ಬೆಂಗಳೂರು, ಮೇ 28, ಕೋವಿಡ್ ಚಿಕಿತ್ಸೆಯ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ತನಿಖೆ ಮತ್ತು ಸ್ಥಳ ಪರಿಶೀಲನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಡೆಯಾಜ್ಞೆ ನೀಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಕೆಂಡಾಮಂಡಲರಾಗಿದ್ದು, ಈ ಸಂಬಂಧ ಸ್ಪೀಕರ್ ಅವರಿಗೆ ಪತ್ರ ಬರೆದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರ ಕುರಿತು ತನಿಖೆ ಮಾಡಲು ವಿಷಯದಲ್ಲಿ ಸ್ಪೀಕರ್ ನೀಡಿರುವ ತಡೆ ಸಂವಿಧಾನ ಮತ್ತು ಕಾನೂನಾತ್ಮಕ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತದೆ. ವಿಧಾನಮಂಡಲದ ಸಮಿತಿಗಳ ಅಧಿಕಾರ ಮೊಟಕುಮಾಡುವ ಪ್ರಯತ್ನ ತಕ್ಷಣ ಕೈಬಿಡಬೇಕು. ಲಘು ಪ್ರಕಟಣೆ 104ನ್ನು ಹಿಂಪಡೆದು ಭ್ರಷ್ಟಾಚಾರ ಪೋಷಿಸುವ ಕ್ರಮವಾಗಿರುವ ಈ ಆದೇಶವನ್ನು ಹಿಂಪಡೆದುಕೊಳ್ಳಬೇಕು ಎಚ್.ಕೆ.ಪಾಟೀಲ ಆಗ್ರಹಿಸಿದ್ದಾರೆ.
ವಿಶ್ವದಾದ್ಯಂತ ಮಹಾಮಾರಿ ಕೊರೋನ ವೈರಸ್ (ಕೋವಿಡ್-19)ರಿಂದ ಅತ್ಯಂತ ಗಂಭೀರ, ಕಳವಳಕಾರಿ ಹಾಗೂ ಆತಂಕದ ಪರಿಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಹತ್ವದ ಹೊಣೆಗಾರಿಕೆಯನ್ನು ಮತ್ತು ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಈ ಜವಾಬ್ದಾರಿಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಸರ್ಕಾರ ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಮತ್ತು ಸಮಯೋಚಿತ ಜನಪರ ನಿರ್ಧಾರಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾಗಿರುವುದು ಇಂದಿನ ಅವಶ್ಯಕತೆ. ಗಂಭೀರ ಪರಿಸ್ಥಿತಿಯನ್ನು ಎದುರಿಸುವ ಸಂದರ್ಭದಲ್ಲಿ ಸರ್ಕಾರ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆಗಳ ಬಗ್ಗೆ ಸರ್ಕಾರವನ್ನು ಎಚ್ಚರಿಸಿ ಹಲವಾರು ಪತ್ರಗಳನ್ನು ನಾನು ಸರ್ಕಾರಕ್ಕೆ ಈ ಹಿಂದೆಯೇ ಬರೆದಿದ್ದೆ. ಅನೇಕ ಸಲಹೆಗಳನ್ನು ಸಹ ಮಾಡಿದ್ದೆ ಎಂದು ಪಾಟೀಲ್ ಪತ್ರದಲ್ಲಿ ತಿಳಿಸಿದ್ದಾರೆ.
ದಿನಾಂಕ 19.5.2020 ರಂದು ಹಾಗೂ ಅದಕ್ಕೂ ಮೊದಲು ಕೋವಿಡ್-19 ನಿರ್ವಹಣೆಯಲ್ಲಿ ಅಗತ್ಯವಿರುವ ಪರಿಕರಗಳನ್ನು, ಉಪಕರಣಗಳನ್ನು ಖರೀದಿಸುವಲ್ಲಿ ಆಗಿರುವ ಅವ್ಯವಹಾರ ಹಾಗೂ ಭ್ರಷ್ಟಾಚಾರಗಳ ಬಗ್ಗೆ ದೂರುಗಳು ಕರ್ನಾಟಕ ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಲ್ಲಿಕೆಯಾಗಿವೆ. ಕಳೆದ 3 ತಿಂಗಳ ಅವಧಿಯಲ್ಲಿ ಸರ್ಕಾರದ ಕ್ರಮಗಳ ಬಗ್ಗೆ ಮತ್ತು ಸಂದೇಹಾಸ್ಪದ ನಿರ್ವಹಣೆಯ ಬಗ್ಗೆ ಶಾಸಕರಾಗಿ ನಾವು ಸಾರ್ವಜನಿಕರೊಂದಿಗೆ ಸ್ಪಂದಿಸುವಾಗ, ಮಾತನಾಡುವಾಗ ಮೌಖಿಕವಾಗಿಯೂ ಸಹ ಅನೇಕ ದೂರುಗಳನ್ನು ಸಾರ್ವಜನಿಕರು ನನ್ನ ಹಾಗೂ ಸಮಿತಿಯ ಸದಸ್ಯರ ಗಮನಕ್ಕೆ ತಂದಿದ್ದಾರೆ. ಮಾಧ್ಯಮಗಳಲ್ಲಿಯೂ ಸಹ ಅನೇಕ ವರದಿಗಳು ಪ್ರಸಾರ ಮತ್ತು ಪ್ರಕಟವಾಗುತ್ತಿವೆ. ಈ ಎಲ್ಲಾ ದೂರುಗಳ ಹಿನ್ನೆಲೆಯಲ್ಲಿ ದಿನಾಂಕ 19.5.2020 ರಂದು ಮತ್ತು ದಿನಾಂಕ: 26.5.2020 ರಂದು ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆಗಳಲ್ಲಿ ಸದಸ್ಯರೊಂದಿಗೆ ಈ ವಿಷಯವನ್ನು ಪ್ರಸ್ತಾಪ ಮಾಡಿ ಚರ್ಚಿಸಲಾಗಿತ್ತು. ಈ ಚರ್ಚೆಯ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮತ್ತು ಸರ್ಕಾರದ ಇತರ ಹಲವಾರು ಇಲಾಖೆಗಳು ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಮತ್ತು ಅಗತ್ಯ ನಿಯಮಾವಳಿಗಳ ಪಾಲನೆ ಮಾಡಿಲ್ಲದಿರುವ ಬಗ್ಗೆ ಗಂಭೀರ ಸ್ವರೂಪದ ದೂರುಗಳು ಪದೆ ಪದೇ ಎಲ್ಲಾ ವಲಯಗಳಿಂದ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಕೋವಿಡ್-19 ಆಸ್ಪತ್ರೆಗಳು ಸೋಂಕಿಗೆ ತುತ್ತಾಗಿರಬಹುದಾದ ಶಂಕಿತರನ್ನು ಪ್ರತ್ಯೇಕಿಸುವ (Quarantine) ವ್ಯವಸ್ಥೆ ಕಲ್ಪಿಸಲಾಗಿರುವ ಕೇಂದ್ರಗಳಿಗೆ, ವಿಮಾನ ನಿಲ್ದಾಣ, ಬಿ.ಎಂ.ಟಿ.ಸಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಗಳಲ್ಲಿ ಕಲ್ಪಿಸಲಾಗಿರುವ ಸುರಕ್ಷತಾ ಕ್ರಮಗಳ ಹಾಗೂ ಅನುಕೂಲತೆಗಳ ಬಗ್ಗೆ ಪರಿಶೀಲಿಸಲು ಖರೀದಿ ಮಾಡಲಾಗಿರುವ ಉಪಕರಣಗಳ ದರ ಕಾರ್ಯಕ್ಷಮತೆಗಳನ್ನು ಪರಿಶೀಲಿಸಲು ಇಲಾಖೆಯ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಸಮಾಲೋಚನೆ ನಡೆಸಲು ಮತ್ತು ಸ್ಥಳ ಪರಿಶೀಲನೆ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಈ ಪರಿಶೀಲನೆ ತಪಾಸಣೆ, ವೀಕ್ಷಣೆ ದಿನಾಂಕ 28.5.2020ರ ಗುರುವಾರ ಮದ್ಯಾಹ್ನ 12.30ರ ನಂತರ ಪ್ರಾರಂಭಿಸಲು ಸಮಿತಿಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಗಿತ್ತು ಎಂದು ಪತ್ರದಲ್ಲಿ ಪಾಟೀಲ್ ವಿವರಿಸಿದ್ದಾರೆ.
ಕರ್ನಾಟಕ ಡ್ರಗ್ಸ್ ಲಾಜಿಸ್ಟಿಕ್ಸ್ ಸಂಸ್ಥೆಯಲ್ಲಿ ಕರೋನಾ ವೈರಸ್ ಸಂಬಂಧಿತ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅಕ್ರಮ ಅವ್ಯವಹಾರ ಮತ್ತು ಭ್ರಷ್ಟಾಚಾರದ ಬಗ್ಗೆ ದೂರುಗಳು ಸಮಿತಿಯಿಂದ ಸ್ವೀಕೃತವಾಗಿವೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ ಕಲಂ 4 ರನ್ವಯ ನೀಡಿರುವ ವಿನಾಯಿತಿಯನ್ನು ದುರುಪಯೋಗ ಪಡಿಸಿಕೊಂಡು ಸಂಸ್ಥೆಯ ಅಧಿಕಾರಿಗಳು ಹತ್ತಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆಸಿದ್ದು ಸಾರ್ವಜನಿಕ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುತ್ತಾರೆ ಎಂಬ ಗಂಭೀರ ಸ್ವರೂಪದ ಆರೋಪವನ್ನು ದಾಖಲೆಗಳ ಸಮೇತ ಸಮಿತಿಗೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಿ.ಪಿ.ಇ ಕಿಟ್ ಖರೀದಿ: ಮಹಾರಾಷ್ಟ್ರ ಮೂಲದ ಅಮರಾವತಿಯ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್ ಮೂಲಕ ಖರೀದಿಸಿರುವ ಪಿ.ಪಿ.ಇ ಕಿಟ್‍ಗಳು ಕಳಪೆ ಗುಣಮಟ್ಟದ್ದಾಗಿದ್ದು, 2 ಬಾರಿ ಖರೀದಿಸಲಾಗಿದ್ದು 2 ಬಾರಿಯ ದರಗಳಲ್ಲಿ ಭಾರಿ ಪ್ರಮಾಣದ ಅಂತರವಿದೆ.
ಕೊರೋನಾ ಪರೀಕ್ಷಾ ಕಿಟ್ ಖರೀದಿ: ರಾಜಸ್ಥಾನ ಸರ್ಕಾರವು ಚೀನಾದ 2 ಕಂಪನಿಗಳಿಂದ ಖರೀದಿ ಮಾಡಿ ಬಳಕೆಗೆ ಯೋಗ್ಯವಲ್ಲವೆಂದು ನಿರ್ಧರಿಸಿದ ಮೇಲೆ ಅದೇ ಕಂಪನಿಯ ಪರೀಕ್ಷಾ ಕಿಟ್‍ಗಳನ್ನು ಖರೀದಿಸಿದ ರಾಜ್ಯ ಸರ್ಕಾರ ನಂತರ ಈ ಕಿಟ್‍ಗಳು ಕಳಪೆ ಗುಣಮಟ್ಟದ್ದವೆಂದು ನಿರ್ಧರಿಸಿ ಬಳಕೆಯನ್ನು ನಿಲ್ಲಿಸಿದೆ. ಬಳಕೆ ಮಾಡಲಾದ ವೆಂಟಿಲೇಟರ್‌ಗಳನ್ನು ಖರೀದಿ ಮಾಡಿ ಕೋಟ್ಯಾಂತರ ರೂಪಾಯಿ ಪಾವತಿ ಮಾಡಲಾಗಿದೆ. ದೆಹಲಿಯ ಆರ್.ಕೆ ಮೆಡಿಕಲ್ ಸೊಲ್ಯೂಷನ್ಸ್ ಸಂಸ್ಥೆಯಿಂದ ಕಳಪೆ ಗುಣಮಟ್ಟದ ವೆಂಟಿಲೇಟರ್‍ಗಳನ್ನು ಖರೀದಿಸಲಾಗಿದೆ.
ಸ್ಯಾನಿಟೈಸರ್ ಖರೀದಿ: 500 ಎಂ.ಎಲ್ ಸ್ಯಾನಿಟೈಸರ್ ಬಾಟಲ್‍ಗಳ್ನು 97.44 ರೂಪಾಯಿಗೆ ಖರೀದಿ ಮಾಡಿದೆ. ಆದರೆ ಈ ಕಂಪನಿಯು ಖರೀದಿಯ ಅರ್ಧದಷ್ಟು ಮಾತ್ರ ಪೂರೈಸಿದೆ. ಇದೇ ಕಂಪನಿಯಿಂದ ಮತ್ತೊಮ್ಮೆ ಪ್ರತಿ ಸ್ಯಾನಿಟೈಸರ್‍ಗೆ 250 ರೂಪಾಯಿಯಂತೆ ಖರೀದಿಸಲಾಗಿದ್ದು ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ.
ಸಿರಿಂಜ್ ಖರೀದಿ: ಸಿರಿಂಜ್, ಸಿರಿಂಜ್ ಪಂಪ್ ಮತ್ತು ವೈದ್ಯಕೀಯ ಉಪಕರಣಗಳನ್ನು ಮದ್ರಾಸ್ ಸರ್ಜಿಕಲ್ಸ್ ಹಾಗೂ ಇತರ ಕಂಪನಿಗಳ ಮೂಲಕ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಖರೀದಿಸಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದ ಹಾನಿಯಾಗಿರುವ ಬಗ್ಗೆ ದಾಖಲೆಗಳ ಸಮೇತ ದೂರುಗಳನ್ನು ಸಲ್ಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಧಾನ ಮಂಡಲದ ಜವಾಬ್ದಾರಿಯುತ ಸಮಿತಿಯಾಗಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸ್ಥಳ ಪರಿಶೀಲನೆ, ದಾಖಲೆಗಳ ಪರಿಶೀಲನೆ ಕೈಗೊಳ್ಳಲು ನಿರ್ಣಯಿಸಿತ್ತು. ಸಭೆಯ ಈ ನಿರ್ಣಯ ದಿನಾಂಕ 26.5.2020 ರಂದು ನಡೆದ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಮಾಧ್ಯಮಗಳಲ್ಲಿ ಈ ಭೆಟ್ಟಿಯ ಕುರಿತು ವರದಿ ಪ್ರಕಟವಾಗಿ ಸಾರ್ವಜನಿಕರ ಗಮನಕ್ಕೆ ಬಂದ ಮೇಲೆ ದಿನಾಂಕ 27.5.2020 ರಂದು ಮದ್ಯಾಹ್ನ 2.30ಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಉಪ ಕಾರ್ಯದರ್ಶಿಯವರಿಗೆ ಕರ್ನಾಟಕದ ವಿಧಾನಸಭೆಯ ಕಾರ್ಯದರ್ಶಿಯವರಿಗೆ ತಿಳಿಸಲಾಗಿತ್ತು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಆದರೆ ಈ ಮಧ್ಯೆ, “ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನ ವೈರಸ್ (ಕೋವಿಡ್-19)ನ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಮಂಡಲ/ವಿಧಾನಸಭೆಯ ಸಮಿತಿಗಳು ಅಧ್ಯಯನ ಪ್ರವಾಸ ಕೈಗೊಂಡಲ್ಲಿ ಇಲಾಖಾ ಅಧಿಕಾರಿಗಳು/ಸಾರ್ವಜನಿಕರು ಸಮಿತಿಯನ್ನು ಭೇಟಿ ಮಾಡುವ ಸಂದರ್ಭವಿರುವುದರಿಂದ, ಆರೋಗ್ಯದ ಹಿತದೃಷ್ಟಿಯಿಂದ ಸಾಮಾಜಿಕ ಅಂತರ ಇತ್ಯಾದಿಗಳನ್ನು ಕಾಪಾಡಿಕೊಳ್ಳುವುದು ಅವಶ್ಯವಿದೆ. ಆದುದರಿಂದ, ಮುಂದಿನ ಆದೇಶದವರೆಗೂ ರಾಜ್ಯದೊಳಗೆ ಅಥವಾ ಹೊರ ರಾಜ್ಯಗಳಲ್ಲಿ ಯಾವುದೇ ಅಧ್ಯಯನ ಪ್ರವಾಸವನ್ನು ಹಾಗೂ ಸ್ಥಳೀಯವಾಗಿಯೂ ಯಾವುದೇ ಭೇಟಿ ಅಥವಾ ಸ್ಥಳ ಪರಿಶೀಲನೆಗಳನ್ನು ಕೈಗೊಳ್ಳಬಾರದೆಂದು ಸಭಾಧ್ಯಕ್ಷರು ಆದೇಶಿಸಿರುತ್ತಾರೆ ಎಂದು ವಿಧಾನ ಸಭೆ ಕಾರ್ಯದರ್ಶಿ ವಿಶಾಲಕ್ಷಿಯವರು ತಿಳಿಸಿದ್ದಾರೆ.
ಸಾರ್ವಜನಿಕ ಲೆಕ್ಕಪತ್ರ ಸಮಿತಿ ಭ್ರಷ್ಟಾಚಾರದ ದೂರುಗಳನ್ನು ತಪಾಸಣೆ ಮಾಡಲು, ಪರಿಶೀಲಿಸಲು ಕ್ರಮ ಕೈಗೊಳ್ಳುವ ಉದ್ದೇಶದಿಂದ ಸ್ಥಳ ಪರಿಶೀಲನೆ ಮಾಡಲು ನಿರ್ಣಯ ಮಾಡಿದ ಮೇಲೆ ಈ ಪ್ರಕಟಣೆ ಹೊರಬಿದ್ದಿರುವುದರಿಂದ ಭ್ರಷ್ಟಾಚಾರದ ಪ್ರಕರಣಗಳ ತನಿಖೆಯನ್ನು ತಡೆಯುವ ಉದ್ದೇಶದಿಂದಲೇ ಇಂಥ ಪ್ರಕಟಣೆ ಹೊರಬಿದ್ದಿರಬಹುದೆಂಬ ಸಂದೇಹ ಸಹಜವಾಗಿ ಸಾರ್ವಜನಿಕರಿಗೆ ಉಂಟಾಗುತ್ತಿದೆ. ಸಮಿತಿಯ ಸದಸ್ಯರು ಸಹ ಇಂಥ ಪ್ರಕಟಣೆಯನ್ನು ಒಪ್ಪಲು ಅಥವಾ ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ರಾಜ್ಯವು ತೀವ್ರ ಗಂಭೀರವಾದಂಥ ಕಂಡು ಕೇಳರಿಯದ ಕೊರಾನಾ ವೈರಸ್‍ನಂತಹ ಮಹಾಮಾರಿಯನ್ನು ಎದುರಿಸುತ್ತಿರುವಾಗ ಭ್ರಷ್ಟಾಚಾರದ ದೂರುಗಳನ್ನು ಗಂಭೀರವಾಗಿ ಪರಿಗಣಿಸದೇ ಇರಲು ಸಾಧ್ಯವೇ ಇಲ್ಲ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ದೂರುಗಳ ಬಗ್ಗೆ ತನಿಖೆ, ತಪಾಸಣೆ, ಸ್ಥಳ ಪರಿಶೀಲನೆ ಕೈಗೊಳ್ಳಲು ಯಾವುದೇ ಅಡ್ಡಿ ಇರಬಾರದು. ಏಪ್ರಿಲ್-17, 2020 ರಿಂದ ರಾಜ್ಯದಲ್ಲಿ ಹಂತ ಹಂತವಾಗಿ ಲಾಕ್‍ಡೌನ್‍ನ್ನು ಸಡಿಲಗೊಳಿಸಲಾಗಿದೆ. ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಸಾಮಾಜಿಕ ಅಂತರವಿಲ್ಲದೇ ಮದ್ಯದಂಗಡಿಗಳ ಮುಂದೆ ಮೈಲುಗಟ್ಟಲೇ ಸಾಲುಗಳನ್ನು ಕಂಡ ಮೇಲೂ ಯಾರೂ ಏನೂ ಕ್ರಮ ಕೈಗೊಳ್ಳಲಿಲ್ಲ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರವಿಲ್ಲದ ಅನೇಕ ಘಟನೆಗಳು ದಿನವೂ ನಡೆಯುತ್ತಿವೆ. ಅರಮನೆ ಮೈದಾನದ ಬಳಿ ಹೊರರಾಜ್ಯಗಳ ಕಾರ್ಮಿಕರ ಸಾಲುಗಳನ್ನು ಯಾವುದೇ ಸಾಮಾಜಿಕ ಅಂತರ ಪಾಲಿಸದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಸರ್ಕಾರ ಅದರ ಬಗ್ಗೆ ಯಾವುದೇ ರೀತಿಯ ಕಾಳಜಿ ತೋರದೇ ಇದ್ದುದನ್ನೂ ಸಹ ನಾವು ಕಂಡಿದ್ದೇವೆ. ಜೂನ್-1ನೇ ತಾರೀಖಿನಿಂದ ದೇವಾಲಯಗಳ ಬಾಗಿಲುಗಳನ್ನು ತೆರೆಯುವುದಕ್ಕೂ ಸರ್ಕಾರವೇ ನಿರ್ಣಯಿಸಿದೆ. ಜೂನ್-18 ರಂದು ದ್ವಿತೀಯ ಪಿಯುಸಿ ಪರೀಕ್ಷೆ ನಿಗದಿಯಾಗಿದೆ. ಜೂನ್-25 ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗಳ ದಿನಾಂಕಗಳನ್ನು ಘೋಷಿಸಲಾಗಿದೆ. ಬಸ್ ಪ್ರಯಾಣ, ರೈಲ್ವೇ ಪ್ರಯಾಣ, ವಿಮಾನಯಾನ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ರೈಲ್ವೇ ನಿಲ್ದಾಣಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ವಿಮಾನಯಾನದ ಸಂದರ್ಭದಲ್ಲಿ ಸಾಮಾಜಿಕ ಅಂತರ ಪಾಲನೆಯಾಗದಿರುವ ಬಗ್ಗೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವ ಬಗ್ಗೆ ಅನೇಕ ದೂರುಗಳು ನಮ್ಮ ನಿಮ್ಮ ಕಣ್ಣಮುಂದೆ ಇವೆ.
ಸಾಮಾಜಿಕ ಅಂತರ ಸುರಕ್ಷತಾ ಕ್ರಮಗಳನ್ನು ಒಳಗೊಂಡಂತೆ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆಯೇ? ಸರ್ಕಾರವು ಹೇಳಿಕೊಳ್ಳುತ್ತಿರುವಂತೆ ಸೌಲಭ್ಯ, ಸೌಕರ್ಯಗಳನ್ನು ಒದಗಿಸಿ ಕೋವಿಡ್ ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗಿದೆಯೇ? ಸೋಂಕಿಗೆ ತುತ್ತಾಗಿರಬಹುದಾದ ಶಂಕಿತರನ್ನು ಪ್ರತ್ಯೇಕಿಸುವ ವ್ಯವಸ್ಥೆ ಕಲ್ಪಿಸಲಾಗಿರುವ ಕೇಂದ್ರಗಳಲ್ಲಿ ಅಪೇಕ್ಷಿತ ಪ್ರಮಾಣದ ಸುರಕ್ಷತಾ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗಿದೆಯೇ? ಎಂಬ ಬಗ್ಗೆ ಸ್ಥಳ ಪರಿಶೀಲನೆ ಇಲ್ಲದೆಯೇ ನಿರ್ಣಯಕ್ಕೆ ಬರುವುದು ಕಷ್ಟಸಾಧ್ಯ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಮ್ಮ ಲಘು ಪ್ರಕಟಣೆ ಆರೋಗ್ಯದ ಹಿತದೃಷ್ಟಿಯಿಂದ ಸಾಮಾಜಿಕ ಅಂತರ ಇತ್ಯಾದಿಗಳನ್ನು ಕಾಪಾಡಿಕೊಳ್ಳುವುದು ಅವಶ್ಯವಿರುತ್ತದೆ ಎಂದು ನಮೂದಿಸಿದೆ. ಸಾರ್ವಜನಿಕರಿಗೆ ಇಲ್ಲದ ಆರೋಗ್ಯದ ಕಾಳಜಿ ನಮಗೆ ತೋರಿರುವುದಕ್ಕೆ ಸಭಾಧ್ಯಕ್ಷರಿಗೆ ಧನ್ಯವಾದಗಳನ್ನು ಹೇಳಬೇಕಾಗುತ್ತದೆ. ಆದರೆ ಸರ್ಕಾರಿ ಕಚೇರಿಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ, ವಿಧಾನ ಮಂಡಲದ ಸಚಿವಾಲಯವು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಸಮಿತಿಗಳ ಕಾರ್ಯಕಲಾಪಗಳು ಪ್ರಾರಂಭವಾಗಿರುವಾಗ ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ತನಿಖೆ ಮಾಡಲು ಸಾರ್ವಜನಿಕರಿಗೆ ಸಂಕಷ್ಟ ಕಾಲದಲ್ಲಿ ಒದಗಿಸಬೇಕಾದ ಸೌಲಭ್ಯ, ಸೌಕರ್ಯ, ಸೇವೆ ನೀಡಲಾಗುತ್ತಿದೆಯೇ ಎಂಬ ಬಗ್ಗೆ ತಪಾಸಣೆ ಮಾಡಲು ಸಾರ್ವಜನಿಕ ಲೆಕ್ಕಪತ್ರ ಸಮಿತಿಯಂತಹ ವಿಧಾನ ಮಂಡಲದ ಮಹತ್ವದ ಸಮಿತಿಯ ಕಾರ್ಯನಿರ್ವಹಣೆಗೆ ರಾಜ್ಯದೊಳಗೆ ಅಥವಾ ಹೊರರಾಜ್ಯಗಳಲ್ಲಿ ಯಾವುದೇ ಅಧ್ಯಯನ ಪ್ರವಾಸಗಳನ್ನು ಹಾಗೂ ಸ್ಥಳೀಯವಾಗಿ ಯಾವುದೇ ಭೇಟಿ ಅಥವಾ ಸ್ಥಳಪರಿಶೀಲನೆಗಳನ್ನು ಕೈಗೊಳ್ಳಬಾರದೆಂಬ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ತಮ್ಮ ಆದೇಶ ಆಘಾತ ತಂದಿದೆ ಎಂದು ಎಚ್.ಕೆ.ಪಾಟೀಲ್ ಪತ್ರದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಈ ತಕ್ಷಣ ಈ ಸೂಚನೆಯನ್ನು ತಕ್ಷಣ ಹಿಂಪಡೆದು ಭ್ರಷ್ಟಾಚಾರ ಹೆಪ್ಪುಗಟ್ಟುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸರಿಯಾದ ಸೌಲಭ್ಯ, ಸೌಕರ್ಯಗಳಿಂದ ಅವ್ಯವಹಾರದ ಕಾರಣಕ್ಕಾಗಿ ವಂಚಿತ ಮಾಡುವ ಮತ್ತು ಕೊರೊನಾ ವಾರಿಯರ್ಸ್‍ಗೆ ಅಗತ್ಯದ ಪರಿಕರಗಳನ್ನು ವಿತರಿಸದಿರುವ ಮತ್ತು ಗುಣಮಟ್ಟದ ಬಗ್ಗೆ ಸಂಶಯಾತ್ಮಕ ಸ್ಥಿತಿ ಉಂಟಾಗಿರುವಾಗ ತಮ್ಮ ಆದೇಶವನ್ನು ಹಿಂಪಡೆಯಬೇಕು. ಇಂಥ ಗಂಭೀರ ಪರಿಸ್ಥಿತಿಯಲ್ಲಿ/ಸಂಕಷ್ಟ ಕಾಲದಲ್ಲಿ ಶಾಸನ ಸಭೆ, ಶಾಸನ ಸಭೆಯ ಸಮಿತಿಗಳು ತಮ್ಮ ಜವಾಬ್ದಾರಿಯುತ ಕರ್ತವ್ಯಗಳನ್ನು ನಿರ್ವಹಿಸುವುದು ಸಂವಿಧಾನಿಕ ಬಾಧ್ಯತೆ. ಕಾನೂನು ಹಾಗೂ ನಿಯಮಗಳ ಅನ್ವಯ ಕೆಲಸ ಮಾಡುವ ಉತ್ತರದಾಯಿತ್ವ ಸಮಿತಿಗಳದ್ದು. ಈ ಪರಿಶೀಲನೆ ಮತ್ತು ತಪಾಸಣೆ ಸಾರ್ವಜನಿಕ ಹಣದ ಸದ್ವಿನಿಯೋಗದ ಕುರಿತು ಪರಿಶೀಲಿಸಲು ಮತ್ತು ಪ್ರಮಾದಗಳನ್ನು ಪತ್ತೆಹಚ್ಚಲು ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಗಳ 264)1)ರನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ನಿರ್ಭಯವಾಗಿ, ನಿರ್ಧಾಕ್ಷಿಣ್ಯವಾಗಿ, ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸುವುದಕ್ಕೆ ತಮ್ಮಿಂದ ಯಾವುದೇ ಅಡ್ಡಿ ಆಗಕೂಡದು. ಈ ಹಿನ್ನೆಲೆಯಲ್ಲಿ ಲಘು ಪ್ರಕಟಣೆಯನ್ನು ತಕ್ಷಣ ಹಿಂಪಡೆದು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸ್ವತಂತ್ರವಾಗಿ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗುವಂತೆ ಸಂವಿಧಾನ ಮತ್ತು ಕಾನೂನಾತ್ಮಕ ವ್ಯವಸ್ಥೆಯನ್ನು ಬುಡಮೇಲು ಮಾಡದಂತೆ ವಿಧಾನ ಮಂಡಲದ ಸಮಿತಿಗಳ ಅಧಿಕಾರವನ್ನು ಮೊಟಕುಗೊಳಿಸುವ ಇಂಥ ಪ್ರಯತ್ನವನ್ನು ಕೈಬಿಡಬೇಕು ಎಂದು ಎಚ್.ಕೆ.ಪಾಟೀಲ್ ಪತ್ರದಲ್ಲಿ ಆಗ್ರಹಿಸಿದ್ದಾರೆ.