ಎದೆಯ ಜೋಳಿಗೆಯಿಂದ ಪ್ರೀತಿ ಅಮೃತ ಹಂಚುವ ಇಮಾಮ್ ಹಡಗಲಿ ಗಜಲ್

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರಾದ ಇಮಾಮ್ ಸಾಹೇಬ್ ಹಡಗಲಿ ಕನಕಗಿರಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಂಪಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಸ. ಚಿ. ರಮೇಶ್ ಇವರ ಮಾರ್ಗದರ್ಶನದಲ್ಲಿ ‘ಕನಕಗಿರಿ ಬಯಲಾಟ ಪರಂಪರೆ’ ಎಂಬ ವಿಷಯದ ಮೇಲೆ ಬಾಹ್ಯವಾಗಿ ಪಿ. ಎಚ್‌. ಡಿ. ಅಧ್ಯಯನವನ್ನು ಮಾಡುತ್ತಿದ್ದಾರೆ. ಕವಿತೆ, ಗಜಲ್, ಲಲಿತ ಪ್ರಬಂಧ, ನಾಟಕ, ಅನುವಾದ ಮುಂತಾದ ಸಾಹಿತ್ಯದ ಪ್ರಕಾರಗಳಲ್ಲಿ ಬರವಣಿಗೆ ಮಾಡುತ್ತಿರುವ ಇಮಾಮ್, ಬಯಲಾಟದ ಹಸ್ತಪ್ರತಿ ಸಂಗ್ರಹ, ಸಂಶೋಧನಾ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದುವರೆಗೆ 13 ಕೃತಿಗಳನ್ನು ರಚಿಸಿರುವ ಇವರು ‘ಗಂಗಾಪುತ್ರ ಅಂಬಿಗರ ಚೌಡಯ್ಯ’ ಎಂಬ ಕೃತಿಗೆ 2016 ರ ಬೇಂದ್ರೆ ಗ್ರಂಥ ಬಹುಮಾನ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ವಿವಿಧ ವಿಷಯಗಳ ಕುರಿತು ಪ್ರಬಂಧಗಳನ್ನು ಮಂಡಿಸಿದ್ದಾರೆ. ಹಿಂದಿಯಿಂದ ಕನ್ನಡಕ್ಕೆ ‘ಮಿರ್ಜಾ ಗಾಲಿಬ್‌’ ಎಂಬ ಮೊಟ್ಟ ಮೊದಲ ಅನುವಾದಿತ ಕೃತಿ ಪ್ರಕಟಿಸಿದ್ದಾರೆ. ಅವರು ಬರೆದ ಮನ ಕಲಕುವ ಒಂದು ಗಜಲ್‌ನ ಓದು ಮತ್ತು ಒಳನೋಟ ನಿಮಗಾಗಿ. 

ಗಜಲ್ 


ಬೆಂಕಿ ಹಚ್ಚುವವರ ನಡುವೆ ಇಲ್ಲೊಬ್ಬ ದೀಪ ಹಚ್ಚುತ್ತಿದ್ದಾನೆ 

ದ್ವೇಷ ಬಿತ್ತುವವರ ನಡುವೆ ಇಲ್ಲೊಬ್ಬ ಪ್ರೀತಿ ಹಂಚುತ್ತಿದ್ದಾನೆ 

ಜಾತಿ ದೀಪಗಳ ನಡುವೆ ಅವರು ಗೋಡೆಗಳನ್ನು ಕಟ್ಟಿಕೊಂಡಿದ್ದಾರೆ 

ಗೋಡೆ ಕೆಡವದೆ ಅವರ ಮನೆಯ ದೀಪಗಳಿಗೆ ಇಲ್ಲೊಬ್ಬ ಬತ್ತಿ ಹೊಸೆಯುತ್ತಿದ್ದಾನೆ 

ದೀಪಗಳಿಗೂ ಧರ್ಮದ ಕಮಟು ಹತ್ತಿಸಿ ಬೆಳಕ ಬಚ್ಚಿಟ್ಟುಕೊಂಡಿದ್ದಾರೆ 

ಧರ್ಮ ದೇವರುಗಳ ಧಿಕ್ಕರಿಸಿ ಇಲ್ಲೊಬ್ಬ ಅವಕ್ಕೆ ಎಣ್ಣೆ ಸುರಿಯುತ್ತಿದ್ದಾನೆ 

ಅಜ್ಞಾನ ತುಂಬಿದ ಮನಗಳು ತಮ್ಮ ದೀಪಗಳ ಬೆಳಕ ಹೊಸಿಲು ದಾಟಿಸುತ್ತಿಲ್ಲ 

ಮಣ್ಣು ಹದವಾಗಿಸಿ ಪಣತಿ ಮಾಡಿ ಜಾತಿ ಮರೆತು ಇಲ್ಲೊಬ್ಬ ಮನೆಗಳಿಗೆ ತಲುಪಿಸುತ್ತಿದ್ದಾನೆ 

ಬೆಳಕ ಹಬ್ಬ ತಮ್ಮ ಮನೆಗಳಿಗೆ ಮಾತ್ರ, ಪಕ್ಕದವರು ಇನ್ನೂ ಕತ್ತಲಲ್ಲಿ 

ತನ್ನ ಕತ್ತಲು ಮರೆತು ಇಮಾಮ ಜಗದ ಜನರಿಗೆ ಬೆಳಕಾಗಿದ್ದಾನೆ 

                                                                                                         - ಇಮಾಮ ಸಾಹೇಬ್ ಹಡಗಲಿ 



‘ಹಚ್ಚೂದ ಆದ್ರ ದೀಪ ಹಚ್ಚು ಬೆಂಕಿ ಹಚ್ಚಬ್ಯಾಡ’ ಎಂದು ಹಿರಿಯ ಕವಿ ಜಿನದತ್ತ ದೇಸಾಯಿ ಹೇಳುತ್ತಾರೆ. ಅದೇ ರೀತಿ ಚಂಪಾ ‘ಪ್ರೀತಿಯಿಲ್ಲದೆ ನಾನು ಏನನ್ನೂ ಮಾಡಲಾರೆ, ದ್ವೇಷವನ್ನೂ ಕೂಡ’ ಎನ್ನುತ್ತಾರೆ. ಜಾತಿ, ಧರ್ಮ, ದೇವರ ಹೆಸರಿನಲ್ಲಿ ಇಂದು ಮನ-ಮನಗಳ ನಡುವೆ ಬೆಂಕಿ ಹಚ್ಚುವ ಕೆಲಸ ಅವ್ಯಾಹತವಾಗಿ ನಡೆದಿದೆ. ಇತರರನ್ನು ನೋಯಿಸಿ ನಗುವದರಲ್ಲಿ ಅದೆಂಥಹ ವಿಕೃತ ಖುಷಿ ಸಿಗುತ್ತದೋ? ಗೊತ್ತಿಲ್ಲ. ಆದರೆ ಒಂದಷ್ಟು ಜನರಿಗಂತೂ ಶಾಂತಿ-ಸಹನೆಯಿಂದ ಲೋಕ ತನ್ನ ಪಾಡಿಗೆ ತಾನಿದ್ದರೆ ಸಹಿಸಿಕೊಳ್ಳಲಾಗುವುದಿಲ್ಲ. ಅದೆಷ್ಟು ದಿನ ಬದುಕುತ್ತೇವೆ ಹೇಳಿ, ಈ ಭೂಮಿಯ ಮೇಲೆ? ಇರುವಷ್ಟು ದಿನ ಹೊಂದಾಣಿಕೆ, ಸೌಹಾರ್ದತೆಯ ಬಾಳುವೆ ಮಾಡಲಾಗುವುದಿಲ್ಲವೆ? ಚಿಕ್ಕಂದಿನಿಂದಲೂ ಶಾಲೆಯಲ್ಲಿ ಮೇಷ್ಟ್ರು ‘ಕೂಡಿ ಬಾಳಿದರೆ ಸ್ವರ್ಗ ಸುಖ’, ‘ಹಂಚಿ ಉಂಡರೆ ಊಟದ ರುಚಿ ಹೆಚ್ಚು’ ಎಂದು ಹೇಳಿಕೊಟ್ಟಿದ್ದರೂ ದೊಡ್ಡವರಾದ ಮೇಲೂ ಹಗೆತನದ ಬದುಕನ್ನು ಆಯ್ದುಕೊಳ್ಳುತ್ತಿದ್ದೇವಲ್ಲ? ಅದಕ್ಕೆಂದೇ ಕವಿ ಇಮಾಮ್ ಹಡಗಲಿ ‘ದೀಪ’ವನ್ನೇ ಉದಾಹರಣೆಯಾಗಿಟ್ಟುಕೊಂಡು ಹೇಳಬೇಕಾದ ಏನೆಲ್ಲಾ ವಿಷಯಗಳನ್ನು ದಾಟಿಸಿಬಿಡುತ್ತಾರೆ; ಹಾಗಾಗಿಯೇ ಓದುಗರಿಗೆ ಈ ಗಜಲ್ ಮೂಲಕ ಇಷ್ಟವಾಗಿಬಿಡುತ್ತಾರೆ. 

‘ಕೊಲ್ಲುವವರು ನೂರು ಜನ ಇದ್ದರೂ ಕಾಯುವವ ಒಬ್ಬ ಇದ್ದೇ ಇರುತ್ತಾನೆ’ ಅನ್ನುತ್ತಾರಲ್ಲ ಹಾಗೆ ಬೆಂಕಿ ಹಚ್ಚುವವರ ನಡುವೆ ಒಬ್ಬ ದೀಪ ಬೆಳಗಿಸುವವನು ಜೊತೆ ಇರುತ್ತಾನೆ. ದ್ವೇಷವನ್ನೇ ಬಿತ್ತಿ ಮೋಜು ನೋಡುವವರ ನಡುವೆ ಒಬ್ಬ ಎದೆಯ ಜೋಳಿಗೆಯಿಂದ ಪ್ರೀತಿ ಅಮೃತ ಹಂಚುವ ಕಾಯಕ ಮಾಡುತ್ತಲಿರುತ್ತಾನೆ. ಆದರೆ ಬೆಂಕಿ ಹಚ್ಚುವವರಿಗಿಂತ ದೀಪ ಬೆಳಗಿಸುವವರ ಸಂಖ್ಯೆ, ದ್ವೇಷವನ್ನೇ ಕಕ್ಕುವವರಿಗಿಂತ ಪ್ರೀತಿ ಉಣಿಸುವವರ ಸಂಖ್ಯೆ ಹೆಚ್ಚಾಗಬೇಕಾದುದು ಇಂದಿನ ಅತಿ ತುರ್ತು. ಆ ಕೆಲಸ ಆಗಬೇಕಿದೆ ಅನ್ನುತ್ತದೆ ಗಜಲ್‌. ಹಚ್ಚಿಟ್ಟ ದೀಪಗಳ ಬೆಳಕಿನಲ್ಲೂ ಜಾತಿ ಹುಡುಕುವ ವಿಕ್ಷಿಪ್ತ ಮನಸುಗಳ ಕುರಿತು ಮಾತಾಡುತ್ತಲೇ ಯಾವುದೇ ಬಿಗ್ಗಬಿಗಿ ಬೇಲಿ ಇಲ್ಲದೆ ಅಂತಹವರ ಮನೆಯ ಹಣತೆಗೆ ಬತ್ತಿ ಹೊಸೆಯುವ ಪರಿಶುದ್ಧ ಮನಸ್ಸಿನ ಕುರಿತಾಗಿಯೂ ಕವಿ ಹೇಳುತ್ತಾನೆ. ದೀಪಗಳಿಗೆ ಧರ್ಮದ ಹಣೆಪಟ್ಟಿ ಅಂಟಿಸಿ ಅದರ ಬೆಳಕನ್ನು ಬಚ್ಚಿಟ್ಟುಕೊಂಡವರ ಮನೆಯ ದೀಪಗಳಿಗೂ ಎಣ್ಣೆ ಸುರಿಯುವ ಕರ್ತವ್ಯವನ್ನು ಒಬ್ಬ ನಿಷ್ಕಲ್ಮಶವಾಗಿ ಮಾಡುತ್ತಿದ್ದಾನೆ. ದೀಪಗಳ ಬೆಳಕನ್ನೂ ಹೊಸ್ತಿಲಾಚೆ ಬಿಡದ ಸಂಕುಚಿತ ಮನಸ್ಥಿತಿಗಳ ಮಧ್ಯೆ ಒಬ್ಬ ಮಾತ್ರ ಮಣ್ಣು ಹದಗೊಳಿಸಿ ಪಣತಿಗಳನ್ನು ತಯಾರಿಸಿ ಅವರ ಮನೆಗಳಿಗೆ ತಲುಪಿಸುತ್ತಿದ್ದಾನೆ. ಬಹುಶಃ ಅವನಿಗೆ ನಂಬಿಕೆಯಿರಬೇಕು, ಒಂದಲ್ಲ ಒಂದು ದಿನ ಆ ಮನಸುಗಳಲ್ಲಿಯೂ ಅರಿವೆಂಬ ಬೆಳಕಿನ ಜ್ಯೋತಿ ಅರಳಬಹುದೆಂದು. ತನ್ನ ಮನೆಯ ಕತ್ತಲನ್ನೂ ಮರೆತು ಜಗದ ಜನರಿಗೆ ಬೆಳಕ ಹಂಚುತ್ತಿರುವವ ಮಾತ್ರ ಚಿರಸ್ಥಾಯಿ ಆಗಬಲ್ಲ ಎಂಬ ಸತ್ಯ ಸ್ಪಷ್ಟಪಡಿಸುವ ಇಮಾಮ್ ಅವರ ಗಜಲ್ ಒಳಿತಿನ ಪ್ರತಿನಿಧಿಯಾಗಿ ಕೆಡುಕನ್ನು ಬದಲಾಯಿಸುವ ಪಣ ತೊಡುತ್ತದೆ. 

‘ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ’ ಎಂಬ ಮನುಷ್ಯಪ್ರೀತಿಯ ಅಂತಃಕರಣವನ್ನು ಸಾಬೀತುಪಡಿಸುವ ಈ ಗಜಲ್ ಓದುಗನ ಎದೆಗೆ ನಾಟುತ್ತದೆ. ಸದಾಕಾಲ ಕಾಡುತ್ತದೆ. ಇಂತಹ ಗಜಲ್ ಕೊಟ್ಟ ಇಮಾಮ್ ಸಾಹೇಬರಿಗೆ ಸಲಾಮ್ ಹೇಳಲೇಬೇಕು. 

- * * * -