ಇಸ್ರೋ ಮುಖ್ಯಸ್ಥ ಸಿವನ್ ಗೆ, ಅಬ್ದುಲ್ ಕಲಾಂ ಪ್ರಶಸ್ತಿ ಪ್ರದಾನ

ಚೆನ್ನೈ, ಆಗಸ್ಟ್ 22       ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ - ಇಸ್ರೋ  ಅಧ್ಯಕ್ಷ ಡಾ,  ಕೆ ಶಿವನ್  ಅವರಿಗೆ ತಮಿಳುನಾಡು  ರಾಜ್ಯ ಸರ್ಕಾರ  ಡಾ. ಎಪಿಜೆ ಅಬ್ದುಲ್  ಕಲಾಂ   ಪುರಸ್ಕಾರವನ್ನು   ಗುರುವಾರ ಪ್ರದಾನ ಮಾಡಿದೆ. 

ಡಾ. ಶಿವನ್  ಅವರ ನಾಯಕತ್ವದಲ್ಲಿ   ದೇಶದ  ಅತ್ಯಂತ  ಮಹತ್ವದ  ಚಂದ್ರಯಾನ-2 ಗಗನ ನೌಕೆಯನ್ನು ಕಳೆದ  ಜುಲೈ 22 ರಂದು  ನಭಕ್ಕೆ ಉಡಾಯಿಸಲಾಗಿದ್ದು, ಪ್ರಸ್ತುತ  ನೌಕೆ ಯಶಸ್ವಿಯಾಗಿ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿದ್ದು, ಸೆಪ್ಟಂಬರ್  7 ರಂದು  ಚಂದ್ರನ ಮೇಲ್ಮೈನ ದಕ್ಷಿಣ ಧೃವದಲ್ಲಿ ಇಳಿಸಲು ವೇದಿಕೆ ಸಜ್ಜುಗೊಂಡಿದೆ. 

ಶಿವನ್  ಅವರಿಗೆ   ತಮಿಳು ನಾಡು ರಾಜ್ಯ ಸರ್ಕಾರ   ಸ್ವಾತಂತ್ರ್ಯೋತ್ಸವ ದಿನದಂದು ಈ ಪ್ರಶಸ್ತಿಯನ್ನು ಪ್ರಕಟಿಸಿತ್ತು. 

ಚೆನ್ನೈನ  ಫೋರ್ಟ್ ಸೇಂಟ್ ಜಾರ್ಜ್ ನಲ್ಲಿ ನಡೆದ  ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಡಾ. ಶಿವನ್  ಅವರು ಪಾಲ್ಗೊಳ್ಳಲು ಸಾಧ್ಯವಾಗದ ಕಾರಣ,   ಮುಖ್ಯಮಂತ್ರಿ ಈಡಪ್ಪಾಡಿ ಪಳನಿಸ್ವಾಮಿ  ಗುರುವಾರ ಸಚಿವಾಲಯದಲ್ಲಿ  ನಡೆದ  ಕಾರ್ಯಕ್ರಮದಲ್ಲಿ  ಪ್ರಶಸ್ತಿ ಪ್ರದಾನ ಮಾಡಿದರು.  

ಮೂಲತಃ  ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯವರಾದ ಡಾ. ಶಿವನ್  ಕ್ಷಿಪಣಿ ಮಾನವ ಎಂದು  ಜನಜನಿತರಾಗಿದ್ದಾರೆ ಎಂದು  ಪ್ರಶಸ್ತಿ ಪತ್ರದಲ್ಲಿ  ಹೇಳಲಾಗಿದೆ. 

ಇದಕ್ಕೂ ಮುನ್ನ  ವಿಮಾನ ನಿಲ್ದಾಣದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಶಿವನ್,  ಚಂದ್ರಯಾನ -2 ಗಗನ ನೌಕೆಯಲ್ಲಿರುವ ಲ್ಯಾಂಡರ್ ಸೆಪ್ಟೆಂಬರ್  7 ರಂದು  ಮಧ್ಯರಾತ್ರಿ 1.55ಕ್ಕೆ  ಚಂದ್ರನ ಮೇಲೆ  ಇಳಿಯಲಿದೆ ಎಂದು ತಿಳಿಸಿದರು. 

ಭಾರತದ ಚಂದ್ರಯಾನ-2 ಯೋಜನೆಯನ್ನು  ಇಡೀ ವಿಶ್ವವೇ ಕುತೂಹಲದಿಂದ ಗಮನಿಸುತ್ತಿದೆ ಇಸ್ರೋ, ಚಂದ್ರಯಾನ- 3 ಯೋಜನೆ ಆರಂಭಿಸಲು ಯೋಜಿಸಿದೆ ಎಂದು ಸಿವನ್ ಹೇಳಿದರು. 

ಚಂದ್ರಯಾನ -2 ಯೋಜನೆಯಲ್ಲಿ ಮಹಿಳಾ ವಿಜ್ಞಾನಿಯೊಬ್ಬರು  ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ  ಮತ್ತಷ್ಟು ಮಹಿಳೆಯರಿಗೆ  ಹೊಣೆಗಾರಿಕೆ ವಹಿಸಲಾಗುವುದು. ಪ್ರತಿಭಾವಂತರನ್ನು  ಗುರುತಿಸಿ ಅವಕಾಶ ಕಲ್ಪಿಸಬೇಕು  ಈ ವಿಚಾರದಲ್ಲಿ ಮಹಿಳೆ ಪುರುಷ ಎಂಬ ತಾರತಮ್ಯ ಮಾಡುವುದಿಲ್ಲ ಎಂದರು.