೊಸಮನಿ, ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರಾದ ಎಸ್‌.ಆರ್‌.ಪಾಟೀಲ, ಅನೀಲಕುಮಾರ ಪಾಟೀಲ, ಚಂದ್ರಶೇಖರ ಜುಟ್ಟಲ, ಪರಮೇಶ ಕಾಳೆ, ಪೇಮನಾಥ ಚಿಕ್ಕತುಂಬಳ, ಮಲ್ಲನಗೌಡ ಪಾಟೀಲ, ಸುರೇಶಗೌಡರ, ಕೆಂಚಪ್ಪ ಮಲ್ಲಮ್ಮನವರ, ಶ್ರೀಧರ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಇದ್ದರು. 

********