ನೊಂದಾಯಿತವಲ್ಲದ ರೇಸಾರ್ಟ, ಹೋಮ್ ಸ್ಟೇಗಳನ್ನು
ಪತ್ತೆ ಹಚ್ಚಿ ಅಗತ್ಯ ಕ್ರಮ ಕೈಗೊಳ್ಳಿ: ತಹಶೀಲ್ದಾರ ವಿಠ್ಠಲ್ ಚೌಗಲಾ
ಕೊಪ್ಪಳ 18 : ತಾಲ್ಲೂಕಿನ ನೊಂದಾಯಿತವಲ್ಲದ ರೇಸಾರ್ಟ, ಹೋಮ್ ಸ್ಟೇಗಳನ್ನು ಪತ್ತೆ ಹಚ್ಚಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ತಹಶೀಲ್ದಾರ ವಿಠ್ಠಲ್ ಚೌಗಲಾ ಹೇಳಿದರು.
ಅವರು ಮಂಗಳವಾರ ಕೊಪ್ಪಳ ತಹಶೀಲ್ದಾರ ಕಛೇರಿಯಲ್ಲಿ ತಾಲ್ಲೂಕಿನ ರೇಸಾರ್ಟ, ಹೋಮ್ ಸ್ಟೇಗಳ ತೆರವುಗೊಳಿಸುವ ಕುರಿತಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಡಿದರು.
ಕೊಪ್ಪಳ ತಾಲ್ಲೂಕ ವ್ಯಾಪ್ತಿಯಲ್ಲಿನ ದಾಖಲೆಗಳಿಲ್ಲದಿರುವ ರೇಸಾರ್ಟ, ಹೋಮ್ ಸ್ಟೇಗಳ ತೆರವುಗೊಳಿಸುವ ಕುರಿತು ವಿವಿಧ ಇಲಾಖಾ ಅಧಿಕಾರಿಗಳನ್ನು ಒಳಗೊಂಡಂತೆ ತಾಲ್ಲೂಕ ಮಟ್ಟದ ತಂಡವನ್ನು ರಚನೆ ಮಾಡಿ ಕೊಪ್ಪಳ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ತಾಲ್ಲೂಕ ವ್ಯಾಪ್ತಿಯಲ್ಲಿ ಸೂಕ್ತ ಪರವಾನಿಗೆ ಇಲ್ಲದೇ ಹೋಮ್ ಸ್ಟೇ ರೇಸಾರ್ಟಗಳನ್ನು ನಡೆಸುತ್ತಿರುವ ಬಗ್ಗೆ ಮಾಹಿತಿ ಇದ್ದು, ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಪ್ರವಾಸೋಧ್ಯಮ ಇಲಾಖೆ, ಅಬಕಾರಿ ಇಲಾಖೆ, ಪೋಲೀಸ್ ಇಲಾಖೆ, ಅರಣ್ಯ ಇಲಾಖೆ ಮತ್ತು ಜೇಸ್ಕಾಂ ಇಲಾಖೆಗಳ ಅಧಿಕಾರಿಗಳು ಸಮನ್ವಯ ಸಾಧಿಸಿಕೊಂಡು ಕಾರ್ಯನಿರ್ವಹಿಸಿ ಎಲ್ಲಾ ರೇಸಾರ್ಟ ಮತ್ತು ಹೋಮ್ ಸ್ಟೇಗಳ ದಾಖಲೆಗಳನ್ನು ಪರೀಶೀಲಿಸಿ, ಅಧಿಕೃತ ಹಾಗೂ ಅನಧೀಕೃತವಿರುವ ಕುರಿತಂತೆ ಪಟ್ಟಿಯನ್ನು ತಯಾರಿಸಬೇಕು. ಈ ಕುರಿತು ರೇಸಾರ್ಟ ಹಾಗೂ ಹೋಮ್ ಸ್ಟೇಗಳ ಮಾಲೀಕರ ಜೊತೆಗೆ ಸಭೆಯನ್ನು ನಿಗಧಿಪಡಿಸಬೇಕು ಎಂದರು.ಸಾರ್ವಜನಿಕರ ಸುರಕ್ಷತೆ, ಪ್ರವಾಸಿಗರ ರಕ್ಷಣೆ, ಕಾನೂನು ಸೂವ್ಯವಸ್ಥೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸ್ಥಳಿಯ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಪ್ರವಾಸೋಧ್ಯಮ ಇಲಾಖೆ, ಅಬಕಾರಿ ಇಲಾಖೆ, ಪೋಲೀಸ್ ಇಲಾಖೆ, ಅರಣ್ಯ ಇಲಾಖೆ ಮತ್ತು ಜೇಸ್ಕಾಂ ಇಲಾಖೆಗಳ ಸಿಬ್ಬಂದಿಗಳನ್ನು ಒಳಗೊಂಡಂತೆ ತಂಡವನ್ನು ರಚನೆ ಮಾಡಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸೂಕ್ತ ಪರವಾನಿಗೆ ಇಲ್ಲದೇ ನಡೆಸುತ್ತಿರುವ ಎಲ್ಲಾ ರೇಸಾರ್ಟ ಮತ್ತು ಹೋಮ್ ಸ್ಟೇಗಳ ಮಾಲೀಕರಿಗೆ ನೋಟೀಸ್ ಜಾರಿಗೊಳಿಸಲು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಕ್ರಮ ವಹಿಸಬೇಕು. ಮುಂದಿನ ಏಳು ದಿನಗಳ ಒಳಗಾಗಿ ದಾಖಲೆಗಳನ್ನು ಪೂರೈಸದೇ ಇದ್ದಲ್ಲಿ ಅಂತಹ ಎಲ್ಲಾ ರೇಸಾರ್ಟ ಮತ್ತು ಹೋಮ್ ಸ್ಟೇಗಳ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ರೇಸಾರ್ಟ ಮತ್ತು ಹೋಮ್ ಸ್ಟೇಗಳನ್ನು ತೆರವುಗೊಳಿಸದೇ ಇದ್ದಲ್ಲಿ ಈ ಎಲ್ಲಾ ರೇಸಾರ್ಟ ಮತ್ತು ಹೋಮ್ ಸ್ಟೇಗಳ ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಲು ಸಭೆಯಲ್ಲಿ ತಿರ್ಮಾನಿಸಲಾಯಿತು.
ಸಭೆಯಲ್ಲಿ ಕೊಪ್ಪಳ ತಾಲ್ಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಸೇರಿದಂತೆ ಅಬಕಾರಿ ಇಲಾಖೆಯ ಅಬಕಾರಿ ನೀರೀಕ್ಷಕರು, ಪೋಲೀಸ್ ಇಲಾಖೆಯ ವೃತ್ತ ಆರಕ್ಷಕ ನೀರೀಕ್ಷಕರು, ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿಗಳು ಮತ್ತು ಜೇಸ್ಕಾಂ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.