ನೋಟಿಸ್‌ಗೆ ಉತ್ತರಿಸುವೆ, ರಾಜ್ಯ ಬಿಜೆಪಿಯ ಸ್ಥಿತಿಗತಿಯ ಮಾಹಿತಿ ತೆರೆದಿಡುವೆ: ಯತ್ನಾಳ

I will reply to notice: Yatnal

ಬೆಂಗಳೂರು: ಬಿಜೆಪಿ ಶಿಸ್ತು ಸಮಿತಿಯು ತಮಗೆ ನೀಡಿರುವ ನೋಟಿಸ್‌ಗೆ ಉತ್ತರ ನೀಡುವುದಾಗಿ ಮತ್ತು ಕರ್ನಾಟಕ ಬಿಜೆಪಿಯ ಸದ್ಯದ ಸ್ಥಿತಿಗತಿಯ ಮಾಹಿತಿ ನೀಡುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌/ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, 'ಬಿಜೆಪಿಯ ಶಿಸ್ತು ಸಮಿತಿ ಮುಖ್ಯಸ್ಥರು ನೀಡಿರುವ ನೋಟಿಸ್‌ಗೆ ಉತ್ತರ ನೀಡುತ್ತೇನೆ. ಕರ್ನಾಟಕ ಬಿಜೆಪಿಯ ಸದ್ಯದ ಸ್ಥಿತಿಗತಿಯ ಬಗ್ಗೆ ವಾಸ್ತವಾಂಶಗಳನ್ನು ತೆರೆದಿಡುತ್ತೇನೆ. ಹಿಂದುತ್ವ ಪರ ಮತ್ತು ಭ್ರಷ್ಟಾಚಾರ, ವಕ್ಫ್‌ ಆಸ್ತಿ ವಿಚಾರ, ಕುಟುಂಬ ರಾಜಕಾರಣದ ವಿರುದ್ಧದ ಹೋರಾಟದಲ್ಲಿ ನನ್ನ ಬದ್ಧತೆಯು ಅಚಲವಾಗಿ ಉಳಿಯಲಿದೆ' ಎಂದಿದ್ದಾರೆ.

ಪಕ್ಷದ ನಿಲುವುಗಳಿಗೆ ವಿರುದ್ಧವಾಗಿ ಮತ್ತು ರಾಜ್ಯ ನಾಯಕರ ವಿರುದ್ಧ ನಿರಂತರವಾಗಿ ಹೇಳಿಕೆ ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಬಿಜೆಪಿ ಸೋಮವಾರ ಶೋಕಾಸ್ ನೋಟಿಸ್‌ ನೀಡಿದೆ.

'ಎಲ್ಲ ವಿಚಾರಗಳಲ್ಲಿಯೂ ಪಕ್ಷದ ನಿಲುವನ್ನು ಧಿಕ್ಕರಿಸಿ, ನಾಯಕರ ವಿರುದ್ಧವೂ ಆರೋಪಗಳನ್ನು ಮಾಡಿದ್ದೀರಿ. ಇದು ಪಕ್ಷದ ಶಿಸ್ತಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಸಂಬಂಧ ಪಕ್ಷವು, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಾರದೇಕೆ ಎಂಬುದರ ಬಗ್ಗೆ 10 ದಿನಗಳ ಒಳಗೆ ವಿವರಣೆ ನೀಡಿ' ಎಂದು ಸೂಚನೆ ನೀಡಿದೆ.

ಯತ್ನಾಳ ಹಾಗೂ ವಿಜಯೇಂದ್ರ ಬಣಗಳ ಕಿತ್ತಾಟವು ಕೆಲವು ದಿನಗಳಿಂದ ತಾರಕಕ್ಕೇರಿದ್ದು, ಇದೀಗ ಹೈಕಮಾಂಡ್‌ ಅಂಗಳ ತಲುಪಿದೆ.

'ಯತ್ನಾಳ ಅವರು ಸೋನಿಯಾ ಮತ್ತು ರಾಹುಲ್‌ ಗಾಂಧಿ ಅವರಿಂದ ಸುಪಾರಿ ಪಡೆದಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಅವರು, ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಅವರನ್ನು ಪಕ್ಷದಿಂದ ಕೂಡಲೇ ಉಚ್ಛಾಟಿಸಬೇಕು' ಎಂದು ವಿಜಯೇಂದ್ರ ಪರ ಬಣ ಒತ್ತಾಯಿಸಿದೆ.