ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ ಅನುಷ್ಠಾನ ಕಡ್ಡಾಯ: ಶೇಖರಗೌಡ ರಾಮತ್ನಾಳ್

Implementation of child protection policy is mandatory in educational institutions: Shekar Gowda Ram

ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ ಅನುಷ್ಠಾನ ಕಡ್ಡಾಯ: ಶೇಖರಗೌಡ ರಾಮತ್ನಾಳ್ 

ಕೊಪ್ಪಳ 13: ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016 ಪರಿಷ್ಕರಣೆ-2023ನ್ನು ಪ್ರತಿಯೊಂದು ಶೈಕ್ಷಣಿಕ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ ರಾಮತ್ನಾಳ್ ಹೇಳಿದರು.  

ಅವರು ಗುರುವಾರ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ, ‘ಕಡ್ಡಾಯ ಮತ್ತು ಉಚಿತ ಶಿಕ್ಷಣ ಹಕ್ಕು ಕಾಯ್ದೆ-2009” ಅನುಷ್ಠಾನ ಕುರಿತು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.  

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಹಾಗೂ ನುರಿತ ಶಿಕ್ಷಕರ ನೇಮಕವಾದಲ್ಲಿ ಮಾತ್ರ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಆಶಯ ಈಡೇರಲಿದೆ. ತನ್ಮೂಲಕ ಸರ್ಕಾರಿ ಶಾಲೆಗಳ ಸಬಲೀಕರಣ ಸಾಧ್ಯವಾಗಲಿದೆ. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009ರ ಸೆಕ್ಷನ್ 31ರಡಿಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ಕಾಯ್ದೆಯ ಮೇಲ್ವಿಚಾರಣೆಯ ಅಧಿಕಾರ ಮತ್ತು ಜವಾಬ್ದಾರಿಯನ್ನು ಹೊಂದಿದೆ. ಈ ಆರ್ಥಿಕ ಸಾಲಿನಲ್ಲಿ ಆಯೋಗವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯು ಈ ಕಾಯ್ದೆ ಅನುಷ್ಠಾನದ ಪ್ರಗತಿ ಪರೀಶೀಲನಾ ಸಭೆಗಳನ್ನು ನಡೆಸಿದೆ. ಈ ಸಭೆಗಳಲ್ಲಿ ಕಂಡುಬಂದ ಅಂಶಗಳ ಬಗ್ಗೆ ಅಧ್ಯಯನ ಮಾಡಿ, ಕಾಯ್ದೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅವಶ್ಯವಿರುವ ಅಗತ್ಯ ಸಲಹೆಗಳನ್ನು ಆಯೋಗವು ಸರಕಾರಕ್ಕೆ ನೀಡಲು ಉದ್ದೇಶಿಸಿದೆ ಎಂದರು.  

ಖಾಸಗಿ ಶಾಲೆಗಳು ತಮ್ಮ ಶಾಲೆಯ ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳಲು ಒಂಭತ್ತನೇಯ ತರಗತಿಯ ನಂತರ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ 10ನೇ ತರಗತಿಗೆ ದಾಖಲಿಸಿಕೊಳ್ಳದೇ ವರ್ಗಾವಣೆ ಪ್ರಮಾಣ ಪತ್ರವನ್ನು ನೀಡುತ್ತಿರುವ ಪ್ರಕರಣಗಳು ಕಂಡುಬರುತ್ತಿದೆ. ಕೆಲವು ವಿದ್ಯಾರ್ಥಿಗಳಿಗೆ ವಿವಿಧ ಕಾರಣಗಳಿಂದ ವರ್ಗಾವಣೆ ಪತ್ರ ನೀಡದೇ ಸತಾಯಿಸುತ್ತಿರುವ ಬಗ್ಗೆಯೂ ಸಾಕಷ್ಟು ದೂರುಗಳು ಆಯೋಗಕ್ಕೆ ಬಂದಿವೆ. ಆದ್ದರಿಂದ ಅನದಾನಿತ ಮತ್ತು ಅನುದಾನರಹಿತ ಶಾಲೆಗಳ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ, ಆರ್‌.ಟಿ.ಐ ಸೆಲ್‌ನ ಸಂಪೂರ್ಣ ಮಾಹಿತಿಯುಳ್ಳ ಫಲಕಗಳನ್ನು ಪಾಲಕರಿಗೆ ಮತ್ತು ಮಕ್ಕಳಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ಹೇಳಿದರು.  

ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016 ಪರಿಷ್ಕರಣೆ-2023ರ ಅಡಿ ಶೈಕ್ಷಣಿಕ ಸಂಸ್ಥೆಗಳಲ್ಲಿ “ಮಕ್ಕಳ ರಕ್ಷಣಾ ಸಮಿತಿ” ‘ಪೋಷಕರ  ಸಮಿತಿಗಳನ್ನು’ ರಚಿಸಿ ಸಭೆಗಳನ್ನು ನಿಯಮಿತವಾಗಿ ಆಯೋಜಿಸಬೇಕು. ಮಕ್ಕಳಿಗೆ ಲಭ್ಯವಾಗುವ ಸ್ಥಳಗಳಲ್ಲಿ ‘ಸಲಹಾ ಪೆಟ್ಟಿಗೆ’ಯನ್ನು ಅಳವಡಿಸಬೇಕು. ಮಕ್ಕಳು ತುರ್ತು ಸಂದರ್ಭದಲ್ಲಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳನ್ನು, ಮಕ್ಕಳ ಸಹಾಯವಾಣಿ-1098/112ನ್ನು ನಿಗದಿತ ನಮೂನೆಯಲ್ಲಿ ಬರೆಯಿಸಬೇಕು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ‘ಪೊಲೀಸ್ ಪರೀಶೀಲನಾ’ ವರದಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಂದ ‘ಬದ್ಧತಾ ಪತ್ರ’ವನ್ನು ಹಾಗೂ ‘ಮಕ್ಕಳಿಂದ ಬದ್ಧತಾ ಪತ್ರವನ್ನು’ ಪಡೆದುಕೊಳ್ಳಬೇಕು. ಶಾಲಾ ವಾಹನಗಳು ನಿಗದಿತ ಬಣ್ಣ ಹೊಂದಿರಬೇಕು. ಈ ಶಾಲಾ ವಾಹನಗಳಲ್ಲಿ ಅಗ್ನಿ ನಂದಕ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಜಿ.ಪಿ.ಆರ್‌.ಎಸ್ ವ್ಯವಸ್ಥೆ, ಸೀಟ್ ಬೆಲ್ಟ್‌ಗಳನ್ನು ಹೊಂದಿರಬೇಕು. ನಿಗದಿಪಡಿಸಿದ ಪ್ರಮಾಣದಷ್ಟೇ ಮಕ್ಕಳನ್ನು ಕರೆತರುವುದು. ಶಾಲಾ ವಾಹನಗಳಲ್ಲಿ ಕಡ್ಡಾಯವಾಗಿ ಕನಿಷ್ಠ ಒಬ್ಬ ಮಹಿಳಾ ಸಿಬ್ಬಂದಿ ಅಥವಾ ಪರಿಚಾರಕರು ಇರಬೇಕು. ಮಕ್ಕಳ ರಕ್ಷಣೆಗೆ ಆಯೋಗವು ಬದ್ಧವಾಗಿದ್ದು, ಯಾವುದೇ ಚಿಕ್ಕ ಲೋಪವನ್ನು ಆಯೋಗವು ಸಹಿಸುವುದಿಲ್ಲ ಎಂದು ಸೂಚನೆ ನೀಡಿದರು. 

ಭಾರತ ಸಂವಿಧಾನವು ಮಕ್ಕಳಿಗೆ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ನೀಡಿದೆ. ಆದ್ದರಿಂದ ‘ಯಾವುದೇ ಮಗುವು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕಾಗಿರುವುದು ಸರಕಾರದ ಆದ್ಯ ಕರ್ತವ್ಯವಾಗಿದೆ’.  ಶಾಲೆಯಿಂದ ಹೊರಗುಳಿದ ಮಕ್ಕಳು ಇದ್ದಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ರಚನೆಯಾಗಿರುವ ‘ಶಿಕ್ಷಣ ಕಾರ್ಯಪಡೆ’ ‘ಮಕ್ಕಳ ರಕ್ಷಣಾ ಸಮಿತಿ’ಗಳಿಂದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಬೇಕು. ಅದಕ್ಕಾಗಿ ಎರಡು ಸಮಿತಿಗಳನ್ನು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್ ಹಾವಳಿಯು ಅತ್ಯಧಿಕವಾಗಿದೆ. ಕೇಲವು ಕೋಚಿಂಗ್ ಸೆಂಟರ್‌ಗಳನ್ನು ಭೇಟಿ ನೀಡಿದ್ದು, ಅಲ್ಲಿನ ಮಕ್ಕಳಿಗೆ ನೀಡಿರುವ ಸೌಲಭ್ಯಗಳನ್ನು ತೀರಾ ನಿಕೃಷ್ಟವಾಗಿವೆ. ಸ್ವಚ್ಛವಾದ ಪರಿಸರವಿಲ್ಲ, ಮಲಗುವ ಕೋಣಿಗಳು ಇಲ್ಲ, ಯಾವುದೇ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿರುವುದಿಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿಯಮಿತವಾಗಿ ಕೊಂಚಿಂಗ್ ಸೆಂಟರ್, ಅನಧಿಕೃತ ವಸತಿ ಶಾಲೆಗಳನ್ನು ಭೇಟಿ ನೀಡಿ, ಪರೀಶೀಲಿಸಿ, ಲೋಪವಿರುವ ಸಂಸ್ಥೆಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಂಡು ವರದಿಯನ್ನು ಮಕ್ಕಳ ರಕ್ಷಣಾ ಆಯೋಗಕ್ಕೆ ನೀಡಬೇಕು. ತಪ್ಪಿದಲ್ಲಿ ಆಯೋಗವು ಸೂ-ಮೂಟೋ ಪ್ರಕರಣದಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳುತ್ತದೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರ್ ಗೌಡ ಜಿ ರಾಮತ್ನಾಳ್ ಅವರು ಎಚ್ಚರಿಕೆ ನೀಡಿದರು.   

ಈ ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಲಯ ಸಂಪನ್ಮೂಲ ಸಂಯೋಜಕರು, ಶಿಕ್ಷಣ ಸಂಯೋಜಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.