ಹಾಲು ಉತ್ಪನ್ನಗಳ ಆಮದು ಸುಂಕ ಇಳಿಕೆ ಮಾಡಬಾರದು: ಕೇಂದ್ರದ ಗಮನ ಸೆಳೆಯಲು ಹಾಲು ಉತ್ಪಾದಕರಿಂದ ಪ್ರತಿಭಟನೆ

ರಾಮನಗರ, ಅ 11:   ಬೇರೆ ದೇಶಗಳಿಂದ ಆಮದಾಗುತ್ತಿರುವ ಹಾಲು ಉತ್ಪನ್ನಗಳ ಸುಂಕವನ್ನು ಇಳಿಸಲು ಮುಂದಾಗಿರುವ ಕೇಂದ್ರದ ಧೋರಣೆ ವಿರೋಧಿಸಿ ನಗರದಲ್ಲಿ ನೂರಾರು ಹಾಲು ಉತ್ಪಾದಕ ರೈತರು ಮತ್ತು ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರು ಬೃಹತ್  ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹ ಮೂರ್ತಿ ಮಾತನಾಡಿ, ಭಾರತದಲ್ಲಿ ವಾರ್ಷಿಕ 180 ಮೆಟ್ರಿಕ್ ಟನ್ ಹಾಲು ಉತ್ಪನ್ನಗಳು ತಯಾರಾಗುತ್ತಿದ್ದು, ಇದು ವಿಶ್ವ ಮಾರುಕಟ್ಟೆಯ ಶೇ.20 ರಷ್ಠಿದೆ. ಹಾಲು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಶೇ.24 ರಷ್ಡು ಜಿಡಿಪಿ ಪ್ರಮಾಣ ಹೊಂದಿದೆ. ಇದೀಗ ವಿದೇಶಿ ಹಾಲು ಉತ್ಪನ್ನಗಳ ಆಮದು ಸುಂಕ ಇಳಿಕೆ ಮಾಡಿದರೆ ಹೈನುಗಾರಿಕೆ ನಂಬಿರುವ ರೈತರು ಬೀದಿಗೆ ಬೀಳಲಿದ್ದಾರೆ ಎಂದರು. ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜ್ ಮಾತನಾಡಿ, ಶನಿವಾರ ಬ್ಯಾಂಕಾಕ್ ನಲ್ಲಿ ಆಸ್ಟ್ರೇಲಿಯ, ಬೆಲ್ಜಿಯಂ, ನ್ಯೂಜಿಲೆಂಡ್ ಸೇರಿದಂತೆ 16 ದೇಶಗಳ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಹಾಲು ಉತ್ಪನ್ನಗಳ ಆಮದು ಸುಂಕ ರದ್ದು ಪಡಿಸುವ ವಿಚಾರಕ್ಕೆ ಭಾರತ ಮುಂದಾಗಬಾರದು ಎಂದು ಒತ್ತಾಯಿಸಿದರು. ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಜಯಮತ್ತು, ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಸಂಘದ ಅಧ್ಯಕ್ಷ ಗುಂಡಪ್ಪ, ಕಾರ್ಯದರ್ಶಿಗಳಾದ ವೆಂಕಟೇಶ್, ಅನಿಲ್, ಶಿವರಾಜು, ಪ್ರಭಾಕರ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ ಹಾಲು ಉತ್ಪಾದಕರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.