ಲೋಕದರ್ಶನ ವರದಿ
ವಿಜಯಪುರ 19: ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದಲ್ಲಿ ಬರುವ ಡಾ. ಬಿ.ಆರ್. ಅಂಬೇಡ್ಕರ್ ಯೋಜನೆಯಡಿ ಅನರ್ಹರನ್ನು ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಖಂಡಿಸಿ ಕನ್ನಡ ಸೇನೆ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ದೇವೇಂದ್ರ ಮೀರೆಕರ ಮಾತನಾಡಿ, ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದಲ್ಲಿ ಬರುವ ಡಾ. ಬಿ.ಆರ್. ಅಂಬೇಡ್ಕರ್ ಯೋಜನೆಯಡಿಯಲ್ಲಿ ಮನೆ ಕಟ್ಟಡ ಕಾಮಗಾರಿಗೆ ಹಣ ಮಂಜೂರು ಮಾಡಿದ್ದು, ಎಸ್.ಸಿ. (ಪರಿಶಿಷ್ಟ ಜಾತಿ)ಯಲ್ಲಿ ಖೊಟ್ಟಿ ಫಲಾನುಭವಗಳ ಕಾಗದ ಪತ್ರಗಳನ್ನು ತಯಾರಿಸಿ ಹಾಗೂ ಜಾಗವು ಅವರ ಸ್ವಂತ ಜಾಗವಿಲ್ಲದಿದ್ದರೂ ಕೂಡಾ ಅವರನ್ನು ಫಲಾನುಭವಿಗಳು ಎಂದು ಘೋಷಣೆ ಮಾಡಿ ಅವರಿಗೆ ಹಣ ಮಂಜೂರು ಮಾಡಿ ಮನೆಗಳನ್ನು ಕಟ್ಟಿಕೊಟ್ಟಿರುತ್ತಾರೆ. ಅರ್ಹ ಫಲಾನುಭವಿಗಳು ಸ್ವಂತ ಜಾಗ ಹೊಂದಿ ಸುಮಾರು 4 ರಿಂದ 5 ವರ್ಷಗಳಿಂದ ಅಜರ್ಿ ಸಲ್ಲಿಸಿದರೂ ಕೂಡ ಅವರಿಗೆ ಮನೆ ಮಂಜೂರು ಮಾಡಿರುವುದಿಲ್ಲ. ನ್ಯಾಯ ಕೇಳಿದರೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಹೆಸರು ಹೇಳುತ್ತಾ ಉಡಾಪೆ ಉತ್ತರ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಫಲಾನುಭಾವಿಗಳ ಆಯ್ಕೆಯಲ್ಲಿ ಆಗಿರುವ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ, ಖೊಟ್ಟಿ ಫಲಾನುಭವಿಗಳಿಗೆ ನೀಡಿದ ಮನೆಗಳನ್ನು ಮರಳಿ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಸಂಘಟನೆಯ ಕಾರ್ಯಕರ್ತರಾದ ಸಾತನಗೌಡ ಪಾಟೀಲ, ಯಶವಂತ ಎಸ್.ದೊಡ್ಡಮನಿ, ರವಿ ಪೂಜಾರಿ, ಶೈಲೇಶ್ ಮಧಭಾವಿ, ಪ್ರಭು ಎಸ್.ಧನ್ಯಾಳ, ಮಹೇಶ ಯಾದವಾಡ, ಮಹಾಂತೇಶ ಎಸ್. ತಳವಾರ, ಶರಣು ದ್ಯಾಬೇರಿ, ಎಂ.ಡಿ. ಬಾಗವಾನ ಹಾಗೂ ಇನ್ನಿತರರು ಉಪಸ್ಥಿತರಿದ್ದರು