ನವದೆಹಲಿ, ಮೇ ೧೦, ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಹರಡುವಿಕೆ ಆರಂಭಗೊಂಡಾಗ ಕೋವಿಡ್ -೧೯ ರೋಗಿಗಳಿಗಾಗಿ ಮೀಸಲಿಟ್ಟ ಆಸ್ಪತ್ರೆಗಳಲ್ಲಿ ಒಂದು ಲಕ್ಷ ೩೦ ಸಾವಿರ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇಲ್ಲಿಯವರೆಗೆ, ಈ ಹಾಸಿಗೆಗಳ ಪೈಕಿ ಕೇವಲ ಶೇ. ೧.೫ ರಷ್ಟು ಮಾತ್ರ ಬಳಸಲಾಗಿದೆ. ಭಾರತದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕೊರೊನಾ ಹರಡುತ್ತಿದೆ. ಜೊತೆಗೆ ಸೋಂಕಿಗೆ ಒಳಗಾದವರು ತ್ವರಿತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರೊನಾ ವಿರುದ್ದ ನಡೆಯುತ್ತಿರುವ ಸಮರದಲ್ಲಿ ಭಾರತ ಯಶಸ್ಸು ಸಾಧಿಸಲಿದೆ ಎಂಬುದು ತಜ್ಞರ ಆಶಯವಾಗಿದೆ.
ಕೋವಿಡ್ ಆಸ್ಪತ್ರೆಗಳಲ್ಲಿ ಭಾರಿ ಸಂಖ್ಯೆಯ ಹಾಸಿಗೆಗಳು ಖಾಲಿಯಾಗಿ ಉಳಿದಿವೆ. ಈ ಕುರಿತು ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಕೋವಿಡ್ ಆಸ್ಪತ್ರೆಗಳಲ್ಲಿ ರೋಗಿಗಳ ಹೆಚ್ಚಿನ ಒತ್ತಡವಿಲ್ಲ. ದೇಶಾದ್ಯಂತ ೧ ಲಕ್ಷ, ೩೦ ಸಾವಿರ ಹಾಸಿಗೆ ಸಿದ್ದಪಡಿಸಿಕೊಂಡಿದ್ದರೂ, ಕೇವಲ ಎರಡು ಸಾವಿರ ಹಾಸಿಗೆಗಳು ಮಾತ್ರ ಬಳಸಲಾಗಿದೆ. ಲಾಕ್ ಡೌನ್ ಮೂರನೇ ಅವಧಿಯಲ್ಲಿ ಕೆಲ ಸಡಿಲಿಕೆಗಳನ್ನು ನೀಡಲಾಗಿದೆ. ಮತ್ತೊಂದೆಡೆ, ಮುಂದಿನ ಕೆಲವು ದಿನಗಳಲ್ಲಿ ಪ್ರಕರಣಗಳು ಯಾವ ಸ್ವರೂಪದಲ್ಲಿ ಹೆಚ್ಚಳಗೊಳ್ಳಬಹುದು ಎಂದು ಸರ್ಕಾರ ಆಲೋಚನೆ ನಡೆಸುತ್ತಿದೆ. ಕೋವಿಡ್ ಚಿಕಿತ್ಸೆಗಾಗಿ ಮೀಸಲಾಗಿರುವ ಆಸ್ಪತ್ರೆಗಳಲ್ಲಿ ೯೯,೦೦೦ ಬೆಡ್ ಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ ೩೫,೦೦೦ ಬೆಡ್ ಗಳಿಗೆ ಐಸಿಯು ಸೌಲಭ್ಯ ಕಲ್ಪಿಸಲಾಗಿದೆ. ೧.೩೦ ಲಕ್ಷ ಹಾಸಿಗೆಗಳನ್ನು ಸರ್ಕಾರಿ ಆಸ್ಪತ್ರೆಗಳು ಹೊಂದಿದ್ದು, ಶೇ. ೧೦ ರಷ್ಟು ಹಾಸಿಗೆಗಳು ಮಾತ್ರ ಮೆಟ್ರೊ ನಗರಗಳಲ್ಲಿನ ಖಾಸಗಿ ಆಸ್ಪತ್ರೆಗಳು ಹೊಂದಿವೆ. ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರಸ್ತುತ ದೇಶಾದ್ಯಂತ ೯೭೦ ಆಸ್ಪತ್ರೆಗಳಿವೆ. ೨,೩೦೦ ಕೋವಿಡ್ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.