ವಾಷಿಂಗ್ಟನ್, ಜೂನ್ 13: ಭಾರತಕ್ಕೆ ಭೇಟಿ ನೀಡಿದ ಕೆಲವು ದಿನಗಳ ನಂತರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಬಿಜೆಪಿಯ ಚುನಾವಣಾ ಘೋಷಣೆ 'ಮೋದಿ ಇದ್ದಲ್ಲಿ ಸಾಧ್ಯ' ಉಲ್ಲೇಖಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ಆ ಸಾಮಥ್ರ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಹೊಸ ಸರ್ಕಾರ ಜನರಿಗೆ ಭರವಸೆ ನೀಡಿದ್ದು ವಿಶ್ವದೊಂದಿಗೆ ಉತ್ತಮ ಬಾಂಧವ್ಯ ಮುಂದುವರಿಯಲಿದೆ. ಮೋದಿ ಅವರು ಚುನಾವಣಾ ಸಂದರ್ಭದಲ್ಲಿ ಹೇಳಿದಂತೆ, 'ಮೋದಿ ಇದ್ದಲ್ಲಿ ಸಾಧ್ಯ' ಎಂಬುದನ್ನು ಉಲ್ಲೇಖಿಸಿರುವ ಪಾಂಪಿಯೋ ಅವರು ಹೇಳಿರುವಂತೆ ಉಭಯ ದೇಶಗಳ ನಡುವೆ ಹೊಸ ಸಾಧ್ಯತೆಗಳನ್ನು ಹುಡುಕಲು ಉತ್ಸುಕರಾಗಿರುವುದಾಗಿ ಪಾಂಪಿಯೋ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಮಾಸಾಂತ್ಯದ ವೇಳೆಗೆ ಪ್ರಧಾನಿ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿ ಮಾಡಲು ಎದುರು ನೋಡುತ್ತಿರುವುದಾಗಿಯೋ ಪಾಂಪಿಯೋ ಹೇಳಿದ್ದಾರೆ. ಅನೇಕ ರಾಜಕೀಯ ವೀಕ್ಷಕರಿಗೆ ಭಾರತದ ಲೋಕಸಭಾ ಚುನಾವಣಾ ಫಲಿತಾಂಶ ಅಚ್ಚರಿ ತಂದಿತ್ತು. ಆದರೆ ಪ್ರಧಾನಮಂತ್ರಿ ಅವರ ನಾಯಕತ್ವಕ್ಕೆ ಗೆಲುವು ಸಿಗಲಿದೆ ಎಂಬ ನಂಬಿಕೆ ಅವರಿಗಿತ್ತು ಎಂದು ಪಾಂಪಿಯೋ ಹೇಳಿದ್ದಾರೆ. ಭಾರತ -ಪೆಸಿಫಿಕ್ ಪ್ರಾಂತ್ಯದ ವಿಚಾರ ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಲು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜೂನ್ 24 ಮತ್ತು 25 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಜೂನ್ 24 ರಿಂದ 30 ರ ವರೆಗೆ ಭಾರತ - ಪೆಸಿಫಿಕ್ ವಲಯದಲ್ಲಿ ಪಾಂಪಿಯೋ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮಾರ್ಗನ್ ಓರ್ಟಗಸ್ ಮಾಹಿತಿ ನೀಡಿದ್ದಾರೆ. ಮೊದಲು ನವದೆಹಲಿಗೆ ನಂತರ ಶ್ರೀಲಂಕಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳಿಗೆ ಅವರು ಭೇಟಿ ನೀಡಲಿದ್ದಾರೆ. ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟು ಸಂಬಂಧದ ಭಿನ್ನಮತ ಶಮನಕ್ಕೆ ಅಮೆರಿಕ ಮುಕ್ತ ಮಾತುಕತೆಗೆ ಸಿದ್ಧವಿದೆ ಎಂದೂ ಸಹ ಪಾಂಪಿಯೋ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕ ಸಾಮಾನ್ಯ ಆದ್ಯತಾ ವ್ಯವಸ್ಥೆಯ (ಜಿಎಸ್ಪಿ) ಪಟ್ಟಿಯಿಂದ ಭಾರತವನ್ನು ತೆಗೆದು ಹಾಕಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್.ಜೈಶಂಕರ್ ತಮ್ಮ ಪ್ರಬಲ ಪಾಲುದಾರರಾಗಿದ್ದಾರೆ ಎಂದು ಪಾಂಪಿಯೋ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.