ಬಳ್ಳಾರಿ, ಅ 24: ಜಿಲ್ಲೆಯ ಸೋಮಸಮುದ್ರ ಗ್ರಾಮದ ಬಳಿ ಎರಡು ಹೊಲಗಳಲ್ಲಿ ಭತ್ತದ ಪೈರಿನ ನಡುವೆ ಬೆಳೆಯಲಾಗಿದ್ದ ಗಾಂಜಾ ಗಿಡಗಳನ್ನು ಪೊಲೀಸರು ನಾಶ ಪಡಿಸಿದ್ದು, 41 ಕಿಲೋ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಕುರುಗೋಡು ತಾಲೂಕು ವ್ಯಾಪ್ತಿಯ ಒಂದೇ ಗ್ರಾಮದ ಇಬ್ಬರು ರೈತರ ಹೊಲಗಳಲ್ಲಿ ಅಕ್ರಮವಾಗಿ ಬೆಳೆಯಲಾದ ಗಾಂಜಾ ಗಿಡಗಳನ್ನು ನಾಶಪಡಿಸಿದ ಪೊಲೀಸರು 41 ಕೆ.ಜಿ.ಯಷ್ಟು ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ಕಾಶಿ ನಗರ ನಿವಾಸಿಗಳಾದ ಹರಿಜನ ಯಲ್ಲಪ್ಪ (45) ಮತ್ತು ತಳವಾರ ಕೊಮಾರಿ (36) ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.
ಕುರುಗೋಡು ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ, ಪಿಎಸ್ಐ ಎಂ.ಕೃಷ್ಣಮೂರ್ತಿ, ತಹಶೀಲ್ದಾರ್ ಪದ್ಮಾ ಕುಮಾರಿ ನೇತೃತ್ವದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೋಮಸಮುದ್ರ ಗ್ರಾಮ ಹೊರವಲಯದ ಮಧುರೈ, ಯರಂಗಳಿಗಿ ಗ್ರಾಮ ಮಾರ್ಗದ ರಸ್ತೆಯ ಪಕ್ಕದಲ್ಲಿರುವ ಹೊಲಗಳಲ್ಲಿನ ಭತ್ತದ ಪೈರಿನ ಮಧ್ಯೆ ಹಾಗೂ ಹತ್ತಿ ಮತ್ತು ಮೆಣಸಿನಕಾಯಿ ಗಿಡಗಳ ನಡುವೆಯೇ ಅಂದಾಜು 128 ಗಾಂಜಾ ಗಿಡಗಳನ್ನು ಈ ರೈತರು ಬೆಳೆದಿದ್ದರು ಎಂದು ತಿಳಿಸಿದ್ದಾರೆ.
ಗಾಂಜಾ ಗಿಡಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದ್ದು, ಅಂದಾಜು 41 ಕೆ.ಜಿ.ಯಷ್ಟು ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.