ಲಕ್ನೋ, ಜೂನ್ ೨೬, ಉತ್ತರ ಪ್ರದೇಶ ಸರ್ಕಾರ ತಮ್ಮ ವಿರುದ್ದ ಯಾವುದೇ ಕ್ರಮ ಕೈಗೊಂಡರೂ ರಾಜ್ಯದಲ್ಲಿ ನಡೆಯುತ್ತಿರುವ ವಾಸ್ತವ ಸ್ಥಿತಿ ಗತಿಯನ್ನು ಧೈರ್ಯವಾಗಿ ಜನರ ಮುಂದಿರಿಸಲಿದ್ದೇನೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಶುಕ್ರವಾರ ಟ್ವೀಟರ್ ಮೂಲಕ. ರಾಜ್ಯ ಸರ್ಕಾರದ ವಿರುದ್ಧ ಕೆಂಡ ಕಾರಿದ್ದಾರೆ. ಜನಸೇವಕಿಯಾಗಿ ಉತ್ತರ ಪ್ರದೇಶ ಜನರ ಹಿತರಕ್ಷಣೆ ನನ್ನ ಕರ್ತವ್ಯ. ಸತ್ಯಗಳನ್ನು ರಾಜ್ಯದ ಜನರ ಮುಂದಿಡುವುದು ನನ್ನ ಜವಬ್ದಾರಿಯಾಗಿದೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ಸ್ತುತಿಸುವುದು ನನ್ನ ಕೆಲಸವಲ್ಲ. ರಾಜ್ಯ ಸರ್ಕಾರ ಅನಗತ್ಯವಾಗಿ ನನ್ನನ್ನು ಬೆದರಿಸುವ ಮೂಲಕ ಸಮಯ ವ್ಯರ್ಥ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು. ನನ್ನ ವಿರುದ್ದ ಏನೇ ಕ್ರಮಗಳನ್ನು ಜರುಗಿಸಿದರೂ ಹೆದರುವುದಿಲ್ಲ. ನಾನು ಕೆಲವು ನಾಯಕರಂತೆ ಬಿಜೆಪಿ ಏಜೆಂಟ್ ಅಲ್ಲ. ಇಂದಿರಾ ಗಾಂಧಿ ಅವರ ಮೊಮ್ಮಗಳು ಎಂದು ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ಸೇರಿದಂತೆ ಹಲವು ಅಂಶಗಳ ಬಗ್ಗೆ ಪ್ರಿಯಾಂಕಾ ಗಾಂಧಿ ಯೋಗಿ ಅದಿತ್ಯನಾತ್ ಸರ್ಕಾರದ ವಿರುದ್ದ ಧ್ವನಿ ಎತ್ತಿದ್ದಾರೆ. ಕಾನ್ಪುರದ ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ೫೭ ಮಂದಿ ಬಾಲಕಿಯರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಪ್ರಿಯಾಂಕ ಭಾನುವಾರ ತಮ್ಮ ಪೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದರು. ಈ ಪೈಕಿ ಇಬ್ಬರು ಬಾಲಕಿಯರು ಗರ್ಭವತಿಯರಾಗಿದ್ದು, ಒಬ್ಬರಿಗೆ ಹೆಚ್ ಐವಿ ಪಾಸಿಟಿವ್ ಎಂದು ಆಕೆ ತಿಳಿಸಿದ್ದರು. ಆದರೆ, ರಾಜ್ಯ ಮಕ್ಕಳ ಹಕ್ಕುಗಳ ಸಮಿತಿ ಗುರುವಾರ ಪ್ರಿಯಾಂಕ ಅವರಿಗೆ ನೋಟೀಸ್ ಜಾರಿ ಮಾಡಿದೆ. ಬಾಲಕಿಯರ ಆಶ್ರಮದ ಬಗ್ಗೆ ದಾರಿತಪ್ಪಿಸುವಂತಹ ಹೇಳಿಕೆ ನೀಡಿದ್ದಾರೆ, ಬಗ್ಗೆ ಮೂರು ದಿನಗಳಲ್ಲಿ ಉತ್ತರ ನೀಡಬೇಕೆಂದು ತಾಕೀತು ಮಾಡಲಾಗಿದೆ.ಕೊರೊನಾದಿಂದಾಗಿ ಆಗ್ರಾ ಆಸ್ಪತ್ರೆಗೆ ದಾಖಲಾದ ೪೮ ಗಂಟೆಗಳಲ್ಲಿ ೨೮ ಜನರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯ ತುಣಕನ್ನು ಜತೆ ಮಾಡಿ ಪ್ರಿಯಾಂಕ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಆಗ್ರಾ ಜಿಲ್ಲಾಧಿಕಾರಿ ಪ್ರಭು ನಾರಾಯಣ ಸಿಂಗ್ ಟ್ವೀಟ್ ಹಿಂಪಡೆಯುವಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಆದರೆ ಇದನ್ನು ತಳ್ಳಿಹಾಕಿರುವ ಪ್ರಿಯಾಂಕಾ ಗಾಂಧಿ, ಆಗ್ರಾದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ ಶೇಕಡಾ ೬.೮ ರಷ್ಟಿದ್ದು, ದೆಹಲಿ ಮತ್ತು ಮುಂಬೈಗಿಂತ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಕುರಿತು ವಿವರಣೆ ಕೋರಿದ್ದಾರೆ.