ಭಾರತೀಯ ಶಿಲ್ಪಕಲೆಗೆ ಅಮರಶಿಲ್ಪಿ ಜಕಣಾಚಾರಿಯವರ ಅಪಾರ ಕೊಡುಗೆ: ಕಟ್ಟಿಮನಿ

Immortal Sculptor Jakanachari's Great Contribution to Indian Sculpture: Kattimani

ಭಾರತೀಯ ಶಿಲ್ಪಕಲೆಗೆ ಅಮರಶಿಲ್ಪಿ ಜಕಣಾಚಾರಿಯವರ ಅಪಾರ ಕೊಡುಗೆ: ಕಟ್ಟಿಮನಿ 

ಮುದ್ದೇಬಿಹಾಳ 01: ಸರ್ವ ಕಾಲದಲ್ಲೂ ಸದಾಕಾಲಕ್ಕೂ ಜೀವಂತವಾಗಿರುವ ಭಾರತೀಯ ಶಿಲ್ಪಕಲಾ ಕೌಶಲ್ಯಕ್ಕೆ ಅಮರಶಿಲ್ಪಿ ಜಕಣಾಚಾರಿಯವರು ಅಪಾರ ಕೊಡುಗೆ ನೀಡಿದ್ದಾರೆ ಮಾತ್ರವಲ್ಲದೇ ಸಾಂಸ್ಕೃತಿಕ ರಾಯಭಾರಿ ಎಂದರೆ ತಗಪ್ಪಾಗಲಾರದು ಕಾರಣ ಇಂತಹ ವ್ಯಕ್ತಿಗಳ ದಿನಾಚರಣೆಯನ್ನು  ಸರ್ವ ಧರ್ಮದವರು ಆಚರಿಸುವ ಮೂಲಕ ಗೌರವಿಸಿದಾಗ ಮಾತ್ರ ದೇಶದಲ್ಲಿ ಸಮಾನತೆ ಸಾರಿದಂತಾಗುತ್ತದೆ ಎಂದು ತಹಶಿಲ್ದಾರ ಬಲರಾಮ ಕಟ್ಟಿಮನಿ ಅಭಿಪ್ರಾಯಪಟ್ಟರು. 

 ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ತಾಲೂಕಾ ಆಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಕಣಾಚಾರ್ಯರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. 

ಭಾರತ ಸೇರಿದಂತೆ ವಿಶ್ವದ ವಿವಿಧ ಕಡೆ ಜಕಣಾಚಾರಿಯವರ ಶಿಲ್ಪಕಲೆಗಳು ಇಂದಿಗೂ ಜೀವಂತವಾಗಿದೆ. ಶಿಲ್ಪಕಲೆಗೆ ಅವರು ನೀಡಿರುವ ಕೊಡುಗೆಗೆ ಇವುಗಳೇ ಸಾಕ್ಷಿ. ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯಗಳಲ್ಲಿನ ಶಿಲ್ಪಕಲೆ ವಿಶ್ವಕರ್ಮರ ಪ್ರಸ್ತುತತೆಯನ್ನು ಬಿಂಬಿಸುತ್ತಿದೆ.  ನಶಿಸಿಹೋಗುತ್ತಿರುವ ವಿಶ್ವಕರ್ಮರ ಕುಲಕಸುಬುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿ, ಇಂದಿನ ವಿಜ್ಞಾನ ಯುಗದಲ್ಲಿ   ಆಧುನಿಕ ತಂತ್ರಜ್ಞಾನ ಮೈಗೂಡಿಸಿಕೊಂಡು ಮುಂದುವರಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದರು. 

ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ  ಬಿ ಎಸ್ ಸಾವಳಗಿ ಅವರು ಮಾತನಾಡಿ ಇಂದು ವಿಶ್ವವಿಖ್ಯಾತ ಶಿಲ್ಪಿಯ ಸಂಸ್ಮರಣೆ ಎಲ್ಲೆಡೆ ನಡೆಯುತ್ತಿದೆ. ವಿಶ್ವಕರ್ಮರನ್ನು ವಿಶ್ವರೂಪ, ದಕ್ಷಿಣಾಚಾರ್ಯ, ಜಕಣಾಚಾರ್ಯ, ಸ್ಥಪತಿ ಇನ್ನಿತರ ಹೆಸರುಗಳಿಂದ ಗುರುತಿಸಲಾಗುತ್ತಿದೆ. ಸ್ಥಪತಿ ಎಂದರೇ ಶಿಲ್ಪಿಗಳಲ್ಲಿ ಅಗ್ರಗಣ್ಯ ಎಂದರ್ಥ. ವಾಸ್ತುಪ್ರಕಾರ ಶಿಲ್ಪ ರಚಿಸುವವರನ್ನು ಸ್ಥಪತಿ ಎನ್ನಲಾಗುತ್ತದೆ. ಸ್ಥಪತಿಯಾದವನು ತನ್ನ ಹೆಸರನ್ನು ಎಲ್ಲೂ ಪ್ರಸ್ತುತಪಡಿಸುವುದಿಲ್ಲ ಎಂದರು. 

ಸೃಷ್ಟಿಯ ಮೂಲಕರ್ತೃವಾಗಿರುವ ಜಕಣಾಚಾರಿಯವರ ಶಿಲ್ಪಕಲಾ ಕುಶಲತೆ ಇಂದು ಜಗತ್ತಿನ ಎಲ್ಲೆಡೆ ಪಸರಿಸಿದೆ. ಪ್ರಪಂಚದ ಎಲ್ಲ ವಿದ್ಯೆಗಳ ಮೂಲವಾಗಿರುವ ಜಕಣಾಚಾರಿ ಅವರನ್ನು ಜಗತ್ತಿನ ಮೊದಲ ಮುಖ್ಯ ಎಂಜಿನಿಯರ್ ಎನ್ನಬಹುದು. ಜಕಣಾಚಾರಿಯವರು ಸಾಮಾನ್ಯ ಜನರಿಗೆ ದೇವರ ಪರಿಕಲ್ಪನೆ ನೀಡುವ ಮಧ್ಯಸ್ಥಿಕೆದಾರರಾಗಿದ್ದರು. ವಿಶ್ವಕರ್ಮರ ಶಿಲ್ಪಕಲೆ ಅಮರವಾಗಿದೆ. ಶಿಲ್ಪಕಲೆಯಲ್ಲಿ ಶ್ರೀಮಂತ ಪರಂಪರೆ ಹೊಂದಿರುವ ವಿಶ್ವಕರ್ಮ ಸಮುದಾಯ ತಮ್ಮ ಕುಲಕಸುಬುಗಳ ಜೊತೆಗೆ ಶಿಕ್ಷಣ ಪಡೆದು ಸಂಘಟಿತರಾಗಬೇಕು. ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಬೇಕು. ಸಮುದಾಯದ ಇತರರಲ್ಲೂ ಜಾಗೃತಿ ಮೂಡಿಸಬೇಕು. ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮುದಾಯ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.  

ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಪುರಸಭೆ ಸದಸ್ಯರಾದ ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಭಾರತಿ ಪಾಟೀಲ, ಪ್ರತಿಭಾ ಅಂಗಡಗೇರಿ, ವಿಶ್ವಕರ್ಮ ಸಮಾಜದ ತಾಲೂಕಾ ಅಧ್ಯಕ್ಷ ಮಲ್ಲಣ್ಣ ಪತ್ತಾರ(ತಾರನಾಳ) ದಲಿತ ಮುಖಂಡ ಹರೀಷ ನಾಟಿಕಾರ, ಪುರಸಭೆ ಆಶ್ರಯ ಕಮೀಟಿ ನಾಮನಿರ್ದೇಶಿತ ಸದಸ್ಯ ವೀರುಪಾಕ್ಷೀ ಪತ್ತಾರ(ಇಟಗಿ), ನಿವೃತ್ತ ಎಎಸ್‌ಐ ಕೆ. ಎಸ್‌. ಬಡಿಗೇರ,  ವಿಜಯಕುಮಾರ ಬಡಿಗೇರ, ಆನಂದ ಪತ್ತಾರ,ಸಂಗೀತ ಗವಾಯಿ ಚಂದ್ರಶೇಖರ ಪತ್ತಾರ, ಸುರೇಶ ಪತ್ತಾರ, ಗುಂಡು ಬಡಿಗೇರ, ಮೌನೇಶ ಹಡಲಗೇರಿ,ಶಿವು ನಂದರಗಿ, ದೇವೇಂದ್ರ ಪತ್ತಾರ( ಬಳಬಟ್ಟಿ)ಕಾಶಿನಾಥ ಬಡಿಗೇರ(ಹೋಕ್ರಾಣಿ)ನಾರಾಯಣ ತಾರಿವಾಳ,ಮೌನೇಶ ಇಟಗಿ, ಗುರುರಾಜ ಇಟಗಿ ಸೇರಿದಂತೆ ಹಲವರು ಇದ್ದರು.