ಪೆಗ್ ಬಾರ್‌ಗಳಾದ ಚಹಾ, ಬೀಡಾ ಅಂಗಡಿಗಳು ಪೊಲೀಸ್, ಅಬಕಾರಿ ಇಲಾಖೆಗೆ ಗೊತ್ತಿದ್ದರೂ ಎಗ್ಗಿಲ್ಲದೇ ನಡೆಯುತ್ತಿದೆ ದಂಧೆ
ಯರಗಟ್ಟಿ 28: ತಾಲೂಕಿನ ಬಹುತೇಕ ಗ್ರಾಮಗಳ ಆಯ್ದ ಕಿರಾಣಿ ಅಂಗಡಿ, ಚಹಾ ಹಾಗೂ ಬೀಡಾ ಜ ಅಂಗಡಿಗಳು ಇದೀಗ ಪೆಗ್ ಬಾರ್‌ಗಳಾಗಿ ಪರಿವರ್ತನೆ ಆಗುತ್ತಿವೆ!
ಆಶ್ಚರ್ಯ ಪಡಬೇಕಿಲ್ಲ. ಸಾರಾಯಿ ಕರಿ ಪ್ಯಾಕೆಟ್‌ಗಳ ಕಾಲ ಮುಗಿದಾಗಿನಿಂದ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗಿದೆ ಅಬಕಾರಿ ಹಾಗೂ ಪೊಲೀಸ್ ಇಲಾಖೆಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೂ ಏನೂ ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ ಎಂಬುದು. ಹಲವರ ಆರೋಪ.
ನಗರಗಳಿಂದ ಎಂಎಸ್‌ಐಎಲ್ ಹಾಗೂ ಪರಿಚಯಸ್ಥ ಬಾರ್‌ಗಳಿಂದ ಗ್ರಾಮೀಣ ಪ್ರದೇಶಕ್ಕೆ ಬೈಕ್, ಕಾರು ಹಾಗೂ ಸರ್ಕಾರಿ ಬಸ್‌ಗಳ ಮೂಲಕವೇ ಮದ್ಯ ಸಾಗಾಟವಾಗುತ್ತಿದೆ. ಅಕ್ರಮ ಮದ್ಯಕ್ಕೆ ಕಡಿವಾಣ ಇಲ್ಲದಂತಾಗಿ ಗ್ರಾಮಗಳ ಅಂಗಡಿಗಳಲ್ಲದೇ ಇತ್ತೀಚೆಗೆ ಮನೆ ಮನೆಗಳಲ್ಲಿ ಮದ್ಯ ಮಾರಾಟ ನಡೆಯುತ್ತದೆ.
ಎಕೆ ನಿಲ್ಲುತ್ತಿಲ್ಲ:
ಯಾವ ಗ್ರಾಮದಲ್ಲಿ ಯಾವ ಅಂಗಡಿ ಮತ್ತು ಮನೆಗಳಲ್ಲಿ ಯಾರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಅಬಕಾರಿ ಹಾಗೂ ಪೊಲೀಸರಿಗೆ ಮಾಹಿತಿ ಇದೆ. ಆದರೆ, ಪ್ರತಿ ತಿಂಗಳು ನೀಡುವ ಮಾಮುಲಿಯ ಕಾರಣದಿಂದಾಗಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಲಾಗಿಲ್ಲ. ಅದನ್ನು ನಿಲ್ಲಿಸುವುದೂ ಇಲ್ಲ.
ಆಗೊಮ್ಮೆ ಈಗೊಮ್ಮೆ ಅಕ್ರಮ ಮದ್ಯ ಮಾರಾಟ ಮಾಡುವವರನ್ನು ಹಿಡಿದು ಮದ್ಯ ಹಾಗೂ ವಾಹನಗಳನ್ನು ಜಪ್ತಿ ಮಾಡುತ್ತಾರೆ. ಒಂದು ತಿಂಗಳಲ್ಲಿ ಮತ್ತೆ ಅದೇ ವ್ಯಕ್ತಿ ತನ್ನ ದಂಧೆ ಆರಂಭಿಸುತ್ತಾನೆ ಎಂದು ಇತ್ತೀಚೆಗೆ ಅಕ್ರಮ ಮದ್ಯ ಮಾರಾಟ ನಿಲ್ಲಿಸಬೇಕುಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಗಳ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಇಷ್ಟಾದರೂ ಅಕ್ರಮ ಮದ್ಯ ಮಾರಾಟ ಜೋರು ಪಡೆದುಕೊಂಡಿದೆಯೇ ಹೊರತು ಪೊಲೀಸರ ಭಯ ಮದ್ಯ ಮಾರಾಟಗಾರ-ರಿಗೆ ಇಲ್ಲವೇ ಇಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗುತ್ತದೆ.
ಅಲ್ಲದೇ ಕುಡಿದ ಮತ್ತಿನಲ್ಲಿ ಇರುವ ಕೆಲವರು ಕಳ್ಳತನ, ಮಹಿಳೆಯರ ಮೇಲೆ ದೌರ್ಜನ್ಯ, ಆಕ್ರಮಣ ಸಹ ಮಾಡುತ್ತಿದ್ದಾರೆ ಎಂಬ ದೂರುಗಳಿವೆ. ಇದಕ್ಕಿಂತ ಹೆಚ್ಚಾಗಿ ಗ್ರಾಮಸ್ಥರೊಂದಿಗೆ ಸುಖಾಸುಮ್ಮನೆ ಜಗಳವಾಗುತ್ತಿದ್ದು ಗ್ರಾಮೀಣ ಪ್ರದೇಶದ ಸಂಭಾವಿತ ಜನರಿಗೆ ನೆಮ್ಮದಿ ಇಲ್ಲದಂತಾಗಿದೆ.
ಸಾರಾಯಿ ಮಾರಾಟ ಮಾಡಬೇಡಿ ಎಂದು ತಿಳಿ ಹೇಳಲು ಹೋದರೆ, ಪೊಲೀಸರೇ ನಮ್ಮನ್ನು ಕೇಳೋದಿಲ್ಲ ನೀವ್ಯಾರು? ಎಂದು ಪ್ರಶ್ನಿಸುತ್ತಾರೆ ಎಂದು ಬುದ್ದಿ ಹೇಳಲು ಹೋದ ಕೆಲವರು, ಕುಡುಕುರ ಗೋಳು ಹೇಳಿಕೊಂಡರು.
ಯರಗಟ್ಟಿ ತಾಲೂಕಿನ ಹಳ್ಳಿಗಳ ಪಾನ್ ಬೀಡಾ, ಚಹಾ ಹಾಗೂ ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ದಾಳಿ ನಡೆಸಲಾಗುವುದು. ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
ಆಯ್ ಎಂ ಮಠಪತಿ,
ಸಿಪಿಐ ಮುರಗೋಡ
ನೆಮ್ಮದಿಗೆ ಭಂಗ ಪ್ರಸಕ್ತ ವರ್ಷ ಬರಗಾಲದ ಛಾಯೆ ಆವರಿಸಿದ್ದು ಕೂಲಿ ಕಾರ್ಮಿಕ-ರಿಗೆ ಕೈ ತುಂಬ ಕೆಲಸವಿಲ್ಲ. ಹೀಗಾಗಿ ಹೆಚ್ಚಿನವರು ಸಾಲ ಮಾಡಿಯಾದರೂ ಹಗಲು-ರಾತ್ರಿ ಮದ್ಯಾರಾಧನೆಯಲ್ಲಿಯೇ ಇದ್ದಾರೆ. ಮಾರುಕಟ್ಟೆ ದರಕ್ಕಿಂತ ಶೇ.40 ರಷ್ಟು ಹೆಚ್ಚಿನ ಬೆಲೆಗೆ ಗ್ರಾಮಗಳಲ್ಲಿ ಕಳಪೆ ಗುಣಮಟ್ಟದ ಮದ್ಯ ಮಾರಾಟವಾಗುತ್ತಿದೆ. ಇದ-ರಿಂದ ಆರೋಗ್ಯವೂ ಹಾಳು, ಹಣವೂ ಹಾಳು ಜತೆಗೆ ಸಂಸಾರದಲ್ಲಿ ಒಡಕುಗಳು ಉಂಟಾಗುತ್ತಿವೆ ಇದರ ವಿರುದ್ದ ಕ್ರಮಕೈಗೊಳದಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು.
ಸಕ್ಕುಬಾಯಿ ಕುಂಬಾರ,
ಮಹಿಳಾ ಸಂಘದ ಮುಖಂಡರು, ಯರಗಟ್ಟಿ