ಪಾಟನಾ, ಸೆ 22 ಪಾಕಿಸ್ತಾನದೊಂದಿಗೆ ಭಾರತ ಯಾವುದೇ ಮಾತುಕತೆ ನಡೆಸಲು ಇಚ್ಛಿಸುವುದಿಲ್ಲ. ಒಂದೊಮ್ಮೆ ಮಾತುಕತೆ ನಡೆದರೂ, ಅದು ಕೇವಲ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸಂಬಂಧಿಸಿದ್ದಾಗಿರುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ಸ್ವಾಯತತ್ತೆ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದು ಕುರಿತ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 370ನೇ ವಿಧಿಯ ರದ್ದತಿ ಐತಿಹಾಸಿಕ ನಡೆ ಎಂದು ಬಣ್ಣಿಸಿದರು.
ಇದರಿಂದ ಕಾಶ್ಮೀರದ ಜನರ ಬಹುದಿನದ ಆಸೆ ಈಡೇರಿದೆ ಜೊತೆಗೆ, ಅಲ್ಲಿನ ನಿರಂತರವಾಗಿ ನಡೆಯುತ್ತಿದ್ದ ಹಿಂಸಾತ್ಮಕ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ. 370ನೇ ವಿಧಿ ಜಮ್ಮು ಕಾಶ್ಮೀರದ ಜನರು ಹಾಗೂ ದೇಶದ ಇತರ ಜನರ ನಡುವೆ ತಾರತಮ್ಯ ಉಂಟು ಮಾಡಿತ್ತು. ಇಲ್ಲಿಯವರೆಗೆ ರಾಜ್ಯದಲ್ಲಿ ಕಳೆದ ಹಲವು ದಶಕಗಳಿಂದ ನಡೆದ ಹಿಂಸಾಚಾರದಲ್ಲಿ 41,500 ನಾಗರಿಕರು ಮತ್ತು 5.500 ಸಶಸ್ತ್ರ ಪಡೆಯ ಯೋಧರು, ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದರು.
ಪಾಕಿಸ್ತಾನ ಹಿಂದಿನಿಂದಲೂ ಗಡಿಯಾಚೆಗಿನ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದ್ದಂತೆ, ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶವಿರುವುದಿಲ್ಲ ಎಂದು ಅವರು, ಪಾಕಿಸ್ತಾನ ಎಷ್ಟು ಭಯೋತ್ಪಾದಕರಿಗೆ ಬೆಂಬಲ ನೀಡಿದರೂ, ಅವರು ಅನಧಿಕೃತವಾಗಿ ದೇಶದ ಒಳ ನುಸುಳಲು ಅವಕಾಶ ನೀಡುವುದಿಲ್ಲ. ಅವರೇನಾದರೂ ದುಷ್ಕೃತ್ಯಗಳಿಗೆ ಮುಂದಾದಲ್ಲಿ ನಮ್ಮ ಸೇನೆ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸವಾಲು ಹಾಕಿದರು.
ಜಮ್ಮು ಕಾಶ್ಮೀರದೊಂದಿಗಿನ ಯಾವುದೇ ಮಾತುಕತೆಯ ಸಾಧ್ಯತೆಯನ್ನು ತಳ್ಳಿಹಾಕಿದ ಅವರು, ಒಂದೊಮ್ಮೆ ಮಾತುಕತೆ ನಡೆದರೂ, ಅದು ಕೇವಲ ಪಾಕ್ ಆಕ್ರಮಿತ ಕಾಶ್ಮೀರದ ಕುರಿತಾಗಿರುತ್ತದೆ. ಪಾಕಿಸ್ತಾನ ಜಮ್ಮು ಕಾಶ್ಮೀರವನ್ನು ಸಂಪೂರ್ಣವಾಗಿ ಮರೆತುಬಿಡಬೇಕು ಎಂದರು.