ಕೊಲ್ಕತ್ತಾ, ಏ ೪, ಪ್ರಧಾನಿ ನರೇಂದ್ರ ಮೋದಿ ಅವರ “ದೀಪ ಬೆಳಗಿಸಿ” ಕರೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಂಗ್ಯವಾಗಿ ಸ್ಪಂದಿಸಿದ್ದಾರೆ. ಭಾನುವಾರ ರಾತ್ರಿ ೯ ಗಂಟೆಗೆ ದೀಪ ಬೆಳಗಿಸಬೇಕು ಎಂದು ಪ್ರಧಾನಿ ಮೋದಿ ಅವರು ದೇಶದ ಜನತೆಗೆ ನೀಡಿರುವ ಕರೆ ವ್ಯಕ್ತಿಗತ ವಿಷಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಭಾನುವಾರ ರಾತ್ರಿ ಒಂಬತ್ತು ಗಂಟೆಗೆ ತಮಗೆ ನಿದ್ರೆ ಬಂದರೆ ಮಲಗುವುದಾಗಿ ಹೇಳಿದ್ದಾರೆ. ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಮಮತಾ ಬ್ಯಾನರ್ಜಿ, ಅವರು(ಮೋದಿ), ನಿಮಗೆ(ಜನರಿಗೆ) ಕರೆ ನೀಡಿದ್ದಾರೆ .. ನೀವು ಮಾಡಿ. ಅದರ ಬಗ್ಗೆ ನನ್ನೇಕೆ ? ಕೇಳುತ್ತೀರಿ. ನಾನು ಏನು ಮಾಡಲಿದ್ದೇನೋ ಅದನ್ನು ನಾನು ಹೇಳುತ್ತೇನೆ. ಮೋದಿ ಏನು ಮಾಡುತ್ತಾರೋ ಅದನ್ನು ಅವರು ಹೇಳುತ್ತಾರೆ. ನಾನೇಕೆ ಇತರರ ವಿಷಯಗಳಿಗೆ ಮೂಗು ತೂರಿಸಬೇಕು. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಬೇಕೋ ಅಥವಾ ರಾಜಕೀಯ ಮಾಡಬೇಕೋ ? ದಯಮಾಡಿ ರಾಜಕೀಯ ಜ್ವಾಲೆಗೆ ತುಪ್ಪ ಸುರಿಯಲು ಹೋಗಬೇಡಿ. ನರೇಂದ್ರ ಮೋದಿ ಹೇಳಿರುವುದು ಸರಿಯಿದ್ದರೆ ನೀವು ಮಾಡಿ. ಆ ಸಮಯದಲ್ಲಿ ನನಗೆ ನಿದ್ರೆ ಬಂದರೆ ನಾನು ನಿದ್ರಿಸುತ್ತೇನೆ .. ಅದು ನನ್ನ ವೈಯಕ್ತಿಕ ವಿಷಯ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕೊರೊನಾ ವೈರಾಣು ಹರಡುವುದನ್ನು ತಡೆಯುವ ಉದ್ದೇಶದಿಂದ ಹೇರಲಾದ ಲಾಕ್ ಡೌನ್ ಹಿನ್ನಲೆಯಲ್ಲಿ ಏಪ್ರಿಲ್ ೫ ರ ಭಾನುವಾರ ರಾತ್ರಿ ೯ ಗಂಟೆಗೆ ಜನರು ದೀಪ ಮೊಂಬತ್ತಿ, ಟಾರ್ಚ್ ಅಥವಾ ಮೊಬೈಲ್ ಫೋನ್ ನ ಫ್ಲಾಷ್ ಲೈಟ್ ಗಳನ್ನು ಒಂಬತ್ತು ನಿಮಿಷ ಬೆಳಗಿಸಬೇಕು ಎಂದು ಪ್ರಧಾನಿ ಮೋದಿ ನಿನ್ನೆ ಜನರಿಗೆ ಕರೆ ನೀಡಿದ್ದರು