ಬೆಂಗಳೂರು, ಡಿ.19 : ಅಂಗನವಾಡಿ, ವಿದ್ಯಾರ್ಥಿ ನಿಲಯ, ರುದ್ರಭೂಮಿ, ಘನತ್ಯಾಜ್ಯ ಸಂಸ್ಕರಣಾ ಘಟಕಗಳ ನಿರ್ಮಾಣ ಸೇರಿದಂತೆ ವಿವಿಧ ಇಲಾಖೆಗಳಿಗೆ ಅಗತ್ಯವಿರುವ ಭೂಮಿಗಾಗಿ ಈ ಕೂಡಲೇ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಂದು ನಗರದ ಜಲಮಂಡಳಿ ಕಚೇರಿಯಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿದ ಅವರು, ಬೆಂಗಳೂರು ನಗರ ಜಿಲ್ಲೆಯಲ್ಲಿ ಭೂಮಿಯ ಲಭ್ಯತೆ ಕಷ್ಟವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಇಲಾಖೆಗಳ ಕಾರ್ಯಕ್ರಮಗಳಿಗೆ ಅಗತ್ಯವಿರುವ ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.
ಈಗಾಗಲೇ, ಗುರುತಿಸಲಾಗಿರುವ ಲಭ್ಯವಿರುವ ಭೂಮಿಯನ್ನು ಕಂದಾಯ, ನಗರಸಭೆ, ಪಾಲಿಕೆ ಅಥವಾ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಹಸ್ತಾಂತರ ಮಾಡುವ ಪ್ರಕ್ರಿಯೆ ಕ್ಷಿಪ್ರಗತಿಯಲ್ಲಿ ನಡೆಯಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸ್ವಂತ ಕಟ್ಟಡವಿಲ್ಲದೇ ಸುಮಾರು 620 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಕೂಡಲೆ ಆನೇಕಲ್ ತಾಲ್ಲೂಕಿನಲ್ಲಿ 50 ನಿವೇಶನಗಳಿಗೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಇಲಾಖಾ ಉಪನಿರ್ದೇಶಕಿ ಡಾ. ಉಷಾ ಅವರಿಗೆ ಸೂಚಿಸಿದ ಕಾರ್ಯದರ್ಶಿಗಳು, ಹಂತ ಹಂತವಾಗಿ ಈ ಕೊರತೆಯನ್ನು ನೀಗಿಸುವತ್ತ ಕ್ರಮ ವಹಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ರುದ್ರಭೂಮಿಗಾಗಿ ಅಗತ್ಯವಿರುವ ನಿವೇಶನವನ್ನು ಪ್ರಥಮಾದ್ಯತೆ ಮೇರೆಗೆ ಮಂಜೂರು ಮಾಡುವುದರೊಂದಿಗೆ ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಕಂದಾಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಭೂ ಒಡೆತನ ಯೋಜನೆಯಡಿ ಸಾಧಿಸಿರುವ ಪ್ರಗತಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರಥಮಾದ್ಯತೆ ಮೇರೆಗೆ ನೀಡುವಂತೆ ಅಪರ ಜಿಲ್ಲಾಧಿಕಾರಿ ರೂಪ ಅವರಿಗೆ ಸೂಚಿಸಿದರು.
ಭೂಮಾಪನಾ ಹಾಗೂ ಭೂದಾಖಲೆ ಇಲಾಖೆಯಲ್ಲಿ ಇರುವ 43 ಸರ್ವೆ ಅಧಿಕಾರಿಗಳು ಕೈಗೊಂಡಿರುವ ಕಾರ್ಯದ ಅಂಕಿ ಅಂಶವು ನಿಗದಿತ ಗುರಿಯನ್ನು ತಲುಪಿರದ ಬಗ್ಗೆ ಕಾರ್ಯದರ್ಶಿಗಳು ಅಸಮಾಧಾನ ವ್ಯಕ್ತ ಪಡಿಸಿದರು.
ಇಲಾಖಾ ಉಪನಿರ್ದೇಶಕರು ಇದಕ್ಕೆ ಉತ್ತರಿಸಿ ಕಂದಾಯ ಇಲಾಖೆಯ ಭೂಮಿಯು ಸೇರಿದಂತೆ ಪಾಲಿಕೆ, ಬಿಡಿಎ, ಅರಣ್ಯ, ಕೆರೆಗಳು ಹಾಗೂ ರಾಜಕಾಲುವೆಗಳ ಸರ್ವೆ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಇಲಾಖೆ ಹೊರತುಪಡಿಸಿ ಹೆಚ್ಚುವರಿಯಾಗಿ ಇತರೆ ಇಲಾಖೆಗಳ ಕಾರ್ಯವನ್ನು ತಮ್ಮ ಪ್ರಗತಿ ಸಾಧನೆಗೆ ಸೇರಿಸಿಕೊಳ್ಳುವಂತೆ ಕಾರ್ಯದರ್ಶಿಗಳು ಸೂಚಿಸಿದರು.
ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಶಿವಮೂರ್ತಿ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಶಿವರಾಮೇ ಗೌಡ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.