ಪ್ರಬುದ್ಧ ಭಾರತ ನಿರ್ಮಾಣಕ್ಕೆ ಅಂಬೇಡ್ಕರರ ವಿಚಾರಧಾರೆಗಳ ಅನುಷ್ಠಾನ ಅಗತ್ಯ:ಜಾನಕಿ ಕೆ.ಎಂ.

Implementation of Ambedkar's ideologies is necessary for building an enlightened India: Janaki K.M.

ಲೋಕದರ್ಶನ ವರದಿ 

ಪ್ರಬುದ್ಧ ಭಾರತ ನಿರ್ಮಾಣಕ್ಕೆ ಅಂಬೇಡ್ಕರರ ವಿಚಾರಧಾರೆಗಳ ಅನುಷ್ಠಾನ ಅಗತ್ಯ:ಜಾನಕಿ ಕೆ.ಎಂ. 

ಬಾಗಲಕೋಟ 27: ನನ್ನ ದೇಶ ಭಾರತ ಹೀಗೆ ಇರಬೇಕೆಂಬ ಕಲ್ಪನೆಯಲ್ಲಿ ತನ್ನ ಇಡೀ ಜೀವನವನ್ನೇ ದೇಶಕ್ಕಾಗಿ ಮುಡಿಪಾಗಿಟ್ಟು ಸಂವಿಧಾನ ರಚಿಸಿ ಜಾಗತಿಕ ಮನ್ನಣೆ ಪಡೆದವರು ಡಾ.ಬಿ.ಆರ್‌.ಅಂಬೇಡ್ಕರ  ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು. 

ಅವರು ಇಂದು ನವನಗರದ ಡಾ.ಬಿ.ಆರ್‌.ಅಂಬೇಡ್ಕರ ಭವನದಲ್ಲಿ ಛಲವಾದಿ ಮಹಾಸಭಾ ಜಿಲ್ಲಾ ಸಮಿತಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ ಅವರ 134ನೇ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡುತ್ತ ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದಲ್ಲಿ ಸ್ಥಾನಮಾನ ನೀಡಿ ತಮ್ಮ ಕನಸು ಸಾಕಾರ ಮಾಡಿಕೊಂಡ ಈ ಕಾರ‌್ಯ ಇಂದು ನಮ್ಮೆಲ್ಲ ದೇಶವಾಸಿಗಳು ಅನುಭವಿಸುತ್ತಿದ್ದೇವೆ ಎಂದ ಅವರು ಪ್ರಬುದ್ಧ ಭಾರತ ನಿರ್ಮಾಣಕ್ಕೆ ಡಾ.ಅಂಬೇಡ್ಕರರವರ ವಿಚಾರಧಾರೆಗಳ ಅನುಷ್ಠಾನ ಅಗತ್ಯವಾಗಿದೆ ಎಂದರು. 

ನನಗನಿಸುತ್ತಿರುವದು ಅವರ ವೈಚಾರಿಕ ಪ್ರಜ್ಞೆ ಅಂದು ಅವರು ಅನುಭವಿಸಿದ ಬಡತನ, ಅವಮಾನ, ಕಷ್ಟದ ದಿನಗಳಲ್ಲೂ ಕೂಡ ವಿಶ್ವಕ್ಕೆ ಮಾದರಿಯಾಗುವಂತ ಸಂವಿಧಾನ ಇಂದು ನಮ್ಮೆಲ್ಲರ ಬಾಳಿನ ದಾರೀದೀಪವಾಗಿದೆ ಆದರೆ ಇಂದು ನಾವೆಲ್ಲ ಅಂಬೇಡ್ಕರ ಬಂಧುಗಳು, ಭೀಮ ಬಂಧುಗಳು ಎಂದು ಹೇಳಿಕೊಂಡರೆ ಸಾಲದು ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಂಡು ಸತ್ಯಾಸತ್ಯತೆ ತಿಳಿದುಕೊಂಡಾಗ ಮಾತ್ರ ಅಂಬೇಡ್ಕರರಿಗೆ ಗೌರವ ನೀಡಿದಂತಾಗುತ್ತದೆ ಎಂದರು. 

ನಮ್ಮ ಸಮಾಜದಲ್ಲಿ ಜನಿಸಿದ ಅಂಬೇಡ್ಕರ ಒಬ್ಬ ಮಹಾನ ವ್ಯಕ್ತಿ ಆಗಿದ್ದಾರೆ ಅವರಂತೆ ಬೇಡ ಶಾಲೆಯಲ್ಲಿ ಪ್ರಥಮ ವರ್ಗದಲ್ಲಿ ತೇರ್ಗಡೆ ವಿದ್ಯಾರ್ಥಿ ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣವಾಗಬೇಕೆಂಬ ಕಲ್ಪನೆ ಹೊಂದಿ ಅಂಬೇಡ್ಕರ ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಸ್ವಲ್ಪವಾದರು ಅಳವಡಿಸಿಕೊಂಡರೆ ಬದುಕು ಸುಲಭವಾಗುತ್ತದೆ ಅಂಬೇಡ್ಕರ ಅವರು ಒಂದು ಶಕ್ತಿಯಾಗಿದ್ದಾರೆ ಅವರನ್ನು ನಾವು ವ್ಯಕ್ತಿಯಾಗಿ ಗುರ್ತಿಸುವದು ತಪ್ಪು ಎಂದು ಹೇಳಿದರು. 

ಅಂಬೇಡ್ಕರ ಅವರ ಪ್ರತಿಭೆ ಎಷ್ಟಿತ್ತೆಂದರೆ ಈ ದೇಶಕ್ಕೆ ಸಾವಿರ ವರ್ಷಗಳವರೆಗೆ ಇರುವಂತಹ ಸಂವಿಧಾನದ ನೀಲಿ ನಕಾಶೆಯನ್ನು ತಯಾರಿಸಿದ್ದಾರೆ. ಅದನ್ನು ನಾವು ಯಾರಾದರೂ ಇದುವರೆಗೆ ನೋಡಿದ್ದೇವೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದರು. 

ಮುಖ್ಯ ಅತಿಥಿಗಳಾಗಿ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ್ ಮಾತನಾಡಿ ಡಾ.ಅಂಬೇಡ್ಕರರ ಜಯಂತಿ ಉತ್ಸವವನ್ನು ಎಪ್ರಿಲ್ ಒಂದು ತಿಂಗಳ ಪರ್ಯಂತರ ಆಚರಿಸುತ್ತ ಬಂದಿದ್ದೇವೆ ಆದರೆ ಅವರ ಮಾನವೀಯತೆ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲಗೊಂಡಿದ್ದೇವೆ. ಒಬ್ಬ ವ್ಯಕ್ತಿ ಕಷ್ಟದಲ್ಲಿದ್ದಾಗ ಆಕಸ್ಮಿಕವಾಗಿ ಯಾರೂ ಸಹಾಯ ಮಾಡಿದಾಗ ಸಹಾಯ ಪಡೆದವನು ಆ ವ್ಯಕ್ತಿಯನ್ನು ಮೇಲಿಂದ ಮೇಲೆ ನೆನಪಿಸಿಕೊಳ್ಳುವಂತೆ ಅಂಬೇಡ್ಕರ ಅವರು ಮಾಡಿದ ಈ ಮಹಾನ ಕಾರ್ಯವನ್ನು ಅವರ ಜನ್ಮೋತ್ಸವ ಆಚರಿಸುವ ಮೂಲಕವಾದರು ನಾವು ಅವರನ್ನು ನೆನಪಿಸಿಕೊಳ್ಳುವದು ಅವಶ್ಯವಾಗಿದೆ ಎಂದರು. 

ಎಲ್ಲರ ಬುದ್ದಿಮಟ್ಟವೂ ಒಂದೇ ಇರುತ್ತದೆ ಆದರೆ ಅನುಸರಿಸುವ ಮಾರ್ಗ ಬೇರೆ-ಬೇರೆಯಾಗಿರುತ್ತದೆ ಇದರಿಂದ ಬುದ್ದಿ ಇಲ್ಲದಿದ್ದರೆ ನೈತಿಕತೆ ನಾಶವಾಗುತ್ತದೆ, ನೈತಿಕತೆ ಇಲ್ಲದಿದ್ದರೆ ಕ್ರೀಯಾಶೀಲತೆ ನಾಶವಾಗುತ್ತದೆ ಕ್ರೀಯಾಶೀಲತೆ ನಾಶವಾದಾಗ ಅಂದು ಆ ವ್ಯಕ್ರಿಯೇ ನಾಶವಾಗಿ ಹೋಗುತ್ತಾನೆ ಇದನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕು ಆ ನಿಟ್ಟಿನಲ್ಲಿ ಅಂಬೇಡ್ಕರ ಅವರ ಆಶಯದಂತೆ ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕೆಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷೆ ಶ್ರೀಮತಿ ವಾಣಿ ಕೆ.ಶಿವರಾಮು ವಹಿಸಿ ಮಾತನಾಡಿ ಸಮಾಜದ ಸಂಘಟನೆಯಲ್ಲಿ ಎಲ್ಲರೂ ಕೈಜೋಡಿಸುವ ಮೂಲಕ ಪ್ರತಿಯೊಬ್ಬರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡುವ ಮೂಲಕ ಅವರ ಬೆಳವಣಿಗೆಗೆ ಶ್ರಮಿಸೋಣ ಎಂದರು. 

ಚಿತ್ರದುರ್ಗ ಛಲವಾದಿ ಗುರುಪೀಠದ ಜಗದ್ಗುರು ಬಸವನಾಗಿದೇವ ಶರಣರು. ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

ಕಾರ‌್ಯಕ್ರಮವೂ ಎಪಿಎಂಸಿ ಹತ್ತಿರದ ಬುದ್ದವಿಹಾರದ ಪೂಜ್ಯ ಆಯುಷ್ಮಾನ ದಮ್ಮಪಾಲ ಬಂತೇಜಿ ಅವರು ಬುದ್ಧವಂದನೆಯೊಂದಿಗೆ ಆರಂಭಗೊಂಡಿತು. ದೈಹಿಕ ಶಿಕ್ಷಕ ರಾಜೇಂದ್ರ ನಾಲಬಂದ ಸ್ವಾಭಿಮಾನ ಗೀತೆ ಹಾಡಿದರು. ಪಶು ವೈದ್ಯಾಧಿಕಾರಿ ಡಾ.ಪಂಚಶೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ವಿವೇಕಾನಂದ ಗರಸಂಗಿ ಸ್ವಾಗತಿಸಿದರು. ಶರಣಪ್ಪ ಬೇವೂರ ಕಾರ‌್ಯಕ್ರಮ ನಿರೂಪಿಸಿ ಕೊನೆಗೆ ವಂದಿಸಿದರು. 

ಭಾವಚಿತ್ರದ ಭವ್ಯ ಮೆರವಣಿಗೆ: ಕಾರ‌್ಯಕ್ರಮದ ಪೂರ್ವದಲ್ಲಿ ಸೆಕ್ಟರ್ ನಂ.45ರಲ್ಲಿ ಬುದ್ಧ ಉದ್ಯಾನದಿಂದ ನವನಗರದ ಪ್ರಮುಖ ಬೀದಿಗಳಲ್ಲಿ ಡಾ.ಬಿ.ಆರ್‌.ಅಂಬೇಡ್ಕರ ಅವರ ಭಾವಚಿತ್ರದ ಭವ್ಯ ಮೆರವಣಿಗೆ ಕಲಾ ತಂಡಗಳೊಂದಿಗೆ ನಡೆಯಿತು.