ವಿಕ್ರಂ ಸಾರಾಭಾಯಿ ಶತಮಾನೋತ್ಸವಕ್ಕೆ ಇಸ್ರೋ ಸಜ್ಜು

ಚೆನ್ನೈ, ಆ 9     ಡಾ ವಿಕ್ರಂ ಸಾರಾಭಾಯಿ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ) ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 

ತಜ್ಞರಿಂದ ವಿಚಾರ ಸಂಕಿರಣ, ವಸ್ತುಪ್ರದರ್ಶನ, ಶಾಲಾ ಮಕ್ಕಳಿಗೆ ಸ್ಪರ್ದೆ, ಪತ್ರಿಕೋದ್ಯಮ ಪ್ರಶಸ್ತಿ ಮೊದಲಾದ ಕಾರ್ಯಕ್ರಮಗಳನ್ನು ಇಸ್ರೋ ಆಯೋಜಿಸಲಿದೆ.  

ದೇಶಾದ್ಯಂತ ಆಯ್ದ ನೂರು ನಗರಗಳಲ್ಲಿ 2019 ರ ಆಗಸ್ಟ್ 12 ರಿಂದ 2020 ರ ಇದೇ ದಿನದವರೆಗೆ ಕಾರ್ಯಕ್ರಮಗಳು ನಡೆಯಲಿವೆ. 

ಆಗಸ್ಟ್ 12 ರಂದು ಡಾ ಸಾರಾಭಾಯಿ ಅವರ ಜನ್ಮಸ್ಥಳವಾದ ಅಹಮದಾಬಾದ್ ನಲ್ಲಿ ಉದ್ಘಾಟನಾ ಸಮಾರಂಭ ಏಪರ್ಾಡಾಗಿದೆ ಎಂದು ಇಸ್ರೋ ಪ್ರಕಟಣೆ ತಿಳಿಸಿದೆ. 

ಬಸ್ ನಲ್ಲಿನ ವಸ್ತುಪ್ರದರ್ಶನ "ಚಕ್ರದಲ್ಲಿ ಅಂತರಿಕ್ಷ" ಕ್ಕೆ ಚಾಲನೆ ನೀಡುವ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ಇಸ್ರೋ, ಬಾಹ್ಯಾಕಾಶ ಇಲಾಖೆ, ಅಣು ಇಂಧನ ಇಲಾಖೆಯ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.  

ಒಂದು ವರ್ಷದ ಕಾರ್ಯಕ್ರಮದ ಸಮಾರೋಪ ಸಮಾರಂಭ 2020 ರ ಆಗಸ್ಟ್ 12 ರಂದು ತಿರುವನಂತಪುರದಲ್ಲಿ ನಡೆಯಲಿದೆ.