ಲೋಕದರ್ಶನ ವರದಿ
ರಾಮದುರ್ಗ 20: ನದಿ ಪ್ರವಾಹದಿಂದ ರಸ್ತೆಗಳು, ಬ್ರೀಡ್ಜ್ ಕಂ ಬ್ಯಾರೇಜ್ಗಳು ಹಾನಿಗೊಳಗಾಗಿದ್ದು, ತಾಲೂಕಿನ ಎಲ್ಲ ರಸ್ತೆಗಳು, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸರಕಾರ ಬದ್ಧವಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಭರವಸೆ ನೀಡಿದರು.
ತಾಲೂಕಿನ ಹಲಗತ್ತಿಯಿಂದ ಮೂಲಂಗಿ ಮಾರ್ಗವಾಗಿ ಹಿರೇತಡಸಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಸುಮಾರು 2 ಕೋಟಿ ಹಾಗೂ ಹೊಸಕೇರಿಯಿಂದ ಬೆನ್ನೂರ ವರೆಗೆ 3 ಕೋಟಿ ವೆಚ್ಚದಲ್ಲಿ ರಸ್ತೆ
ಸುಧಾರಣೆ ಕಾಮಗಾರಿಗೆ ರವಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹೊಸಕೇರಿ ಗ್ರಾಮದ ಬಸವೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 10 ಲಕ್ಷ ಹಾಗೂ ಅರಳಿಕಟ್ಟಿಮಠದ ಅಭಿವೃದ್ಧಿಗೆ 50 ಲಕ್ಷ ಬೇಡಿಕೆ ಇಟ್ಟಿದ್ದು, ಗ್ರಾಮಸ್ಥರ ಬೇಡಿಕೆಗಳನ್ನು ಹಂತ ಹಂತವಾಗಿ ಇಡೇರಿಸುತ್ತೇನೆ. ತಾಲೂಕಿನ ಅಭಿವೃದ್ಧಿ ವಿಷಯಲ್ಲಿ ಪಕ್ಷಾತೀತವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುತ್ತೇನೆ. ತಾಲೂಕಿನ ಜನತೆ ಭಯಪಡುವ ಅಗತ್ಯತೆ ಇಲ್ಲವೆಂದು ಹೇಳಿದರು.
ಸಂತ್ರಸ್ಥರಿಗೆ ಬಿಎಸ್ವೈ ಕೊಡುಗೆಃ ಮಲಪ್ರಭಾ ನದಿ ಪ್ರವಾಹ ಸೇರಿದಂತೆ ರಾಜ್ಯದಲ್ಲಿ ಪ್ರವಾಹದಿಂದ ಸಾಕಷ್ಟು ನಿರಾಶ್ರಿತರ ಬದುಕು ಚಿಂತಾಜನಕವಾಗಿದ್ದು, ಅವರಿಗೆ ಸೂರು ಒದಗಿಸುವ ಉದ್ದೇಶದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಎನ್ಡಿಆರ್ಏಫ್ ನಿಯಮದ ಅನುದಾನ ಸೇರಿ ರಾಜ್ಯದ ಬೊಕ್ಕಸದಿಂದ ಎ.ಬಿ ಕೆಟಗೇರಿ ಅಡಿಯಲ್ಲಿ ಸಮೀಕ್ಷೆಗೊಂಡ ಎಲ್ಲ ಮನೆಗಳ ನಿರ್ಮಾಣಕ್ಕೆ 5 ಲಕ್ಷ ಹಾಗೂ ಅಲ್ಪ ಸ್ವಲ್ಪ ಮನೆ ಬಿದ್ದವರಿಗೆ ನೀಡಲಾಗುತ್ತಿರುವ 25 ಸಾವಿರ ಪರಿಹಾರದ ಹಣವನ್ನು 50 ಸಾವಿರಕ್ಕೆ ಹೆಚ್ಚಿಸಲಾಗಿದ್ದು, ಸೂಕ್ತ ಬೆಳೆ ಪರಿಹಾರವನ್ನು ನೀಡಲು ಸರಕಾರ ನಿರ್ಧರಿಸಿದ್ದು ಬಿಎಸ್ವೈ ಅವರು ಸಂತ್ರಸ್ಥರಿಗೆ ಕೊಡುಗೆ ನೀಡಿದ್ದಾರೆ ಎಂದರು.
ಧನಲಕ್ಷ್ಮೀ ಸಕ್ಕರೆ ಕಾರ್ಖಾನೆಯ ನಿರ್ಧೆಶಕರಾದ ಬಿ.ಎಸ್. ಬೆಳವಣಕಿ, ಐ.ಎಸ್. ಹರನಟ್ಟಿ, ಮಾಜಿ ತಾ.ಪಂ ಅಧ್ಯಕ್ಷ ಎಸ್.ಸಿ ಕಿತ್ತಲಿ, ಎಪಿಎಂಸಿ ಸದಸ್ಯ ಪ್ರಕಾಶ ಬರದೇಲಿ ತಾ.ಪಂ ಸದಸ್ಯ ಮಲ್ಲಪ್ಪ ಗಿರಿಯನ್ನವರ, ಗುತ್ತಿಗೆದಾರರಾದ ವಿಜಯ ಶೆಟ್ಟಿ, ಎಂ.ಎಂ. ಆತಾರ, ಲೋಕೋಪಯೋಗಿ ಎಇಇ ಝಡ್ ಎಂ. ಸೊಲ್ಲಾಪೂರ, ಜೆಇ ರವಿಕುಮಾರ, ಗ್ರಾ.ಪಂ ಸದಸ್ಯರಾದ ಶಿವಪ್ಪ ಕಿತ್ತಲಿ, ಲಕ್ಷ್ಮೀ ಭಜಂತ್ರಿ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಇತರರಿದ್ದರು. ಗ್ರಾ.ಪಂ ಸದಸ್ಯ ಫಕೀರಪ್ಪ ಬೆಳವಣಕಿ ಸ್ವಾಗತಿಸಿ ವಂದಿಸಿದರು.