ಶ್ರೀನಗರ, ಫೆ 15, ಜಮ್ಮು ಕಾಶ್ಮೀರಕ್ಕೆ ಸ್ವಾಯತ್ತತೆ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ಆರು ತಿಂಗಳು ಕಳೆದಿದ್ದರೂ, ವೇಗದ ಅಂತರ್ಜಾಲ ಮತ್ತು ಬ್ರಾಡ್ ಬ್ಯಾಂಡ್ ಸೇವೆಯನ್ನು ಸ್ಥಗಿತ ಮುಂದುವರಿದಿದೆ. ಇತ್ತೀಚೆಗೆ ಶ್ರೀನಗರಕ್ಕೆ ಭೇಟಿ ನೀಡಿದ್ದ ವಿದೇಶಿ ಪ್ರತಿನಿಧಿಗಳ ಎರಡನೇ ನಿಯೋಗ ಕೂಡ, ಕಣಿವೆಯಲ್ಲಿ ಅಂತರ್ಜಾಲ ಸೇವೆಯನ್ನು ಪುನಾರಂಭಿಸಬೇಕು ಎಂಬ ಸಲಹೆ ನೀಡಿತ್ತು. ಸದ್ಯ ಕಣಿವೆಯಲ್ಲಿ ಲಭ್ಯವಿರುವ 2 ಜಿ ಅಂತರ್ಜಾಲ ಸೇವೆಯಿಂದ ಇ-ಮೇಲ್ ಗಳನ್ನು ಕೂಡ ಪರಿಶೀಲಿಸಲು ಕಷ್ಟವಾಗಿದೆ. 300 ಸರ್ಕಾರಿ ವೆಬ್ ಸೈಟ್ ಗಳನ್ನು ಹೊರತುಪಡಿಸಿ, ಎಲ್ಲಾ ಸಾಮಾಜಿಕ ಜಾಲತಾಣಗಳ ಸೈಟ್ ಗಳ ಬಳಕೆಯ ಮೇಲೆ ನಿರ್ಬಂಧ ಹೇರಲಾಗಿದೆ.
ಇದರಿಂದ ಮಾಧ್ಯಮ ಪ್ರತಿನಿಧಿಗಳು, ವೈದ್ಯರು, ವಿದ್ಯಾರ್ಥಿಗಳು ಮತ್ತು ಇತರ ವೃತ್ತಿಪರರು ಪರದಾಡುವಂತಾಗಿದೆ. 2018ರ ಆಗಸ್ಟ್ 5ರಂದು ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ, ಜಮ್ಮು ಕಾಶ್ಮೀರ ಹಾಗೂ ಲಡಾಕ್ ಎಂಬ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನು ರಚಿಸಿತ್ತು. ಈ ಆದೇಶ ಹೊರಬಿದ್ದ ನಂತರ ಈ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಭದ್ರತೆ ನಿಯೋಜಿಸಲಾಗಿದ್ದು, ಪ್ರತಿಭಟನೆ, ಘರ್ಷಣೆಗಳನ್ನು ತಡೆಯಲು ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.