ಐಟಿ ದಾಳಿ ದೇಶಕ್ಕೆ ಉತ್ತಮ ಸಂದೇಶ ನೀಡುತ್ತಿಲ್ಲ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ, ಅ.10:   ಐಟಿ ದಾಳಿ ದೇಶಕ್ಕೆ ಉತ್ತಮ ಸಂದೇಶ ನೀಡುತ್ತಿಲ್ಲ. ಆಯ್ದ ಪಕ್ಷ, ಆಯ್ದ ವ್ಯಕ್ತಿಯ ಮೇಲೆ ವೈಯಕ್ತಿಕ ಐಟಿ ದಾಳಿ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ್ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಯತ್ತ ಸಂಸ್ಥೆಗಳ ಮೇಲೆ ಜನರಿಗೆ ನಂಬಿಕೆ ಇತ್ತು. ಆದರೀಗ ಆ ನಂಬಿಕೆ ಕಡಿಮೆಯಾಗುತ್ತಿದೆ. ಆಯ್ದ ಪಕ್ಷ, ಆಯ್ದ ವ್ಯಕ್ತಿಯ ಮೇಲೆ ವೈಯಕ್ತಿಕ ಐಟಿ ದಾಳಿ ನಡೆಸಲಾಗುತ್ತಿದ್ದು, ದೇಶಕ್ಕೆ ಉತ್ತಮ ಸಂದೇಶ ರವಾನಿಸುತ್ತಿಲ್ಲ ಎಂದು ಅವರು ಕಿಡಿಕಾರಿದರು.  

ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ನಿವಾಸದ ಮೇಲೆ ಐಟಿ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಐಟಿ ದಾಳಿಯಲ್ಲಿ ವಿಶೇಷವಾಗಿ ರಾಜಕೀಯ ನಡೆಯುತ್ತಿದೆ. ಐಟಿ ರಿಟನ್ಸ್9 ಎಲ್ಲರೂ ತುಂಬುತ್ತಾರೆ. ಒಂದು ವೇಳೆ ತುಂಬದಿದ್ದರೆ ಅಂತಹವರಿಗೆ ನೋಟಿಸ್ ನೀಡಬೇಕು. ಆದರೆ, ಅದನ್ನು ಬಿಟ್ಟು ಚುನಾವಣೆ ಸಮಯದಲ್ಲೇ ಏಕೆ ಐಟಿ ದಾಳಿ ನಡೆಸುತ್ತದೆ ? ಎಂದು ಅವರು ಪ್ರಶ್ನಿಸಿದರು.  

ಪರಮೇಶ್ವರ ಜೊತೆಗೆ ತಾವು ಮಾತಾಡಿದ್ದು, ಐಟಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿರುವುದಾಗಿ ತಿಳಿಸಿದ್ದಾರೆ.  ಕಾಂಗ್ರೆಸ್ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವರನ್ನು ಹೆದರಿಸುವ ತಂತ್ರ ನಡೆಯುತ್ತಿದೆ ಎಂದು ದೂರಿದರು. 

ವಿರೋಧ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇದು ರೂಟೀನ್ ವಿಚಾರ, ಪಕ್ಷದ ಮುಖಂಡರ ಬೆಂಬಲದೊಂದಿಗೆ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಸಾಮಾನ್ಯವಾಗಿ ಸಿಎಲ್ಪಿ ನಾಯಕರಾದವರು ವಿಪಕ್ಷ ನಾಯಕರಾಗುತ್ತಾರೆ ಎಂದು ಸಮಜಾಯಿಷಿ ನೀಡಿದರು.