ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಜಿಲ್ಲಾಡಳಿತದಿಂದ ಮಹನೀಯರ ಜಯಂತಿ ಅರ್ಥಪೂರ್ಣ ಆಚರಣೆ: ಎಡಿಸಿ ಮಹಮ್ಮದ್ ಝುಬೇರ್
ಬಳ್ಳಾರಿ 01 :ಜಿಲ್ಲಾಡಳಿತದಿಂದ ರೇಣುಕಾರ್ಚಾಯ, ಯೋಗಿನಾರೇಯಣ ಯತೀಂದ್ರ ಮತ್ತು ಅಗ್ನಿಬನ್ನಿರಾಯ ಜಯಂತಿ ಸೇರಿದಂತೆ ಮಹನೀಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ಹೇಳಿದರು.
ಶನಿವಾರದಂದು, ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರಿ್ಡಸಲಾಗಿದ್ದ ಮಹನೀಯರ ಜಯಂತಿ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.ಮಾ.12 ರಂದು ರೇಣುಕಾರ್ಚಾಯ, ಜಯಂತಿಯನ್ನು ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಸಭಾಂಗಣದಲ್ಲಿ, ಮಾ.14 ರಂದು ಯೋಗಿನಾರೇಯಣ ಯತೀಂದ್ರ ಜಯಂತಿ ನಗರದ ಬಲಿಜ ಭವನದಲ್ಲಿ ಮತ್ತು ಮಾ.28 ರಂದು ಅಗ್ನಿಬನ್ನಿರಾಯ ಜಯಂತಿಯನ್ನು ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಸಭಾಂಗಣದಲ್ಲಿ ಅರ್ಥಪೂರ್ಣ ಆಚರಣೆಗೆ ಕ್ರಮ ವಹಿಸಲಾಗುವುದು ಎಂದರು.ರೇಣುಕಾರ್ಚಾಯ, ಯೋಗಿನಾರೇಯಣ ಯತೀಂದ್ರ ಮತ್ತು ಅಗ್ನಿಬನ್ನಿರಾಯ ಜಯಂತಿ ಕಾರ್ಯಕ್ರಮಗಳ ಅಂಗವಾಗಿ ಭವ್ಯವಾದ ಮೆರವಣಿಗೆ ನಡೆಯಲಿದ್ದು, ರಸ್ತೆ ಸಂಚಾರ ಮಾರ್ಗಕ್ಕೆ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಯಂತಿ ಆಚರಣೆ ಸಂದರ್ಭದಲ್ಲಿ ಶಿಷ್ಠಾಚಾರ ಪಾಲನೆ, ಆಹ್ವಾನ ಪತ್ರಿಕೆ, ವಿಶೇಷ ಉಪನ್ಯಾಸ, ವಚನ ಗಾಯನ ಸೇರಿದಂತೆ ಎಲ್ಲವೂ ಸರಿಯಾಗಿ ನಿರ್ವಹಿಸಬೇಕು. ಅದೇ ರೀತಿ ವೇದಿಕೆ, ಕುಡಿಯುವ ನೀರು, ಸ್ವಚ್ಛತೆ ಮತ್ತು ಮೆರವಣಿಗೆ ಸಂದರ್ಭದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯು ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.ಮಹಾನ್ ವ್ಯಕ್ತಿಗಳ ವಿಚಾರಧಾರೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನುರಿತ ಉಪನ್ಯಾಸಕರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗುವುದು ಎಂದರು.ಜಯಂತಿ ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳನ್ನು ನಿಯೋಜಿಸಲಾಗುವುದು. ಸಮುದಾಯದಲ್ಲಿ ಉತ್ತಮ ಸಾಧನೆಯ ರೈತರಿಗೆ, ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಮತ್ತು ಪಿಹೆಚ್‌ಡಿ ಪದವಿ ಪಡೆದ ಅಭ್ಯರ್ಥಿಗಳಿದ್ದರೆ ಸನ್ಮಾನಿಸಲಾಗುವುದು ಎಂದರು.ಜಯಂತಿ ಕಾರ್ಯಕ್ರಮಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸೂಚಿಸಿದರು.ಸಭೆಯಲ್ಲಿ ವಿವಿಧ ಸಮುದಾಯದ ಮುಖಂಡರು, ಜನ ಪ್ರತಿನಿಧಿಗಳು ಜಯಂತಿಗಳ ಆಚರಣೆಯ ಕುರಿತು ತಮ್ಮ ಸಲಹೆ-ಸೂಚನೆ ನೀಡಿದರು.ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಮುದಾಯದ ಮುಖಂಡರು, ಜನ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.